ADVERTISEMENT

ಬಿಟ್ ಕಾಯಿನ್, ಡ್ರಗ್ಸ್ ಪ್ರಕರಣ: ಪ್ರಭಾವಿಗಳಿದ್ದರೆ ಹೆಸರೇಳಿ ಎಂದು ಸಿಎಂ ಸವಾಲು 

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2021, 8:54 IST
Last Updated 28 ಅಕ್ಟೋಬರ್ 2021, 8:54 IST
ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ   

ಹುಬ್ಬಳ್ಳಿ: 'ಬಿಟ್ ಕಾಯಿನ್ ಹಾಗೂ ಡ್ರಗ್ಸ್ ಪ್ರಕರಣದಲ್ಲಿ ಪ್ರಭಾವಿ ರಾಜಕಾರಣಿಗಳು ಭಾಗಿಯಾಗಿದ್ದರೆ ಅಂತಹವರ ಹೆಸರು ಹೇಳಿ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸವಾಲು ಹಾಕಿದರು.

ಪ್ರಕರಣ ಕುರಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾಡಿರುವ ಆರೋಪಕ್ಕೆ ಹುಬ್ಬಳ್ಳಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, 'ರಾಜ್ಯದ ತನಿಖಾ ಸಂಸ್ಥೆಗಳು ಪ್ರಕರಣದ ಸಮಗ್ರ ತನಿಖೆ ನಡೆಸಿವೆ. ಇದಾದ ಮೇಲೂ ಪ್ರಕರಣದ ತನಿಖೆಯನ್ನು ನಾವೇ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐಗೆ ವಹಿಸಿದ್ದೇವೆ. ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ' ಎಂದರು.

ರಾಜ್ಯದ ಪ್ರಭಾವಿ ರಾಜಕಾರಣಿಗಳು ಶಾಮೀಲಾಗಿರುವ ಡ್ರಗ್ಸ್ ಮತ್ತು ಬಿಟ್‌ ಕಾಯಿನ್‌ ಹಗರಣವನ್ನು ಮುಚ್ಚಿಹಾಕಲು ಯತ್ನಿಸಲಾಗುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

ADVERTISEMENT

ಚುನಾವಣೆ ಸಂದರ್ಭ ಪ್ರತಿಪಕ್ಷ ನಾಯಕರು ಯಾರದ್ದೋ‌ ಮುಖ‌ಮಸಿ ಮಾಡಬಾರದು: ಆರಗ ಜ್ಞಾನೇಂದ್ರ

ಡ್ರಗ್ಸ್‌ ಮತ್ತು ಬಿಟ್‌ ಕಾಯಿನ್‌ ಹಗರಣಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೃಹ ಮಂತ್ರಿ ಆರಗ ಜ್ಞಾನೇಂದ್ರ,ವಿಶೇಷವಾಗಿ ಇದರ ಬಗ್ಗೆ ತನಿಖೆ ಆಗುತ್ತಿದೆ. ಸಿಐಡಿ ಕಡೆಯಿಂದ ತನಿಖೆ ಆಗುತ್ತಿದೆ. ಈಗ ಹೇಳಿದರೆ ತನಿಖೆಗೆ ತೊಡಕಾಗುತ್ತದೆ. ನಮ್ಮ‌ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು ಮೂಲಕ್ಕೆ ಹೋಗುತ್ತಾರೆ ಎಂದರು.

ಪ್ರತಿಪಕ್ಷ ನಾಯಕರು ಚುನಾವಣೆ ಸಂದರ್ಭದಲ್ಲಿ ಯಾರದ್ದೋ‌ ಮುಖ‌ಮಸಿ ಮಾಡಬಾರದು, ಸಿಎಂ ಆಗಿದ್ದವರು. ಪಕ್ಷ ಮೀರಿ ಯೋಚಿಸಬೇಕಿದೆ. ವೇಗವಾಗಿ ಸ್ಟೇಟ್ ಮೆಂಟ್ ಮಾಡಬಾರದು. ಯಾರ ಬಗ್ಗೆ ಆರೋಪ ಎಂದು ಹೇಳಲ್ಲ. ಕಾಂಗ್ರೆಸ್ ಇರಬಹುದು, ಬಿಜೆಪಿಯರು ಇರಬಹುದು, ಕಾನೂನಿನ‌ ಸೂತ್ರದಡಿ ತರಲಾಗುತ್ತದೆ. ರೆಗ್ಯುಲರ್ ಪೊಲೀಸ್ ತನಿಖೆ ಆಗುತ್ತಿಲ್ಲ. ಪರಿಣಿತ ಪೊಲೀಸರ ತಂಡ ತನಿಖೆ ಮಾಡುತ್ತಿದೆ. ಎಲ್ಲವೂ ಊಹೆಯಿಂದ ಮಾತನಾಡಲು ಆಗಲ್ಲ. ಎಲ್ಲವೂ ಅಂತೆ ಕಂತೆ ಎಂದರು.

ಪೊಲೀಸ್ ಅಧಿಕಾರಿಗಳಿದ್ದರೂ ಹಿಡಿಯುತ್ತಾರೆ. ಇದು ಗಂಭೀರ ಪ್ರಕರಣ. ತನಿಖೆಯನ್ನೂ ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಜ್ಞಾನೇಂದ್ರ ಒತ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.