ADVERTISEMENT

ಧಾರವಾಡದಲ್ಲೂ ಪಸರಿಸಿದ ಕಾಫಿ ಬೆಳೆ ಘಮಲು! ದಾಸನಕೊಪ್ಪ ರೈತನ ವಿಶಿಷ್ಠ ಸಾಧನೆ

ಮಿಶ್ರ ಬೇಸಾಯ ಪದ್ಧತಿಯಲ್ಲಿ ಅರೇಬಿಕಾ ತಳಿ ಕಾಫಿ ಬೆಳೆದ ರೈತ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 5:04 IST
Last Updated 2 ಜನವರಿ 2026, 5:04 IST
ಧಾರವಾಡ ತಾಲ್ಲೂಕಿನ ದಾಸನಕೊಪ್ಪ ಗ್ರಾಮದ ಜಮಿನಿನಲ್ಲಿ ಬೆಳೆದ ಕಾಫಿ ತೋಟದೊಂದಿಗೆ ಕೃಷಿ ಕಾರ್ಮಿಕ
ಧಾರವಾಡ ತಾಲ್ಲೂಕಿನ ದಾಸನಕೊಪ್ಪ ಗ್ರಾಮದ ಜಮಿನಿನಲ್ಲಿ ಬೆಳೆದ ಕಾಫಿ ತೋಟದೊಂದಿಗೆ ಕೃಷಿ ಕಾರ್ಮಿಕ   

ಹುಬ್ಬಳ್ಳಿ: ಮಲೆನಾಡಿನ ಪ್ರದೇಶದಲ್ಲಿ ಕಾಫಿ ಬೆಳೆಯುವುದು ಸಾಮಾನ್ಯ. ತಂಪು ವಾತಾವರಣ, ಎತ್ತರದ ಪ್ರದೇಶ ಕಾಫಿ ಬೆಳೆಗೆ ಸೂಕ್ತ. ಹೀಗಿರುವಾಗ ಬಯಲುಸೀಮೆ ನಾಡಿನಲ್ಲಿ ಕಾಫಿ ಬೆಳೆದು ಯಶಸ್ಸು ಪಡೆದ ಧಾರವಾಡ ತಾಲ್ಲೂಕು ದಾಸನಕೊಪ್ಪ ಗ್ರಾಮದ ರೈತ ಸಿಕಂದರಖಾನ್‌ ಸರದೇಸಾಯಿ ಅವರು ಇತರ ರೈತರಿಗೆ ಮಾದರಿಯಾಗಿದ್ದಾರೆ. 

ಮಿಶ್ರ ಬೇಸಾಯ ಪದ್ಧತಿ ಅನುಸರಿಸಿ ಆರು ಎಕರೆ ಭೂಮಿಯಲ್ಲಿ ಸುಮಾರು ಇಪ್ಪತ್ತು ವರ್ಷದ ಹಿಂದೆ ತೆಂಗು, ಮಾವು, ಚಿಕ್ಕು ಬೆಳೆದಿದ್ದರು. ಮಧ್ಯದಲ್ಲಿ ಅರೇಬಿಕಾ ತಳಿಯ (ಕಾವೇರಿ) ಕಾಫಿ ಬೆಳೆ ಬೆಳೆದು ಉತ್ತಮ ಫಸಲು ಪಡೆದುಕೊಂಡಿದ್ದಾರೆ. 

ಮಿಶ್ರ ಬೇಸಾಯ ಮಾಡುವ ಉದ್ದೇಶದಿಂದ ತೋಟದಲ್ಲಿ ಕಾಫಿ ಬೆಳೆಯಬೇಕು ಎಂದು ಯೋಚಿಸಿದೆ. ಪೂರಕವಾಗಿ ಜಮೀನಿಗೆ ಕೆರೆಮಣ್ಣು ಹಾಗೂ ಮರಳು ಮಿಶ್ರಿತ ಮಣ್ಣು ಹಾಕಿಸಿ, ಚಿಕ್ಕಮಗಳೂರಿನಿಂದ ತರಿಸಿದ ಅರೇಬಿಕಾ ತಳಿಯ ಕಾಫಿ ಸಸಿ ನಾಟಿ ಮಾಡಿಸಿರುವೆ ಎಂದು ತೋಟದ ಮಾಲೀಕ ಸಿಕಂದರಖಾನ್‌ ಸರದೇಸಾಯಿ ತಿಳಿಸಿದರು.

ADVERTISEMENT

ತೋಟದ ತುಂಬ ಗಿಡ ಮರಗಳು ಹೆಚ್ಚಾಗಿದ್ದು, ಕಾಫಿ ಬೆಳೆಯಲು ಸುಲಭವಾಯಿತು. ಕಾಫಿ ಬೆಳೆಗೆ ಸಗಣಿ ಗೊಬ್ಬರ ಹಾಗೂ ರೋಗ ನಿಯಂತ್ರಣಕ್ಕೆ ಕಾಪರ್‌ ಸಲ್ಪೇಟ್‌ನಂತಹ ರಾಸಾಯನಿಕ ಕ್ರಿಮಿನಾಶಕ ಸಿಂಪಡಿಸುತ್ತೇವೆ. ಪ್ರತಿ ಎಕರೆಗೆ ಅಂದಾಜು 15 ಕ್ವಿಂಟಲ್‌ ಇಳುವರಿ ಲಭಿಸುತ್ತದೆ. ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ ಕಾಫಿ ಶುಷ್ಕ ಬೀಜಕ್ಕೆ ಅಂದಾಜು ₹15 ಸಾವಿರದಿಂದ ₹20 ಸಾವಿರ ದರ ಲಭಿಸುತ್ತದೆ. ಇದರಿಂದ ವರ್ಷಕ್ಕೆ ಅಂದಾಜು ₹1 ಲಕ್ಷದ ವರೆಗೆ ಆದಾಯ ಬರುತ್ತದೆ ಎನ್ನುತ್ತಾರೆ ಅವರು. 

ಮಲೆನಾಡು ಪ್ರದೇಶಕ್ಕೆ ಹೋಲಿಸಿದರೆ ನಮ್ಮ ಕಡೆ ಇಳುವರಿ ಕಡಿಮೆ. ಆದರೂ ಪರ್ಯಾಯ ಬೆಳೆಯಾಗಿ ಕಾಫಿ ಬೆಳೆದಿರುವೆ. ಕಳೆದ ವರ್ಷಕ್ಕಿಂತ ಈ ವರ್ಷ ಇಳುವರಿ ಕುಂಠಿತಗೊಂಡಿದ್ದು, ಮುಂದಿನ ವರ್ಷ ಹೊಸ ಸಸಿಗಳನ್ನು ತರಿಸಿ ಮತ್ತೆ ನಾಟಿ ಮಾಡಿಸುವೆ ಎಂದು ತಿಳಿಸಿದರು.

ಬಯಲುಸೀಮೆ ನಾಡಿನಲ್ಲೂ ಮಿಶ್ರ ಬೇಸಾಯ ಅನುಸರಿಸಿ ತೋಟಗಳಲ್ಲಿ ಕಾಫಿ ಬೆಳೆಯಬಹುದು ಎಂಬುದಕ್ಕೆ ಒಂದು ಉತ್ತಮ ಮಾದರಿ.

---

ಸಿಕಂದರಖಾನ್‌ ಸರದೇಸಾಯಿ

ಬಯಲುಸೀಮೆ ನಾಡಿನಲ್ಲೂ ಕಾಫಿ ಬೆಳೆಯಬೇಕೆಂಬ ಹಂಬಲದಿಂದ ಕಾಫಿ ಬೆಳೆದೆ. ತೋಟದಲ್ಲಿ ತಂಪು ವಾತಾವರಣ ಇರುವುದರಿಂದ ಪ್ರತಿ ವರ್ಷವು ಉತ್ತಮ ಆದಾಯ ಲಭಿಸಿತು.

–ಸಿಕಂದರಖಾನ್‌ ಸರದೇಸಾಯಿ ತೋಟದ ಮಾಲೀಕ