
ಹುಬ್ಬಳ್ಳಿ: ಸದಾ ಜನಜಂಗುಳಿ, ವಾಹನಗಳ ಕರ್ಕಶ ಶಬ್ದ, ಮೈ ಚುರ್ ಎನ್ನುವ ಬಿಸಿಲು ಇರುವ ಹುಬ್ಬಳ್ಳಿಯೊಳಗೆ ಮಲೆನಾಡಿನಂತೆ ಕಾಣುವ ಪ್ರದೇಶವೂ ಇದೆ. ಅದುವೇ ಬೂದನಗುಡ್ಡ. ಇದನ್ನು ದೇವರಕಾಡು ಎಂದೂ ಕರೆಯುತ್ತಾರೆ.
ಸಾಲು ಸಾಲು ಗುಡ್ಡಗಳು, ಕಣ್ಣು ಹಾಯಿಸಿದಷ್ಟು ಬರೀ ಹಸಿರು, ಇದರ ಮಧ್ಯೆ ಹಕ್ಕಿಗಳ ಚಿಲಿಪಿಲಿ, ಆಗಾಗ ಕಣ್ಣಿಗೆ ಕಾಣುವ ನವಿಲು, ಪುಟ್ಟ ಪುಟ್ಟ ಮೊಲ, ಬೆಳಗಿನ ಜಾವ ಗುಡ್ಡಗಳ ಮಧ್ಯೆ ಹೊಂಗಿರಣ ಮೂಡಿಸುತ್ತ ಉದಯಿಸುವ ಭಾಸ್ಕರ, ತಣ್ಣಗೆ ಸೂಸುವ ಗಾಳಿ, ಆಕಾಶ–ಭೂಮಿ ಒಂದಾದಂತೆ ಭಾಸವಾಗುವ ಚಂದದ ಅನುಭೂತಿ ದೊರಕುವುದು ಬೂದನಗುಡ್ಡದಲ್ಲಿ.
ಹುಬ್ಬಳ್ಳಿಯ ಕಲಘಟಗಿ ತಾಲ್ಲೂಕಿನಲ್ಲಿರುವ ಬೂದನಗುಡ್ಡ, ಈ ಭಾಗದ ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ತಾಣವೂ ಹೌದು. ಹುಬ್ಬಳ್ಳಿಯಿಂದ ಕೇವಲ 14 ಕಿ.ಮೀ., ದೂರದಲ್ಲಿದ್ದು, ಚಳಮಟ್ಟಿ ಕ್ರಾಸ್‌ನಿಂದ ಬಲಕ್ಕೆ ತಿರುಗಿದ ನಂತರ ಗುಡ್ಡ ಕಾಣಿಸುತ್ತದೆ. ಏರಿಕೆಯ ಹಾದಿ ಡಾಂಬರು ಕಂಡಿರುವುದರಿಂದ ಸಂಚಾರ ಕಷ್ಟವೇನಲ್ಲ. ಸೈಕಲ್ ಸವಾರರಿಗೆ, ಟ್ರೆಕ್ಕಿಂಗ್ ಮಾಡುವವರಿಗೆ ಹೇಳಿ ಮಾಡಿಸಿದ ಜಾಗ.
ಗುಡ್ಡದ ಮೇಲೆ ಚನ್ನಬಸವೇಶ್ವರರ ದೇವಸ್ಥಾನವಿದ್ದು, ಬೂದನಗುಡ್ಡದ ಬಸವಣ್ಣ ಎಂದೇ ಖ್ಯಾತವಾಗಿದೆ. ದೇವಸ್ಥಾನದ ಸುತ್ತ–ಮುತ್ತ ಅಲ್ಲಲ್ಲಿ ಬೆಂಚ್ ಹಾಗೂ ಕಲ್ಲು ಬಂಡೆಗಳಿವೆ. ಪ್ರಕೃತಿ ಸೌಂದರ್ಯ ಸವಿಯಲು ವೀವ್ ಪಾಯಿಂಟ್ ಸಹ ಇವೆ. ಫೋಟೊ ಶೂಟ್‌ಗೆ ಉತ್ತಮ ಜಾಗ.
ಬೂದನಗುಡ್ಡವು ಸುಮಾರು 13ಕಿ.ಮೀ., ಉದ್ದಕ್ಕೆ ಮತ್ತು 1.6ಕಿ.ಮೀ., ಅಗಲಕ್ಕೆ ದಕ್ಷಿಣೋತ್ತರವಾಗಿ ಹರಡಿಕೊಂಡಿದ್ದು, ಇದು ಸುತ್ತಲಿನ ಪ್ರದೇಶಕ್ಕಿಂತ 152 ಮೀ.ನಷ್ಟು ಎತ್ತರವಾಗಿದೆ.
ಔಷಧೀಯ ತಾಣ: ದೇವಸ್ಥಾನದ ಮುಂಭಾಗದಲ್ಲಿ ಇಳಿಜಾರಿನಂತಿರುವ ಪ್ರದೇಶದಲ್ಲಿ ಮಧುನಾಶಿನಿ, ಕೊಡಸಿಗ, ಅಮೃತಬಳ್ಳಿ, ಸಪ್ತಪರ್ಣಿ, ಹಾಲೆ, ಪುರುಷರತ್ನ, ಇಂಗಳದ ಮರ, ಕಾಸರಕ, ಅಂಕೋಲೆ ಮರ, ಶತವಾರಿ, ಕಾರೆ ಹಣ್ಣು, ಕವಳಿ ಹಣ್ಣಿನ ಗಿಡ, ಕಾಡು ಮಲ್ಲಿಗೆ ಸೇರಿದಂತೆ ಅನೇಕ ಔಷಧೀಯ ಗಿಡಗಳು ಹಾಗೂ ಸುಗಂಧ ಸಸ್ಯಗಳು ಗುಡ್ಡದ ತುಂಬ ಹರಡಿಕೊಂಡಿವೆ.
ಧಾರವಾಡ ಪ್ರಾದೇಶಿಕ ಅರಣ್ಯ ವಿಭಾಗ ಇದನ್ನು ನೋಡಿಕೊಳ್ಳುತ್ತಿದ್ದು, ಇಲ್ಲಿಗೆ ಭೇಟಿ ನೀಡುವವರ ಅನುಕೂಲಕ್ಕಾಗಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಇದೆ. ಆದರೆ ಶೌಚಾಲಯಕ್ಕೆ ನೀರಿನ ಕೊರತೆಯಾಗುತ್ತಿದೆ. ಅರ್ಚಕರು ಉಳಿದುಕೊಳ್ಳಲು ಒಂದು ಕೊಠಡಿ ನಿರ್ಮಿಸಿಕೊಡಬೇಕು ಎನ್ನುವುದು ಇಲ್ಲಿನ ಅರ್ಚಕರಾದ ವೀರಮ್ಮ ಅವರ ಬೇಡಿಕೆ.
ಭಾನುವಾರ ಪ್ರವಾಸಿಗರು ಹಾಗೂ ಸೋಮವಾರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಉಳಿದಂತೆ ರಜಾ ದಿನಗಳಲ್ಲಿ ಭೇಟಿ ನೀಡುವವರ ಸಂಖ್ಯೆ ಅಧಿಕವಾಗಿರುತ್ತದೆ.
ಇದು ಧಾರ್ಮಿಕ ಹಾಗೂ ಪ್ರವಾಸಿ ಸ್ಥಳವಾಗಿರುವುದರಿಂದ ಸಂಕ್ರಾಂತಿಯಂದು ಕುಟುಂಬದವರೊಂದಿಗೆ ಇಲ್ಲಿಗೆ ಬಂದು ಸಂಜೆವರೆಗೂ ಕಾಲ ಕಳೆಯುತ್ತೇವೆ.ಸುಭಾಸ್ ಜಿ ಹುಬ್ಬಳ್ಳಿ ನಿವಾಸಿ
ಚನ್ನಬಸವೇಶ್ವರ ತಂಗಿದ್ದ ಜಾಗ...
12ನೇ ಶತಮಾನದಲ್ಲಿ ಬಸವಣ್ಣನವರ ಅಳಿಯ ಚನ್ನಬಸವೇಶ್ವರರು ಉತ್ತರ ಕನ್ನಡ ಜಿಲ್ಲೆಯ ಉಳವಿಗೆ ಹೊರಟಿದ್ದ ಸಂದರ್ಭದಲ್ಲಿ ತಮ್ಮ ಶರಣ ಗಣದೊಂದಿಗೆ ಇಲ್ಲಿನ ನೈಸರ್ಗಿಕ ಚಿಕ್ಕ ಚಿಕ್ಕ ಗುಹೆಗಳಲ್ಲಿ ವಾಸವಿದ್ದರು. ನಂತರ ಸಿದ್ಧಾರೂಢರು ತಮ್ಮ ಶಿಷ್ಟರೊಂದಿಗೆ ಇಲ್ಲಿಗೆ ಭೇಟಿ ನೀಡಿದ್ದರು ಎಂದು ಹಿರಿಯರು ಹೇಳುತ್ತಿದ್ದರು ಎನ್ನುತ್ತಾರೆ ಚನ್ನಬಸವೇಶ್ವರ ದೇವಸ್ಥಾನದ ಅರ್ಚಕರಾದ ವೀರಮ್ಮ ಮಾಂತಯ್ಯ ಮಠದ. ದೇವಸ್ಥಾನದ ಒಳಗೆ ಹಾಗೂ ಹೊರಗಡೆ ಚನ್ನಬಸವೇಶ್ವರರ ಮೂರ್ತಿ ಇದೆ. ಎರಡು ವರ್ಷದಿಂದ ಪ್ರತಿ ಅಮಾವಾಸ್ಯೆಯಂದು ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.