ADVERTISEMENT

ಈದ್ಗಾ ಮೈದಾನದಲ್ಲಿ ಗಣೇಶಮೂರ್ತಿ ಪ್ರತಿಷ್ಟಾಪನೆ | ಕೋರ್ಟ್ ಆದೇಶ ಸ್ವಾಗತಾರ್ಹ-ಜೋಶಿ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2022, 4:28 IST
Last Updated 31 ಆಗಸ್ಟ್ 2022, 4:28 IST
   

ಹುಬ್ಬಳ್ಳಿ: 'ನಗರದ ಈದ್ಗಾ ಮೈದಾನದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪಿಸುವ ಸಂಬಂಧ ಮಹಾನಗರ ಪಾಲಿಕೆ ತೆಗೆದುಕೊಂಡ ನಿರ್ಧಾರವನ್ನು ಹೈಕೋರ್ಟ್ ಎತ್ತಿ‌ಹಿಡಿದಿರುವುದು ಸ್ವಾಗತಾರ್ಹ' ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಮಂಗಳವಾರ ತಡರಾತ್ರಿ ಈದ್ಗಾ ಮೈದಾನಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು. 'ಮೂರ್ತಿ ಪ್ರತಿಷ್ಠಾಪನೆಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಅದು ಉತ್ತಮ ಬೆಳವಣಿಗೆ ಆಗಿರಲಿಲ್ಲ. ಈ ಬಗ್ಗೆ ನ್ಯಾಯಾಲಯಕ್ಕೆ ಹೋಗುವ ಅಗತ್ಯವೂ ಇರಲಿಲ್ಲ‌' ಎಂದರು.

'ಹೈಕೋರ್ಟ್ ಮೂರ್ತಿಪ್ರತಿಷ್ಠಾಪನೆಗೆ ಷರತ್ತು ಬದ್ಧ ಆದೇಶ ನೀಡಿದೆ. ಈ ಸಂಬಂಧ ಆಯುಕ್ತರಿಗೆ ಪರಮಾಧಿಕಾರ‌ ನೀಡಿದೆ‌. ಪಾಲಿಕೆ ನೀಡುವ ಯಾವುದೇ ನಿಯಮಗಳನ್ನು ಉಲ್ಲಂಘನೆ ಮಾಡಬಾರದು. ಶಾಂತಿ, ಸೌಹಾರ್ದದಿಂದ ಮೂರು ದಿನ ಹಬ್ಬ ಆಚರಿಸಬೇಕು' ಎಂದು ಹೇಳಿದರು.

ADVERTISEMENT

'1992 ರಲ್ಲಿ ಕಾಂಗ್ರೆಸ್ ಇಲ್ಲಿ ಧ್ವಜಾರೋಹಣಕ್ಕೆ ಅವಕಾಶ ನೀಡಿರಲಿಲ್ಲ. ಇದೀಗ ಗಣೇಶ ಪ್ರತಿಷ್ಠಾಪನೆಗೆ ಕೆಲವರು ವಿರೋಧ ವ್ಯಕ್ತಪಡಿಸಿ ತಮ್ಮ ದಿವಾಳಿತನ ಪ್ರದರ್ಶಿಸಿದ್ದಾರೆ' ಎಂದು ವ್ಯಂಗ್ಯವಾಡಿದರು.

'ಪಾಲಿಕೆಯಿಂದ ರಚನೆಯಾದ ಸದನ ಸಮಿತಿಯ ನಿರ್ಣಯದ ಪರವಾಗಿ ವಾದ ನಡೆಸಿದ ವಕೀಲರಿಗೂ ಧನ್ಯವಾದ' ಎಂದರು.

ಇದಕ್ಕೂ ಮೊದಲು ಮೈದಾನದ ಹೊರಗೆ ಬಿಜೆಪಿ, ಹಿಂದೂ ಸಂಘಟನೆ ಕಾರ್ಯಕರ್ತರು ಸಚಿವರ ಜೊತೆ ಘೋಷಣೆ ಕೂಗಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.