ADVERTISEMENT

ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ; ಬಿಜೆಪಿಯಲ್ಲಿ ಟಿಕೆಟ್‌ಗೆ ತೀವ್ರ ಪೈಪೋಟಿ

ಸತೀಶ ಬಿ.
Published 25 ನವೆಂಬರ್ 2025, 4:49 IST
Last Updated 25 ನವೆಂಬರ್ 2025, 4:49 IST
ಎಸ್‌.ವಿ.ಸಂಕನೂರ
ಎಸ್‌.ವಿ.ಸಂಕನೂರ   

ಹುಬ್ಬಳ್ಳಿ: ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ಮುಂದಿನ ವರ್ಷ ನಡೆಯಲಿದ್ದು, ಟಿಕೆಟ್‌ಗಾಗಿ ಬಿಜೆಪಿಯಲ್ಲಿ ಪೈಪೋಟಿ ಏರ್ಪಟ್ಟಿದೆ. ಹಲವು ಬಗೆಯ ಕಸರತ್ತು, ಲಾಬಿ ನಡೆದಿದೆ. ಈ ಕ್ಷೇತ್ರವು ಉತ್ತರ ಕನ್ನಡ, ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆ ಒಳಗೊಂಡಿದೆ.

ಇದೇ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ಸದಸ್ಯ ಎಸ್‌.ವಿ.ಸಂಕನೂರ ಅವರ ಅವಧಿ 2026ರ ನವೆಂಬರ್‌ನಲ್ಲಿ ಕೊನೆ ಆಗಲಿದೆ. ಅದಕ್ಕೂ ಮುನ್ನ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗವು ಮತದಾರರ ನೋಂದಣಿ ಅಭಿಯಾನ ಆರಂಭಿಸಿದೆ. 

2020ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಎಸ್‌.ವಿ.ಸಂಕನೂರ ಅವರು 23,857 ಮತಗಳನ್ನು ಪಡೆದು ಜಯ ಗಳಿಸಿದ್ದರು.  ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಡಾ. ಆರ್.ಎಂ.ಕುಬೇರಪ್ಪ 12,448 ಮತ, ಸ್ವತಂತ್ರ ಅಭ್ಯರ್ಥಿಯಾಗಿದ್ದ ಬಸವರಾಜ ಗುರಿಕಾರ 6188 ಮತ ಪಡೆದಿದ್ದರು. ಕಣದಲ್ಲಿ ಒಟ್ಟು 11 ಅಭ್ಯರ್ಥಿಗಳಿದ್ದರು.

ADVERTISEMENT

ಚುನಾವಣೆಗೆ ಸಂಬಂಧಿಸಿದಂತೆ ಆರ್‌.ಅಶೋಕ, ಸಿ.ಟಿ. ರವಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಗೋವಿಂದ ಕಾರಜೋಳ, ಬಿ.ಶ್ರೀರಾಮುಲು ಅವರನ್ನು ಒಳಗೊಂಡ ಸಮಿತಿ ಈಗಾಗಲೇ ಸಭೆ ನಡೆಸಿದ್ದು, ಆಕಾಂಕ್ಷಿಗಳ ಅಭಿಪ್ರಾಯ ಸಂಗ್ರಹಿಸಿದೆ. ಟಿಕೆಟ್‌ಗಾಗಿ ಧಾರವಾಡ ಜಿಲ್ಲೆಯಿಂದ 14 ಸೇರಿ ಕ್ಷೇತ್ರ ವ್ಯಾಪ್ತಿಯ ನಾಲ್ಕೂ ಜಿಲ್ಲೆಗಳಿಂದ ಒಟ್ಟು 28ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ.

ಎಸ್‌.ವಿ.ಸಂಕನೂರ ಅವರು ಸತತ ಎರಡು ಅವಧಿಗೆ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದು, ಪುನರಾಯ್ಕೆ ಬಯಸಿದ್ದಾರೆ. ಮಾಜಿ ಮೇಯರ್‌ಗಳು, ಮಹಾನಗರ ಪಾಲಿಕೆ ಸದಸ್ಯರು, ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಸೇರಿ ಹಲವರು ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.

‘ಎರಡು ಅವಧಿಯಲ್ಲಿ ಮಾಡಿದ ಕೆಲಸಗಳನ್ನು ಪರಿಗಣಿಸಿ, ಮೂರನೇ ಬಾರಿಗೆ ಪಕ್ಷದ ವರಿಷ್ಠರು ಅವಕಾಶ ನೀಡುವರು ಎಂಬ ವಿಶ್ವಾಸ ಇದೆ. ಪದವೀಧರರು, ನಿರುದ್ಯೋಗಿ ಪದವೀಧರರು, ಪದವೀಧರ ಶಿಕ್ಷಕರ ಬೇಡಿಕೆ ಈಡೇರಿಸಲು, ನ್ಯಾಯ ಕೊಡಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಅವರ ಸಮಸ್ಯೆಗೆ ಸ್ಪಂದಿಸಿದ್ದೇನೆ’ ಎಂದು ಎಸ್‌.ವಿ.ಸಂಕನೂರ ತಿಳಿಸಿದರು.

‘ಮೂರು ದಶಕಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿರುವೆ. ನಾನು ಟಿಕೆಟ್‌ಗೆ ಪ್ರಬಲ ಆಕಾಂಕ್ಷಿ. ಒಮ್ಮೆ ರಾಜ್ಯಸಭಾ ಸದಸ್ಯ ಸ್ಥಾನ, ಮೂರು ಬಾರಿ ಎಂಎಲ್‌ಸಿ ಟಿಕೆಟ್‌ ತಪ್ಪಿದೆ. ಈ ಬಾರಿ ಟಿಕೆಟ್‌ ನೀಡುವಂತೆ ಬೇಡಿಕೆ ಮಂಡಿಸಿದ್ದೇನೆ. ಕಾರ್ಯಕರ್ತರ ಒಲವು ನನ್ನ ಪರ ಇದೆ’ ಎಂದು ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಹೇಳಿದರು. 

ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಪ್ರತಿಕ್ರಿಯಿಸಿ, ‘ಎಸ್‌.ವಿ.ಸಂಕನೂರ  ಬದಲು ಬೇರೆಯವರಿಗೆ ಟಿಕೆಟ್ ನೀಡಬೇಕು ಎಂಬ ಚರ್ಚೆಗಳು ನಡೆದಿವೆ. ವಿದ್ಯಾರ್ಥಿ ದೆಸೆಯಿಂದ ಹೋರಾಟದಲ್ಲಿ ತೊಡಗಿದ್ದೇನೆ. ಎರಡು ಬಾರಿ ವಿಧಾನಸಭೆ ಚುನಾವಣೆ, ನಾಲ್ಕು ಮಹಾನಗರ ಪಾಲಿಕೆಗೆ ಸ್ಪರ್ಧಿಸಿದ್ದೇನೆ. ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದೇನೆ. ಎಲ್ಲವನ್ನೂ ಪರಿಗಣಿಸಿ ಅವಕಾಶ ನೀಡುವ ವಿಶ್ವಾಸ ಇದೆ. ಅಂತಿಮವಾಗಿ ವರಿಷ್ಠರ ತೀರ್ಮಾನಕ್ಕೆ ಬದ್ಧವಾಗಿರುತ್ತೇನೆ’ ಎಂದರು.    

ಅಭ್ಯರ್ಥಿ ಯಾರು ಎಂಬುದು ಇನ್ನೂ ತೀರ್ಮಾನ ಆಗಿಲ್ಲ. ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು ಈ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುವರು.
ತಿಪ್ಪಣ್ಣ ಮಜ್ಜಗಿ ಅಧ್ಯಕ್ಷ ಬಿಜೆಪಿ ಹು–ಧಾ ಮಹಾನಗರ ಜಿಲ್ಲಾ ಘಟಕ

ಧಾರವಾಡ ಜಿಲ್ಲೆಯ ಪ್ರಮುಖ ಆಕಾಂಕ್ಷಿಗಳು

ಎಸ್‌.ವಿ.ಸಂಕನೂರ ಲಿಂಗರಾಜ ಪಾಟೀಲ ಜಯತೀರ್ಥ ಕಟ್ಟಿ ಶಿವು ಹಿರೇಮಠ ಸುಧೀಂದ್ರ ದೇಶಪಾಂಡೆ  ವೀರಣ್ಣ ಸವಡಿ ರಾಜಣ್ಣ ಕೊರವಿ ವೀರೇಶ ಸಂಗಳದ ಡಾ.ವಿವೇಕ ಪಾಟೀಲ ರವೀಂದ್ರನಾಥ ಬಿ.ದಂಡಿನ  ಶಶಿಶೇಖರ ಡಂಗನವರ ಕಿರಣ ಉಪ್ಪಾರ ಸತೀಶ ನೂಲ್ವಿ ತಿಪ್ಪಣ್ಣ ಮಜ್ಜಗಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.