
ಧಾರವಾಡ: ರಾಜ್ಯದ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹಿಸಿ ಭಾರತೀಯ ಮಜ್ದೂರ್ ಸಂಘದ ಜಿಲ್ಲಾ ಘಟಕದವರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
‘ಎಲ್ಲ ಇಲಾಖೆಗಳಲ್ಲಿ ಒಳ ಗುತ್ತಿಗೆ ಹಾಗೂ ಹೊರ ಗುತ್ತಿಗೆ ಕಾರ್ಮಿಕ ಪದ್ಧತಿ ಕೈಬಿಡಬೇಕು. ಗುತ್ತಿಗೆ ಕಾರ್ಮಿಕರ ಕಾಯಂಗೊಳಿಸಬೇಕು. ಕಾರ್ಮಿಕರಿಗೆ ಇಪಿಎಫ್ ಅನ್ನು 7,500ಕ್ಕೆ ಹಾಗೂ ಇಎಸ್‌ಐ ವ್ಯಾಪ್ತಿಯ ಮಿತಿಯನ್ನು ಹೆಚ್ಚಿಸಿ ಹೆಚ್ಚು ಕಾರ್ಮಿಕರಿಗೆ ಸೌಲಭ್ಯ ಸಿಗುವಂತೆ ಮಾಡಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
‘ಆರೋಗ್ಯ ಇಲಾಖೆಯ ಹುದ್ದೆಗಳ ನೇಮಕಾತಿಗೆ ಮಂಜೂರಾತಿ ಪಡೆದು ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರನ್ನು ಕಾಯಂಗೊಳಿಸಲು ಕ್ರಮ ವಹಿಸಬೇಕು. ಕೆಎಸ್‍ಆರ್‌ಟಿಸಿ ನೌಕರರ 38 ತಿಂಗಳ ಹೆಚ್ಚುವರಿ ವೇತನ ಹಿಂಬಾಕಿ ನೀಡಬೇಕು ಎಂದು ಆಗ್ರಹಿಸಿದರು.
ಕಟ್ಟಡ ಕಾರ್ಮಿಕ ಮಂಡಳಿಯ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಎಲ್ಲ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯಡಿ ಸೌಲಭ್ಯ ನೀಡಬೇಕು’ ಎಂದರು.
‘ಅಂಗನವಾಡಿ, ಆಶಾ ಮತ್ತು ಬಿಸಿ ಊಟದ ಕಾರ್ಮಿಕರನ್ನು ಕಾಯಂಗೊಳಿಸಿ ಮಾಸಿಕ ಗೌರವಧನ ಹೆಚ್ಚಿಸಬೇಕು. ಕಾರ್ಮಿಕರ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು‘ ಎಂದು ಆಗ್ರಹಿಸಿದರು.
ಬಿಎಂಎಸ್ ಜಿಲ್ಲಾಧ್ಯಕ್ಷ ನರೇಂದ್ರ ಜಾಧವ, ಸಂಚಾಲಕ ಸಿ.ಟಿ. ಪಾಟೀಲ, ಸುರೇಶ ನಾಡಗೇರ, ತಾಹೀರಬಾನು ಮುಲ್ಲಾ, ಬಲಭೀಮ ಪೋದ್ದಾರ ಪಾಲ್ಗೊಂಡಿದ್ದರು.
ಮಹಿಳೆ ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಆಗ್ರಹ
ಧಾರವಾಡ: ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳ ತಡೆಗೆ ಕ್ರಮ ವಹಿಸಬೇಕು ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್) ಜಿಲ್ಲಾ ಸಮಿತಿಯವರು ಜಿಲ್ಲಾ ಪಂಚಾಯಿತಿ ಎದುರು ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
‘ಮಹಿಳೆಯರು-ಮಕ್ಕಳ ಮೇಲಿನ ಅತ್ಯಾಚಾರ ಗುಂಪು ಅತ್ಯಾಚಾರ ಕೊಲೆ ಆ್ಯಸಿಡ್ ದಾಳಿ ಕೌಟುಂಬಿಕ ದೌರ್ಜನ್ಯದಂತಹ ಘಟನೆಗಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಸಮಿತಿಯವರು ಆಗ್ರಹಿಸಿದರು.
‘ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಕೈಬಿಟ್ಟು ಸರ್ಕಾರಿ ಶಾಲೆಗಳನ್ನು ಬಲಪಡಿಸಿ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ ಖಾತ್ರಿಪಡಿಸಬೇಕು. ಉದ್ಯೋಗದ ಭದ್ರತೆಯನ್ನು ಖಾತ್ರಿಪಡಿಸಿ ಮತ್ತು ಉಚಿತ ಆರೋಗ್ಯ ಸೌಲಭ್ಯಗಳನ್ನು ಒದಗಿಸಬೇಕು. ಹೆಣ್ಣು ಮಕ್ಕಳಿಗೆ ಆತ್ಮ ರಕ್ಷಣೆಗಾಗಿ ಜೂಡೋ ಕರಾಟೆ ತರಬೇತಿ ನೀಡಬೇಕು’ ಎಂದು ಒತ್ತಾಯಿಸಿದರು.
‘ಮಧ್ಯಾಹ್ನದ ದಾಸೋಹವನ್ನು ಪದವಿ ಕಾಲೇಜುಗಳಿಗೂ ವಿಸ್ತರಿಸಬೇಕು. ಶುಚಿ ವಿತರಣಾ ಯೋಜನೆಯನ್ನು ಈ ಕೂಡಲೇ ಜಾರಿಗೊಳಿಸಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಉದ್ಯೋಗದ ಸ್ಥಳಗಳಲ್ಲಿ ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕಾಗಿ ಆಂತರಿಕ ದೂರು ಸಮಿತಿ ರಚಿಸಿ ಉದ್ಯೋಗಸ್ಥ ಮಹಿಳೆಯರಿಗೆ ವಿಶ್ರಾಂತಿ ಕೊಠಡಿ ಶಿಶುಪಾಲನಾ ಕೇಂದ್ರದಂಥ ಮೂಲ ಸೌಕರ್ಯ ಒದಗಿಸಬೇಕು’ ಎಂದು ಮನವಿ ಮಾಡಿದರು. ಮಧುಲತಾ ಗೌಡರ ಗಂಗಾ ಕೊಕರೆ ದೇವಮ್ಮ ದೇವತಕಲ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.