ADVERTISEMENT

ಬಕ್ರೀದ್ ಸಡಗರ; ಕೊರೊನಾ ನಿವಾರಣೆಗೆ ಪ್ರಾರ್ಥನೆ

ಹುಬ್ಬಳ್ಳಿಯಲ್ಲಿ ಶುಭಾಶಯ ವಿನಿಮಯ ಮಾಡಿಕೊಂಡು ಖುಷಿಪಟ್ಟ ಚಿಣ್ಣರು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 16:15 IST
Last Updated 1 ಆಗಸ್ಟ್ 2020, 16:15 IST
ಹುಬ್ಬಳ್ಳಿಯಲ್ಲಿ ಶನಿವಾರ ಬಕ್ರೀದ್‌ ಅಂಗವಾಗಿ ಮುಸ್ಲಿಂ ಸಮಾಜದ ಮುಖಂಡರು ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರನ್ನು ಭೇಟಿಯಾದರು
ಹುಬ್ಬಳ್ಳಿಯಲ್ಲಿ ಶನಿವಾರ ಬಕ್ರೀದ್‌ ಅಂಗವಾಗಿ ಮುಸ್ಲಿಂ ಸಮಾಜದ ಮುಖಂಡರು ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರನ್ನು ಭೇಟಿಯಾದರು   

ಹುಬ್ಬಳ್ಳಿ: ಕೊರೊನಾ ಸೋಂಕಿನ ಭೀತಿಯ ನಡುವೆಯೂ ನಗರದ ಮುಸ್ಲಿಮರು ಶನಿವಾರ ಸಡಗರದಿಂದ ಬಕ್ರೀದ್‌ ಆಚರಿಸಿದರು. ಕೆಲವೆಡೆ ಹೆಚ್ಚು ಜನರಿದ್ದ ಕಾರಣ ಹಲವು ತಂಡಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಅಂತರ ಕಾಯ್ದುಕೊಂಡರು.

ಗೋಪನಕೊಪ್ಪ, ಭೈರಿದೇವರಕೊಪ್ಪ, ದೇವಾಂಗಪೇಟೆ, ಅಮರಕಾಲೊನಿ, ಹಳೇ ಹುಬ್ಬಳ್ಳಿಯ ಆಸಾರ್‌ ಹೊಂಡ, ಸಿಬಿಟಿ ಪ್ರದೇಶ ಹಾಗೂ ಇಂಡಿ ಪಂಪ್‌ ಬಳಿಯ ಮಸೀದಿಗಳು ಸೇರಿದಂತೆ ಹಲವೆಡೆ ಸರಳ ಪ್ರಾರ್ಥನೆ ಜರುಗಿತು. ಸಾರ್ವಜನಿಕರ ಸುರಕ್ಷತೆ ಸಲುವಾಗಿ ಮಹಾನಗರ ಪಾಲಿಕೆ ಸಿಬ್ಬಂದಿ ಬೆಳಿಗ್ಗೆಯೇ ಮಸೀದಿಯ ಆವರಣ, ಪ್ರವೇಶ ದ್ವಾರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ರಾಸಾಯನಿಕ ಮಿಶ್ರಿತ ಔಷಧ ಸಿಂಪಡಿಸಿದರು.

ಸಮಾಜದ ಹಿರಿಯರು ಹಾಗೂ ಮುಖಂಡರು ದೂರದಿಂದಲೇ ಪರಸ್ಪರ ಶುಭಾಶಯ ವಿನಿಯಮ ಮಾಡಿಕೊಂಡರು. ಅಂತರ ಕಾಯ್ದುಕೊಳ್ಳಬೇಕಿದ್ದರಿಂದ ಬಹಳಷ್ಟು ಕಡೆ ಆಲಿಂಗನದ ಚಿತ್ರಣ ಕಂಡುಬರಲಿಲ್ಲ. ಅಲ್ತಾಫ್‌ ನಗರದಲ್ಲಿರುವ ಮದೀನಾ ಮಸೀದಿಯಲ್ಲಿ ಧರ್ಮ ಗುರುಗಳಾದ ಮೌಲಾನಾ ಮುಫ್ತಿ ಮಹಮ್ಮದ್‌ ಖ್ವಾಜಾ ಸುಹೇನ್ ಮತ್ತು ಮೌಲಾನಾ ಅಬ್ದುಲ್ ಹಕೀಮ್‌ ಅವರ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ADVERTISEMENT

ಹುಬ್ಬಳ್ಳಿ ಅಂಜುಮನ್-ಎ- ಇಸ್ಲಾಂ ಸಂಸ್ಥೆಯ ಉಪಾಧ್ಯಕ್ಷ ಅಲ್ತಾಫ್ ನವಾಜ್ ಕಿತ್ತೂರು ಮಾತನಾಡಿ ‘ಕೊರೊನಾ ಸಂಕಷ್ಟದಿಂದ ದೇಶ ಆದಷ್ಟು ಬೇಗನೆ ಮುಕ್ತವಾಗಿ ಜನ ನೆಮ್ಮದಿಯಿಂದ ಬದುಕುವಂತಾಗಲಿ. ಜನ ಆರೋಗ್ಯವಂತರಾಗಿ ಇರಲಿ ಎಂದು ಸಮಸ್ತ ಮುಸ್ಲಿಂ ಸಮುದಾಯದ ಜನರ ಪರವಾಗಿ ಪ್ರಾರ್ಥಿಸಿದ್ದೇವೆ’ ಎಂದರು.

ಸಮಾಜದ ಪ್ರಮುಖರಾದ ಅಲ್ಲಾಬಕ್ಷ ಸವಣೂರು, ನಜೀರ್ ಸಾಬ್‌ ಮೀರಜ್‌, ಮುನ್ನಾ ಕಿಲ್ಲೇದಾರ, ಎ.ಎಂ. ಮಸೂತಿ, ದಾವಲಸಾಬ್‌ ಮುಲ್ಲಾ, ನನ್ನೇಸಾಬ ನಲ್ಲಿಕೊಪ್ಪ, ಆಸೀಫ್ ಪಾಲನ್, ಫಕರುದ್ದೀನ್ ರಸೂಲ್ ಉಲಮಾ, ಇಸ್ಮಾಯಿಲ್ ಸಾಬ್‌ ಇದ್ದರು. ಮಾಜಿ ಸಂಸದ ಐ.ಜಿ. ಸನದಿ ‘ವಿಶ್ವದಲ್ಲಿ ಶಾಂತಿ ನೆಲಸಲಿ. ಎಲ್ಲರಿಗೂ ಉತ್ತಮ ಆರೋಗ್ಯ ಸಿಗಲಿ’ ಎಂದು ಹಾರೈಸಿದರು.

ನಗರದ ಆಸಾರ್‌ ಹೊಂಡದಲ್ಲಿರುವ ಮಸೀದಿಯಲ್ಲಿ ಮುತುವಲ್ಲಿ ಮುನ್ನಾ ವಡ್ಡು ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಇಕ್ಬಾಲ್‌ ನವಲೂರು, ಹಜರತ್‌ ಸಾಬ್‌ ಶೌಕತ್‌ ಅಲಿ, ಯಾಸೀಫ್‌ ಬೇಪಾರಿ, ಅಫಿಸ್‌ ಕಾಗದಗಾರ, ಇಮ್ತಿಯಾಜ್‌ ಪಾಲ್ಗೊಂಡಿದ್ದರು.

ಮೂರುಸಾವಿರ ಮಠಕ್ಕೆ ಭೇಟಿ
ತ್ಯಾಗ, ಬಲಿದಾನ ಹಾಗೂ ಪ್ರೀತಿಯ ಸಂಕೇತವಾದ ಬಕ್ರೀದ್‌ ಅಂಗವಾಗಿ ಮುಸ್ಲಿಂ ಸಮಾಜದ ಮುಖಂಡರು ಪ್ರತಿ ವರ್ಷದಂತೆ ನಗರದ ಮೂರುಸಾವಿರ ಮಠಕ್ಕೆ ತೆರಳಿ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿಯನ್ನು ಭೇಟಿಯಾಗಿ ಭಾವೈಕ್ಯ ಮೆರೆದರು.

ಮುತುವಲ್ಲಿ ರಾಜಾಸಾಬ್ ಸಿಕಂದರ್‌ ಸೇರಿದಂತೆ ಸಮಾಜದ ಮುಖಂಡರು ಮಠದ ಕರ್ತೃಗದ್ದುಗೆಯ ದರ್ಶನ ಪಡೆದರು. ಈ ವೇಳೆ ಸ್ವಾಮೀಜಿ ’ಕೊರೊನಾ ದೂರವಾಗಿ ಜನರಲ್ಲಿ ಶಾಂತಿ ನೆಲೆಸಲಿ. ಎಲ್ಲರೂ ಸಹೋದರರಂತೆ ಬಾಳಬೇಕು’ ಎಂದು ಹೇಳಿದರು.

ಮೂರುಸಾವಿರಮಠ ವಿದ್ಯಾವರ್ಧಕ ಸಂಘದ ನಿರ್ದೇಶಕ ಸದಾನಂದ.ವಿ.ಡಂಗನವರ, ವ್ಯವಸ್ಥಾಪಕ ಎಸ್‌.ಎ. ಪಾಟೀಲ, ಸುನಿಲ್ ಕುರುಡೆಕರ, ಅಶೋಕ ಕುದುರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.