ADVERTISEMENT

ಜಾತಿ ಗಣತಿ ವರದಿ ಅವೈಜ್ಞಾನಿಕ: ಜಗದೀಶ ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2024, 16:07 IST
Last Updated 3 ಮಾರ್ಚ್ 2024, 16:07 IST
ಹುಬ್ಬಳ್ಳಿಯ ಶಿವಪುತ್ರಸ್ವಾಮಿ ಮಠದಲ್ಲಿ ಭಾನುವಾರ ಏರ್ಪಡಿಸಿದ್ದ ‘ಶಿವಶಿಂಪಿ ಸಂಭ್ರಮ’ ಕಾರ್ಯಕ್ರಮದಲ್ಲಿ  ಹುಬ್ಬಳ್ಳಿಯ ಗಂಗಾವತಿ ಸಿಲ್ಕ್‌ ಪ್ಯಾಲೇಸ್ ಮಾಲೀಕ ಆನಂದ ಕಮತಗಿ ಅವರಿಗೆ ‘ಶಿವಶಿಂಪಿ ಸಿರಿ’ ಪ್ರಶಸ್ತಿ  ಪ್ರದಾನ ಮಾಡಲಾಯಿತು
ಹುಬ್ಬಳ್ಳಿಯ ಶಿವಪುತ್ರಸ್ವಾಮಿ ಮಠದಲ್ಲಿ ಭಾನುವಾರ ಏರ್ಪಡಿಸಿದ್ದ ‘ಶಿವಶಿಂಪಿ ಸಂಭ್ರಮ’ ಕಾರ್ಯಕ್ರಮದಲ್ಲಿ  ಹುಬ್ಬಳ್ಳಿಯ ಗಂಗಾವತಿ ಸಿಲ್ಕ್‌ ಪ್ಯಾಲೇಸ್ ಮಾಲೀಕ ಆನಂದ ಕಮತಗಿ ಅವರಿಗೆ ‘ಶಿವಶಿಂಪಿ ಸಿರಿ’ ಪ್ರಶಸ್ತಿ  ಪ್ರದಾನ ಮಾಡಲಾಯಿತು   

ಹುಬ್ಬಳ್ಳಿ: ಶಿವಶಿಂಪಿ ಸಮಾಜ ಹುಬ್ಬಳ್ಳಿ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಶಿವಶಿಂಪಿ ಸಂಘದಿಂದ ನಗರದ ಶಿವಪುತ್ರಸ್ವಾಮಿ ಮಠದಲ್ಲಿ ಭಾನುವಾರ ‘ಶಿವಶಿಂಪಿ ಸಂಭ್ರಮ’ ಮತ್ತು ‘ಶಿವಶಿಂಪಿ ಸಿರಿ’ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಹುಬ್ಬಳ್ಳಿಯ ಗಂಗಾವತಿ ಸಿಲ್ಕ್‌ ಪ್ಯಾಲೇಸ್ ಮಾಲೀಕ ಆನಂದ ಕಮತಗಿ ಹಾಗೂ ಐಪಿಎಸ್ ಅಧಿಕಾರಿ ಚನ್ನಪ್ಪ ಶಿವಶಿಂಪಿ ಪ್ರಶಸ್ತಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬಿಜೆಪಿ ಮುಖಂಡ ಜಗದೀಶ ಶೆಟ್ಟರ್ ಮಾತನಾಡಿ, ‘ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸರ್ಕಾರ ಪಡೆದಿರುವ ಜಾತಿಗಣತಿ ವರದಿಯಲ್ಲಿನ ದತ್ತಾಂಶ ಅವೈಜ್ಞಾನಿಕವಾಗಿದೆ’ ಎಂದು ಹೇಳಿದರು.

ADVERTISEMENT

‘ಸಮೀಕ್ಷೆ ನಡೆಸಲು ನಮ್ಮ ಆಕ್ಷೇಪ ಇಲ್ಲ. ಆದರೆ, ಎಂಟು ವರ್ಷಗಳ ಹಿಂದೆ ಎಲ್ಲ ಜಾತಿಗಳ ಶಿಕ್ಷಣ ಮತ್ತು ಸಾಮಾಜಿಕ ಅಧ್ಯಯನಕ್ಕೆ ಮಾತ್ರ ಎಂದು ಹೇಳಲಾಗಿತ್ತು. ಈಗ ಜಾತಿ ಗಣತಿ ವರದಿ ಪಡೆಯಲಾಗಿದೆ. ಇದರಿಂದ ವೀರಶೈವ ಲಿಂಗಾಯತ ಒಳಪಂಗಡಗಳಿಗೆ ಅನ್ಯಾಯವಾಗಲಿದೆ’ ಎಂದರು.

‘ಕಳೆದ ಹತ್ತು ವರ್ಷಗಳಲ್ಲಿ ವೀರಶೈವ ಲಿಂಗಾಯತ ಸಮಾಜ ಸಾಕಷ್ಟು ಬೆಳವಣಿಗೆಯಾಗಿದೆ. ಅದನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ’ ಎಂದು ಹೇಳಿದರು. 

‘ವೀರಶೈವ ಲಿಂಗಾಯತ ಸಮಾಯದ ಎಲ್ಲ ಒಳಪಂಗಡಗಳು ಕೇಂದ್ರ ಸರ್ಕಾರದ ಹಿಂದುಳಿದ ವರ್ಗದ ಆಯೋಗದ ಪಟ್ಟಿಗೆ ಸೇರ್ಪಡೆಯಾಗದರೆ ಸಮಾಜದ ಅಭಿವೃದ್ಧಿಗೆ ಸಹಾಯವಾಗಲಿದೆ. ಸಮಾಜ ಇನ್ನೂ ಸಂಘಟನೆಯಾದರೆ ಸರ್ಕಾರದ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ’ ಎಂದರು.

ನಿವೃತ್ತ ಐಪಿಎಸ್‌ ಅಧಿಕಾರಿ ಶಂಕರ್‌ ಬಿದರಿ ಮಾತನಾಡಿ, ‘ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿ ಒಳಪಂಗಡದವರನ್ನು ನೇಮಕ ಮಾಡಲು ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಹೇಳಿದರು.

ಶಿರಹಟ್ಟಿ ಭಾವೈಕ್ಯ ಮಹಾಸಂಸ್ಥಾನ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ವಿವಿಧ ಕ್ಷೇತ್ರಗಳ ಸಾಧಕರು, ದಾನಿಗಳು ಹಾಗೂ ಹಿರಿಯರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಸಮಾಜದ ಅಧ್ಯಕ್ಷ ಪ್ರಭಾಕರ ಶಿವಶಿಂಪಿ ಅಧ್ಯಕ್ಷತೆ ವಹಿಸಿದ್ದರು. ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಚಟ್ಟೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಂಗಾಧರ ಗಂಜಿ, ಪ್ರಸಾದ ಕರನಂದಿ, ಇಷ್ಟಲಿಂಗಪ್ಪ ಮಿರ್ಜಿ, ಸಂತೋಷ ಬಾಳಿಕಾಯಿ, ನಾಗರಾಜ ಕುಬಸದ, ಸಂತೋಷ ಬಾಳಿಕಾಯಿ, ನಾಗರಾಜ ಕುಬಸದ, ಲೋಚನಪ್ಪ ಸಂಶಿ, ಗುರುಸಿದ್ದಪ್ಪ ಚಟ್ನಿ ಇದ್ದರು. ಸಿದ್ಧಲಿಂಗೇಶ ಶಿವಶಿಂಪಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.