ADVERTISEMENT

ಹುಬ್ಬಳ್ಳಿ: ಭಗವದ್ಗೀತೆ ಅಭಿಯಾನ ಡಿ. 7ರಿಂದ; ಸ್ವರ್ಣವಲ್ಲೀ ಶ್ರೀ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 7:48 IST
Last Updated 29 ನವೆಂಬರ್ 2021, 7:48 IST
ಹುಬ್ಬಳ್ಳಿಯ ಹವ್ಯಕ ಭವನದಲ್ಲಿ ಭಾನುವಾರ ಸೋಂದಾ ಸ್ವರ್ಣವಲ್ಲೀ ಮಠದ ಗಂಗಾಧರೇಂದ್ರ ಸ್ವಾಮೀಜಿ ಭಗವದ್ಗೀತಾ ಅಭಿಯಾನದ ಪೂರ್ವಭಾವಿ ಸಭೆ ನಡೆಸಿದರು
ಹುಬ್ಬಳ್ಳಿಯ ಹವ್ಯಕ ಭವನದಲ್ಲಿ ಭಾನುವಾರ ಸೋಂದಾ ಸ್ವರ್ಣವಲ್ಲೀ ಮಠದ ಗಂಗಾಧರೇಂದ್ರ ಸ್ವಾಮೀಜಿ ಭಗವದ್ಗೀತಾ ಅಭಿಯಾನದ ಪೂರ್ವಭಾವಿ ಸಭೆ ನಡೆಸಿದರು   

ಹುಬ್ಬಳ್ಳಿ: ‘ಭಗವದ್ಗೀತಾ ಅಭಿಯಾನ 2007ರಿಂದ ಆರಂಭವಾಗಿದ್ದು, ಹದಿನೈದು ವರ್ಷಗಳಿಂದ ನಿರಂತರವಾಗಿ ನಡೆಯುತ್ತಾ ಬಂದಿದೆ. ಜನರಲ್ಲಿ ಭಗವದ್ಗೀತೆ ಕುರಿತು ಜಾಗೃತಿ ಮೂಡಬೇಕು ಹಾಗೂ ಅದರಿಂದ ಸಮಾಜದಲ್ಲಿ ಸುಖ–ಶಾಂತಿ ನೆಲೆಸಬೇಕು ಎನ್ನುವುದೇ ಇದರ ಉದ್ದೇಶ’ ಎಂದು ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಠದ ಗಂಗಾಧರೇಂದ್ರ ಸ್ವಾಮೀಜಿ ಹೇಳಿದರು.

ನಗರದ ಗೋಕುಲ ರಸ್ತೆಯ ಹವ್ಯಕ ಸಭಾಭವನದಲ್ಲಿ ಭಾನುವಾರ ಭಗವದ್ಗೀತಾ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಡಿ. 7ರಿಂದ ಅಭಿಯಾನ ಆರಂಭವಾಗಲಿದೆ. ಅಂದಿನಿಂದ ಏಳು ದಿನ ಎಲ್ಲರೂ ಮನೆಯಲ್ಲಿ ಗೀತೆಯ 3ನೇ ಅಧ್ಯಾಯ ಪಠಿಸಬೇಕು. ಕರ್ಮಯೋಗದ ಕುರಿತಾದ ಈ ಅಧ್ಯಾಯ ನಮ್ಮ ಕರ್ತವ್ಯದ ಕುರಿತು ಬೋಧಿಸುತ್ತದೆ. ಡಿ. 14ರಂದು ಗೀತೆಯ ಎಲ್ಲ 18 ಅಧ್ಯಾಯಗಳನ್ನು ಪಠಣ ಮಾಡಿ ಗೀತಾಜಯಂತಿ ಆಚರಿಸಲಿದ್ದಾರೆ’ ಎಂದರು.

‘ರಾಜ್ಯದ ಎಲ್ಲ ಪ್ರಮುಖ ಗೀತಾ ಪಠಣ ಕೇಂದ್ರಗಳಲ್ಲಿ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಗೀತಾ ಜಯಂತಿಯಂದು ಏಕಾಲದಲ್ಲಿಯೇ ಭಗವದ್ಗೀತೆ ಪಠಣ ನಡೆಯಲಿದೆ. ಹುಬ್ಬಳ್ಳಿಯಲ್ಲಿ 55, ಧಾರವಾಡದಲ್ಲಿ 30 ಗೀತಾ ಪಠಣ ಕೇಂದ್ರಗಳಿವೆ’ ಎಂದು ಹೇಳಿದರು.

ADVERTISEMENT

ಇದೇ ವೇಳೆ ಧಾರವಾಡ ಜಿಲ್ಲಾ ಭಗವದ್ಗೀತಾ ಸಮಿತಿ ರಚಿಸಲಾಯಿತು. ವಿಜಯ ಸಂಕೇಶ್ವರ (ಗೌರವಾಧ್ಯಕ್ಷ), ಜಿತೇಂದ್ರ ಮಜೇಥಿಯಾ (ಅಧ್ಯಕ್ಷ), ಎ.ಸಿ. ಗೋಪಾಲ (ಕಾರ್ಯಾಧ್ಯಕ್ಷ), ಅರವಿಂದ ಮತಗಿ (ಪ್ರಧಾನ ಸಂಚಾಲಕ), ರಾಜೀವ ಕುಲಕರ್ಣಿ, ಶ್ರೀಪತಿ ಹೆಗಡೆ, ವಿಜಯ ಕ್ಷೀರಸಾಗರ (ಸಂಚಾಲಕರು), ಸುದರ್ಶನ ಹೇಮಾದ್ರಿ (ಪ್ರಧಾನ ಕಾರ್ಯದರ್ಶಿ), ಸುನೀಲ ಗುಮಾಸ್ತೆ, ರಮೇಶ ಕದಂ (ಸಹ ಕಾರ್ಯದರ್ಶಿ), ವಿದ್ಯಾ ಹೆಗಡೆ (ಮಹಿಳಾ ಪ್ರಧಾನ ಸಂಚಾಲಕಿ), ಸುಮಾ ದೇಸಾಯಿ, ವಾಣಿ ಹಂದಿಗೋಳ, ರಾಧಾ ದೇಸಾಯಿ, ಮಧುರಾ ಹೆಗಡೆ (ಸಹ ಸಂಚಾಲಕರು), ವಿ.ಎಸ್‌.ವಿ. ಪ್ರಸಾದ್‌, ಆರ್‌.ಡಿ. ಕುಲಕರ್ಣಿ, ಶ್ರೀಕಾಂತ ಹೆಗಡೆ, ಟಿ.ಎಸ್‌. ಭಟ್ಟ (ಉಪಾಧ್ಯಕ್ಷರು) ಹಾಗೂ ಮನೋಹರ ಪರ್ವತಿ (ಮಾಧ್ಯಮ ವಕ್ತಾರ) ಸಮಿತಿಗೆ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.