ADVERTISEMENT

‘ಖಾದಿ ರಾಷ್ಟ್ರಧ್ವಜ ತಯಾರಿಕೆಗೆ ಕುತ್ತು ತಂದ ಕೇಂದ್ರದ ತಿದ್ದುಪಡಿ’

ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಅಧ್ಯಕ್ಷ ಕೆ.ವಿ.‌ ಪತ್ತಾರ ಆತಂಕ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2022, 15:28 IST
Last Updated 16 ಮಾರ್ಚ್ 2022, 15:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹುಬ್ಬಳ್ಳಿ: ‌‘ಕೇಂದ್ರ ಸರ್ಕಾರ ಪಾಲಿಸ್ಟರ್ ಬಟ್ಟೆಯಿಂದಲೂ ರಾಷ್ಟ್ರಧ್ವಜ ತಯಾರಿಸಲು ಅನುಮತಿ ಕೊಟ್ಟಿದೆ. ಇದರಿಂದಾಗಿ, ಬಿಐಎಸ್ ಮಾನದಂಡದ ಪ್ರಕಾರ ರಾಷ್ಟ್ರಧ್ವಜ ತಯಾರಿಸುವ ದೇಶದ ಏಕೈಕ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಸಂಘ ಸೇರಿದಂತೆ, ಇದರಡಿ ಕಾರ್ಯ ನಿರ್ವಹಿಸುವ ಸಂಘಗಳ ಅಸ್ತಿತ್ವಕ್ಕೆ ಕುತ್ತು ಬಂದಿದೆ’ ಎಂದು ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಅಧ್ಯಕ್ಷ ಕೆ.ವಿ.‌ ಪತ್ತಾರ ಆತಂಕ ವ್ಯಕ್ತಪಡಿಸಿದರು.

‘ಇದಕ್ಕಾಗಿ ‘ಫ್ಲಾಗ್ ಕೋಡ್ ಆಫ್ ಇಂಡಿಯಾ-2002’ ಕಾಯ್ದೆಗೆ ಸರ್ಕಾರ ತಿದ್ದುಪಡಿ ತಂದಿದೆ. ಪಾಲಿಸ್ಟರ್ ಬಟ್ಟೆಯಿಂದ ಧ್ವಜ ತಯಾರಿಸುವುದು ಸಂವಿಧಾನಬಾಹಿರವಾಗಿದೆ. ಈ ತಿದ್ದುಪಡಿಯು, ಗಾಂಧೀಜಿ ಅವರು ಆರಂಭಿಸಿದ ಖಾದಿ ಉದ್ಯಮದ ಅವನತಿಗೆ ಕಾರಣವಾಗಲಿದೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಕೆ.ವಿ.‌ ಪತ್ತಾರ

ಕೇಂದ್ರದಿಂದ ಬೇಡಿಕೆ ಸಲ್ಲಿಸಿಲ್ಲ:

ADVERTISEMENT

‘ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ರಾಷ್ಟ್ರಧ್ವಜಕ್ಕೆ ಹೆಚ್ಚು ಬೇಡಿಕೆ ಇರುವುದರಿಂದ, ಎಲ್ಲಾ ಖಾದಿ ಸಂಸ್ಥೆಗಳಲ್ಲೂ ರಾಷ್ಟ್ರಧ್ವಜದ ಬಟ್ಟೆ ತಯಾರಿಸಲು ಖಾದಿ ಆಯೋಗದ ಅಧ್ಯಕ್ಷ ವಿನಯಕುಮಾರ ಸಕ್ಸೇನಾ ಕಳೆದ ವರ್ಷ ಸೂಚಿಸಿದ್ದರು. ಅದರಂತೆ, ಬಟ್ಟೆ ತಯಾರಿಸಿದ್ದೇವೆ. ಆದರೆ, ಇದುವರೆಗೆ ಕೇಂದ್ರ ಸರ್ಕಾರ ಯಾವುದೇ ಬೇಡಿಕೆ ಸಲ್ಲಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಗ್ರಾಮೋದ್ಯೋಗಗಳಲ್ಲಿ ತಯಾರಾಗುವ ರಾಷ್ಟ್ರಧ್ವಜವು ದುಬಾರಿಯಾಗಿರುವುದರಿಂದ, ಸರ್ಕಾರ ಪಾಲಿಸ್ಟರ್ ಬಟ್ಟೆಯಲ್ಲಿ ರಾಷ್ಟ್ರಧ್ವಜ ತಯಾರಿಸಲು ತಿದ್ದುಪಡಿ ತಂದಿದೆ ಎನ್ನಲಾಗಿದೆ. ಜೊತೆಗೆ, 75ನೇ ಸ್ವಾತಂತ್ರ್ಯೋತ್ಸವಕ್ಕೆ ಚೀನಾದಿಂದ ಧ್ವಜಗಳನ್ನು ತರಿಸಿಕೊಳ್ಳಲು ಮುಂದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ’ ಎಂದು ಆರೋಪಿಸಿದರು.

ಸ್ಪಂದಿಸದ ಪ್ರಧಾನಿ:

‘ಸರ್ಕಾರದ ನಡೆ ಖಂಡಿಸಿ, ಖಾದಿ ಗ್ರಾಮೋದ್ಯೋಗಗಳ ಉಳಿವಿಗೆ ಕ್ರಮ ಕೈಗೊಳ್ಳುವಂತೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಮನವಿ ಸಲ್ಲಿಸಿದ್ದೇವೆ. ಆದರೆ, ಇದುವರೆಗೆ ಯಾರೂ ಸ್ಪಂದಿಸಿಲ್ಲ’ ಎಂದು ಆಕ್ರೋಶ ಹೊರಹಾಕಿದರು.

‘ರಾಷ್ಟ್ರಧ್ವಜ ತಯಾರಿಕೆಗೆ ಸಂಬಂಧಿಸಿದ ಕಾಯ್ದೆಗೆ ತಂದಿರುವ ತಿದ್ದುಪಡಿಯನ್ನು ರದ್ದುಪಡಿಸಿ, ಖಾದಿ ಗ್ರಾಮೋದ್ಯೋಗಗಳಿಂದಲೇ ಧ್ವಜಗಳನ್ನು ಖರೀದಿಸಬೇಕು. ತಪ್ಪಿದಲ್ಲಿ ರಾಜ್ಯವ್ಯಾಪಿ ಹೋರಾಟ ಅನಿವಾರ್ಯ’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.