ADVERTISEMENT

ಹುಬ್ಬಳ್ಳಿ | ಬಿಆರ್‌ಟಿಎಸ್: ಸಿಗದ ಅನುದಾನ; ಯೋಜನೆ ಅಧ್ವಾನ

ಶಿವರಾಯ ಪೂಜಾರಿ
Published 26 ಜನವರಿ 2026, 5:40 IST
Last Updated 26 ಜನವರಿ 2026, 5:40 IST
ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲಿ ಚಿಗರಿ ಬಸ್‌ಗಳ ಮಧ್ಯೆ ಕಾರು ಸಂಚರಿಸಿದ ದೃಶ್ಯ
ಪ್ರಜಾವಾಣಿ ಚಿತ್ರಗಳು: ಗೋವಿಂದರಾಜ ಜವಳಿ
ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲಿ ಚಿಗರಿ ಬಸ್‌ಗಳ ಮಧ್ಯೆ ಕಾರು ಸಂಚರಿಸಿದ ದೃಶ್ಯ ಪ್ರಜಾವಾಣಿ ಚಿತ್ರಗಳು: ಗೋವಿಂದರಾಜ ಜವಳಿ   

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಅವಳಿ ನಗರದ ನಡುವೆ ಪ್ರಯಾಣಿಕರ ಸುಗಮ ಸಂಚಾರಕ್ಕೆ 2018ರಲ್ಲಿ ಜಾರಿಗೆ ತಂದ ಬಿಆರ್‌ಟಿಎಸ್ ಯೋಜನೆ, ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಯೋಜನೆಯು ಸದ್ಯ ‘ಐಸಿಯು’ ಸ್ಥಿತಿಯಲ್ಲಿದ್ದು, ‘ಅನುದಾನ’ದ ತುರ್ತು ಚಿಕಿತ್ಸೆಯ ಅಗತ್ಯತೆ ಇದೆ.

ಹುಬ್ಬಳ್ಳಿ–ಧಾರವಾಡ ನಡುವೆ 22.5 ಕಿ.ಮೀ ಪ್ರತ್ಯೇಕ ಕಾರಿಡಾರ್ ಒಳಗೊಂಡ ಬಿಆರ್‌ಟಿಎಸ್ ಯೋಜನೆಗೆ ಪ್ರಯಾಣಿಕರಿಂದ ಆರಂಭದಲ್ಲಿ ಉತ್ತಮ ಅಭಿಪ್ರಾಯ ವ್ಯಕ್ತವಾಗಿತ್ತು. ಅಲ್ಲದೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಾದರಿ ಯೋಜನೆಯಾಗಿ ಗುರುತಿಸಿಕೊಂಡಿತ್ತು. ಇದಕ್ಕೆ ಪೂರಕ ಎಂಬಂತೆ ನಗರ ಸಮೂಹ ಸಾರಿಗೆ ವ್ಯವಸ್ಥೆಯಡಿ ಸಿಕ್ಕ ಅನೇಕ ಪ್ರಶಸ್ತಿಗಳು ಯೋಜನೆಯ ಗರಿಮೆ ಹೆಚ್ಚಿಸಿದ್ದವು.

ಆದರೆ, ಜಾರಿಯಾದ ಮೂರು–ನಾಲ್ಕು ವರ್ಷಗಳಲ್ಲೇ ಯೋಜನೆಯು ಮೂಲ ಸ್ವರೂಪವನ್ನೇ ಕಳೆದುಕೊಂಡಿದೆ. ನೂರಾರು ಕೋಟಿ ರೂಪಾಯಿ ಅನುದಾನದಲ್ಲಿ ಆರಂಭವಾದ ಯೋಜನೆ, ಕ್ರಮೇಣ ಯಾವ ಸರ್ಕಾರದಿಂದಲೂ ಅನುದಾನ ಸಿಗದೆ, ಸಮರ್ಪಕ ನಿರ್ವಹಣೆ ಕೊರತೆಯಿಂದ ‘ಸ್ಥಗಿತ’ದ ಸ್ಥಿತಿಗೆ ಬಂದು ತಲುಪಿದೆ.

ADVERTISEMENT

ನಿರ್ವಹಣೆ ಕೊರತೆಯಿಂದ ಬಿಆರ್‌ಟಿಎಸ್‌ನ 100 ಚಿಗರಿ ಬಸ್‌ಗಳಲ್ಲಿ 16 ಹಾಳಾಗಿವೆ. 84 ಬಸ್‌ಗಳು ಮಾತ್ರ ಕಾರ್ಯಾಚರಣೆಯಲ್ಲಿವೆ. ಅವುಗಳಲ್ಲಿ ಬಹುತೇಕ ಬಸ್‌ಗಳು ದುರಸ್ತಿ ಹಂತದಲ್ಲಿವೆ. ಪ್ರತಿದಿನ ಮೂರು, ನಾಲ್ಕು ಬಸ್‌ಗಳು ಕೆಟ್ಟು ಮಾರ್ಗಮಧ್ಯೆ ನಿಲ್ಲುತ್ತವೆ. ದುರಸ್ತಿಗೆ ಬೇಕಾದ ಬಿಡಿಭಾಗಗಳ ಪೂರೈಕೆ ಕೊರತೆಯಿಂದ ದುರಸ್ತಿ ಮಧ್ಯೆಯೂ ಅನಿವಾರ್ಯವಾಗಿ ಸಂಚಾರ ನಡೆಸುತ್ತಿವೆ.

ಬಹುತೇಕ ಬಸ್‌ಗಳಲ್ಲಿ ಎಸಿ, ಎಮರ್ಜೆನ್ಸಿ ಬಟನ್ ಹಾಳಾಗಿವೆ. ಸೀಟುಗಳ ಬಟ್ಟೆ ಕೊಳೆಗಟ್ಟಿವೆ. ತುರ್ತು ಸಂದರ್ಭದಲ್ಲಿ ಕಿಟಕಿಯ ಗಾಜು ಒಡೆಯಲು ಅಳವಡಿಸಿದ್ದ ಹ್ಯಾಮರ್‌ಗಳು ಬಹುತೇಕ ನಾಪತ್ತೆಯಾಗಿವೆ. ಇನ್ನು ಬಸ್‌ ನಿಲ್ದಾಣಗಳಲ್ಲಿ ಕೆಲವೆಡೆ ಆ ಫೇರ್‌ಗೇಟ್‌ಗಳು ಮುರಿದಿವೆ. ಟಿಕೆಟ್‌ ಪಡೆಯದೆ ನಿಲ್ದಾಣಗಳನ್ನು ಪ್ರವೇಶಿಸಿದರೂ ಯಾರೂ ಕೇಳದಂತಹ ಸ್ಥಿತಿ ಇದೆ. ಕಾರಿಡಾರ್‌ ಬದಿಯಲ್ಲಿ ಅಳವಡಿಸಿರುವ ತಂತಿಬೇಲಿ ತುಕ್ಕು ಹಿಡಿದಿದೆ. ಬಿಆರ್‌ಟಿಎಸ್ ಬಸ್ ಸೇರಿದಂತೆ ಖಾಸಗಿ ವಾಹನಗಳ ಅಪಘಾತದಿಂದ ಬಹುತೇಕ ಕಡೆ ತಂತಿಬೇಲಿ ಹಾಳಾಗಿದೆ.

ಬಿಆರ್‌ಟಿಎಸ್‌ ಮಾರ್ಗದಲ್ಲಿ ಲಕ್ಷಾಂತರ ರೂಪಾಯಿ ವ್ಯಯಿಸಿ ಬೀದಿದೀಪ ಅಳವಡಿಸಿದ್ದರೂ ಕೆಲವೆಡೆ ಅವು ಬೆಳಗುತ್ತಿಲ್ಲ. ಯೋಜನೆಗೆ ನೂರಾರು ಕೋಟಿ ಅನುದಾನ ಬಳಸಿದರೂ ಬಿಆರ್‌ಟಿಎಸ್ ಬಸ್ ನಿಲ್ದಾಣಗಳಲ್ಲಿ ಶೌಚಾಲಯ, ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಇನ್ನು ‘ಸಂಚಾರಿ ಶೌಚಾಲಯ’ ಹೆಸರಿಗೆ ಮಾತ್ರ ಎನ್ನುವಂತಾಗಿದೆ. ಇವು ಯೋಜನೆಯ ವೈಫಲ್ಯಕ್ಕೆ ಸಾಕ್ಷಿಯಾಗಿವೆ.

ಮಳೆ ಸಂದರ್ಭದಲ್ಲಿ ಧಾರವಾಡದ ಟೋಲ್‌ ನಾಕಾ, ಹುಬ್ಬಳ್ಳಿಯ ಉಣಕಲ್ ಸೇರಿದಂತೆ ಹಲವೆಡೆ ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿ ನಿಲ್ಲುವ ನೀರು ಈ ಅವೈಜ್ಞಾನಿಕ ಯೋಜನೆಯನ್ನು ಬಿಂಬಿಸುತ್ತದೆ. ದಿನವೊಂದಕ್ಕೆ ಅಂದಾಜು 80 ಸಾವಿರಕ್ಕೂ ಅಧಿಕ ಜನರು ಚಿಗರಿ ಬಸ್‌ಗಳಲ್ಲಿ ಪ್ರಯಾಣಿಸಿದರೂ, ಬಸ್‌ಗಳು ಒಮ್ಮೆಯೂ ಲಾಭದಲ್ಲಿ ಕಾರ್ಯಾಚರಣೆ ನಡೆಸಿಲ್ಲ. 

‘ಒಂದು ಬಸ್‌ ನಿರ್ವಹಣೆಗೆ ಸದ್ಯ ಒಂದು ಕಿ.ಮೀಗೆ ಸರಾಸರಿ ₹60 ಖರ್ಚಾಗುತ್ತಿದೆ. ಬರುವ ಆದಾಯಕ್ಕಿಂತ ಖರ್ಚು ಹೆಚ್ಚಾಗಿದೆ. ಕಳೆದ ತಿಂಗಳು ₹2.86 ಕೋಟಿ ನಷ್ಟ ಅನುಭವಿಸಿದೆ’ ಎಂದು ಎನ್‌ಡಬ್ಲುಕೆಆರ್‌ಟಿಸಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಬಿಆರ್‌ಟಿಎಸ್‌ ಬಸ್‌ ನಿಲ್ದಾಣದಲ್ಲಿ ಫೇರ್‌ಗೇಟ್ ಹಾಳಾಗಿರುವುದು
ಚಿಗರಿ ಬಸ್‌ವೊಂದರಲ್ಲಿ ಸೀಟುಗಳು ಕೊಳೆಗಟ್ಟಿರುವುದು
ದಿವ್ಯಪ್ರಭು
ಪ್ರಿಯಾಂಗಾ ಎಂ.
ಸಾವಿತ್ರಿ ಕಡಿ
ರವೀಶ್ ಸಿ.ಆರ್.
ಸಂತೋಷ ಲಾಡ್
ಬಿಆರ್‌ಟಿಎಸ್‌ ಬಸ್ ಕಾರಿಡಾರ್‌ ಅಸಮರ್ಪಕ ನಿರ್ವಹಣೆ ಬಗ್ಗೆ ದೂರುಗಳು ಕೇಳಿಬಂದಿವೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಈ ಬಗ್ಗೆ ಸಭೆ ನಡೆಸಿ ಚರ್ಚಿಸಲಾಗುವುದು. ಸಮಸ್ಯೆ ಶೀಘ್ರ ಬಗೆಹರಿಸಲಾಗುವುದು
ದಿವ್ಯಪ್ರಭು ಜಿಲ್ಲಾಧಿಕಾರಿ
ಬಿಆರ್‌ಟಿಎಸ್‌ ಬಸ್‌ಗಳನ್ನು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ನಿರ್ವಹಣೆ ಮಾಡುತ್ತಿದೆ. ಹಾಳಾದ ಬಸ್‌ಗಳ ದುರಸ್ತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ
ಪ್ರಿಯಾಂಗಾ ಎಂ. ವ್ಯವಸ್ಥಾಪಕ ನಿರ್ದೇಶಕಿ ಎನ್‌ಡಬ್ಲುಕೆಆರ್‌ಟಿಸಿ
ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲಿನ ಸಮಸ್ಯೆಗಳನ್ನು ಗುರುತಿಸಲಾಗಿದೆ. ಸದ್ಯ ಟೆಂಡರ್‌ ಪ್ರಕ್ರಿಯೆ ನಡೆದಿದ್ದು 15 ದಿನದೊಳಗೆ ಎಲ್ಲವನ್ನೂ ಸರಿಪಡಿಸಲಾಗುವುದು
ಸಾವಿತ್ರಿ ಬಿ.ಕಡಿ ಹು– ಧಾ ಬಿಆರ್‌ಟಿಎಸ್‌ ವ್ಯವಸ್ಥಾಪಕ ನಿರ್ದೇಶಕಿ
ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿ ಓಡಾಡುವ ಖಾಸಗಿ ವಾಹನಗಳಿಗೆ ದಂಡ ವಿಧಿಸಲಾಗುತ್ತದೆ. ಪದೇಪದೇ ನಿಯಮ ಉಲ್ಲಂಘಿಸುವ ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗುತ್ತಿದೆ
ರವೀಶ್‌ ಸಿ.ಆರ್‌. ಡಿಸಿಪಿ ಸಂಚಾರ ಮತ್ತು ಅಪರಾಧ ವಿಭಾಗ

ಕಾರಿಡಾರ್‌ನಲ್ಲಿ ಅಪಘಾತ; 11 ಮಂದಿ ಸಾವು 2018ರಿಂದ ಈವರೆಗೆ ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿ 56 ಅಪಘಾತಗಳು ಸಂಭವಿಸಿದ್ದು 11 ಮಂದಿ ಮೃತಪಟ್ಟಿದ್ದಾರೆ. ಬಿಆರ್‌ಟಿಎಸ್‌ ಬಸ್‌ಗಳ ವೇಗದ ಚಾಲನೆ ಕಾರಿಡಾರ್‌ನಲ್ಲಿ ಬೈಕ್‌ ಚಾಲನೆ ಪಾದಚಾರಿಗಳಿಗೆ ಚಿಗರಿ ಬಸ್‌ ಡಿಕ್ಕಿ ನಿಯಂತ್ರಣ ತಪ್ಪಿ ಚಿಗರಿ ಬಸ್‌ ವಿಭಜಕಕ್ಕೆ ಡಿಕ್ಕಿ ಹೀಗೆ ವಿವಿಧ ಕಾರಣಗಳಿಂದ ಅಪಘಾತಗಳು ಸಂಭವಿಸಿದ್ದು 51 ಮಂದಿ ಗಾಯಗೊಂಡಿದ್ದಾರೆ. ಇನ್ನು ಕಳೆದ ಐದು ವರ್ಷಗಳಲ್ಲಿ ಮಿಶ್ರಪಥದಲ್ಲಿ 81 ಅಪಘಾತ ಪ್ರಕರಣ ಸಂಭವಿಸಿದ್ದು 29 ಜನ ಮೃತಪಟ್ಟಿದ್ದಾರೆ 54 ಮಂದಿ ಗಾಯಗೊಂಡಿದ್ದಾರೆ.

ಖಾಸಗಿ ವಾಹನಗಳ ದರ್ಬಾರ್ ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿ ಚಿಗರಿ ಬಸ್‌ಗಳು ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್‌ ಪೊಲೀಸರ ಹಾಗೂ ಸರ್ಕಾರಿ ಅಧಿಕಾರಿಗಳ ವಾಹನಗಳ ಮಾತ್ರ ಸಂಚರಿಸಬೇಕು. ಆದರೆ ಖಾಸಗಿ ವಾಹನಗಳ ಸಂಚಾರದಿಂದ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ ಮೂರು ವರ್ಷಗಳಲ್ಲಿ ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿ ಸಂಚರಿಸಿದ ಖಾಸಗಿ ವಾಹನಗಳ ವಿರುದ್ಧ ಪೊಲೀಸ್ ಇಲಾಖೆಯು 18461 ಪ್ರಕರಣ ದಾಖಲಿಸಿ ₹9230500 ದಂಡ ವಿಧಿಸಿದೆ. ಇವುಗಳಲ್ಲಿ 4635 ಪ್ರಕರಣಗಳಲ್ಲಿ ₹2317500 ದಂಡ ಸಂಗ್ರಹಿಸಲಾಗಿದ್ದು ಇನ್ನೂ  13826 ಪ್ರಕರಣಗಳ ಪೈಕಿ ₹6913000 ದಂಡ ವಸೂಲಿ ಆಗಬೇಕಿದೆ.

ಬಿಆರ್‌ಟಿಎಸ್ ಬದಲಿಗೆ ಎಲ್‌ಆರ್‌ಟಿ: ಹು–ಧಾ ನಡುವೆ ಬಿಆರ್‌ಟಿಎಸ್‌ ಬದಲಿಗೆ ಲಘು ರೈಲು ಸಾರಿಗೆ (ಎಲ್‌ಆರ್‌ಟಿ) ಮಾದರಿ ಪರಿಚಯಿಸುವ ಕುರಿತು ಚಿಂತನೆ ನಡೆದಿದೆ. ‘ಬಿಆರ್‌ಟಿಎಸ್‌ ಮಾರ್ಗದಲ್ಲಿ ಹಲವು ಅಪಘಾತಗಳು ಸಂಭವಿಸಿ ಸಾಕಷ್ಟು ಸಾವು–ನೋವುಗಳಾಗಿವೆ. ಹೀಗಾಗಿ ಬಿಆರ್‌ಟಿಎಸ್‌ಗೆ ವಿರೋಧ ವ್ಯಕ್ತವಾಗಿದೆ. ಪರ್ಯಾಯವಾಗಿ ಲಘು ರೈಲು ಸಾರಿಗೆ ವ್ಯವಸ್ಥೆಯನ್ನು ಖಾಸಗಿ–ಸಾರ್ವಜನಿಕರ ಸಹಭಾಗಿತ್ವದಲ್ಲಿ (ಪಿಪಿಪಿ) ಅನುಷ್ಠಾನಗೊಳಿಸಲು ಯೋಜನೆ ಇದೆ. ಈ ವ್ಯವಸ್ಥೆ ಜಾರಿಗೆ ಬಂದರೆ ಲಘು ರೈಲಿನಲ್ಲಿ ಒಂದು ಬಾರಿಗೆ 200ರಿಂದ 250 ಜನರು ಪ್ರಯಾಣಿಸಬಹುದು. ಇದು ವಿದ್ಯುತ್ ಚಾಲಿತ ಆಗಿರುವುದಿಂದ ಪರಿಸರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು.

ಅಂಕಿ ಅಂಶಗಳು ₹970.87 ಕೋಟಿ ಬಿಆರ್‌ಟಿಎಸ್ ಯೋಜನೆಯ ಒಟ್ಟು ವೆಚ್ಚ ₹356 ಕೋಟಿ ಭೂಸ್ವಾಧಿನಕ್ಕೆ ನೀಡಿದ ಪರಿಹಾರ ₹342.1 ಕೋಟಿ ಕಾಮಗಾರಿಗೆ ತಗುಲಿದ ವೆಚ್ಚ ₹129.15 ಕೋಟಿ 100 ಚಿಗರಿ ಬಸ್‌ ಖರೀದಿಯ ಖರ್ಚು 84 ಸದ್ಯ ಚಿಗರಿ ಬಸ್‌ಗಳ ಕಾರ್ಯಾಚರಣೆ ಅಂದಾಜು 80 ಸಾವಿರ ನಿತ್ಯ ಪ್ರಯಾಣಿಸುವವರು ₹2 ಕೋಟಿ ಬಿಆರ್‌ಟಿಎಸ್‌ಗೆ ಪ್ರತಿ ತಿಂಗಳ ನಷ್ಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.