ADVERTISEMENT

ಮೈ ಕೊರೆಯುವ ಚಳಿ: ಧಾರವಾಡ ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ 7.4 ಡಿಗ್ರಿ ಸೆಲ್ಸಿಯಸ್‌

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 4:56 IST
Last Updated 15 ಡಿಸೆಂಬರ್ 2025, 4:56 IST
ವಿಪರೀತ ಚಳಿಯಿಂದ ರಕ್ಷಣೆ ಪಡೆಯಲು ಹುಬ್ಬಳ್ಳಿಯ ಅಮರಗೋಳದಲ್ಲಿ ಗ್ರಾಮಸ್ಥರು ಬೆಂಕಿಯ ಶಾಖಕ್ಕೆ ಮೈಯೊಡ್ಡಿದರು
–ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ವಿಪರೀತ ಚಳಿಯಿಂದ ರಕ್ಷಣೆ ಪಡೆಯಲು ಹುಬ್ಬಳ್ಳಿಯ ಅಮರಗೋಳದಲ್ಲಿ ಗ್ರಾಮಸ್ಥರು ಬೆಂಕಿಯ ಶಾಖಕ್ಕೆ ಮೈಯೊಡ್ಡಿದರು –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಹುಬ್ಬಳ್ಳಿ: ರಾಜ್ಯದ ವಿವಿಧೆಡೆ ತಾಪಮಾನ ಕುಸಿತವಾಗಿದ್ದು, ಧಾರವಾಡ ಜಿಲ್ಲೆ ಸೇರಿದಂತೆ ಹುಬ್ಬಳ್ಳಿ–ಧಾರವಾಡ ಮಹಾನಗರದಲ್ಲೂ ಅದರ ಪರಿಣಾಮ ಬೀರಿದೆ. ಉತ್ತರ ಒಳನಾಡಿನ ಉತ್ತರ ಭಾಗದಲ್ಲಿ ಶೀತಗಾಳಿ ಹೆಚ್ಚುತ್ತಿರುವುದರಿಂದ, ರಾತ್ರಿ ಹಾಗೂ ಬೆಳಿಗ್ಗೆ ಜನರು ಗಡಗಡ ನಡುಗುತ್ತಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಡಿ.16ರವರೆಗೂ ಆರೇಂಜ್‌ ಅಲರ್ಟ್‌ ಘೋಷಣೆ ಮಾಡಿದ್ದು, ವೃದ್ಧರಿಗೆ, ಮಕ್ಕಳಿಗೆ ಹಾಗೂ ಅನಾರೋಗ್ಯ ಪೀಡಿತರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ. 

ಧಾರವಾಡದಲ್ಲಿ ಭಾನುವಾರ ಬೆಳಿಗ್ಗೆ ಕನಿಷ್ಠ 7.4 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು. ಇತ್ತೀಚಿನ ವರ್ಷದಲ್ಲಿ ಇದು ಅತೀ ಕಡಿಮೆ ದಾಖಲೆಯ ತಾಪಮಾನವಾಗಿದೆ. ಇದೇ ತಾಪಮಾನ ಮುಂದಿನ ಮೂರು ದಿನಗಳವೆರಗೂ ಇರಲಿದೆ. ನಂತರ ದಿನಗಳಲ್ಲಿ ವಾತಾವರಣದಲ್ಲಿ ಶೀತಗಾಳಿ ಪ್ರಮಾಣ ಕಡಿಮೆಯಾಗಲಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸರಾಸರಿ 13 ಡಿಗ್ರಿ ಸೆಲ್ಸಿಯಸ್‌ ತಾಪಮಾನವಿತ್ತು ಎಂದು ಹವಾಮಾನ ಇಲಾಖೆ ಹೇಳುತ್ತದೆ.

ADVERTISEMENT

ಶೀತಗಾಳಿಯಿಂದಾಗಿ ವಾತಾವರಣದಲ್ಲಿನ ತಾಪಮಾನ ಕನಿಷ್ಠ ಮಟ್ಟಕ್ಕೆ ಇಳಿದಿದ್ದು, ಪ್ರತಿ ಗಂಟೆಗೆ ಶೀತಗಾಳಿ 14 ಕಿ.ಮೀ. ನಿಂದ 24 ಕಿ.ಮೀ. ವೇಗದಲ್ಲಿ ಬೀಸಬಹುದು ಎಂದೂ ಇಲಾಖೆ ಮುನ್ಸೂಚನೆ ನೀಡಿದೆ. ಹಗಲಿನ ಮಧ್ಯಾಹ್ನ 1 ರಿಂದ 3 ಗಂಟೆ ವರೆಗೆ ಪ್ರಖರ ಬಿಸಿಲು ಜನರ ನೆತ್ತಿ ಸುಡುತ್ತಿದೆ. ಸಂಜೆಯಾಗುತ್ತಿದ್ದಂತೆ ಶೀತಗಾಳಿ ಬೀಸುವುದರಿಂದ, ಚಳಿ ಆವರಿಸುತ್ತಿದೆ. ಮಾಗಿ ಚಳಿಗೆ ಶೀತಗಾಳಿ ಸೇರಿರುವುದರಿಂದ ಜನರು ಹೈರಾಣಾಗುತ್ತಿದ್ದಾರೆ.

ಪ್ರಸ್ತುತ ವರ್ಷ ಸರಿಯಾಗಿ ಮಳೆಯಾದ ಕಾರಣ ವಾತಾವರಣದಲ್ಲಿ ನೀರಿನ ಅಂಶ ಸಮರ್ಪಕವಾಗಿದೆ. ಇದರಿಂದಾಗಿ ಶೀತಗಾಳಿ ಬೀಸುತ್ತಿದೆ. ಬಿಸಿಲಿಗೆ ದೇಹ ಹೊಂದಿಕೊಂಡಿರುವುದರಿಂದ ಹಾಗೂ ಒಮ್ಮೆಲೆ ವಾತಾವರಣದ ತಂಪಾಗಿರುವುದರಿಂದ ಚಳಿಯ ಅನುಭವ ಹೆಚ್ಚಾಗುತ್ತಿದೆ. ಶೀತಗಾಳಿ ಬೀಸುವಾಗ ಇದು ವಾತಾವರಣದಲ್ಲಾಗುವ ಸಹಜ ಪ್ರಕ್ರಿಯೆ ಎಂದು ಹವಾಮಾನ ತಜ್ಞರು ಹೇಳುತ್ತಾರೆ.

‘ಸಂಜೆಯಾಗುತ್ತಿದ್ದಂತೆ ಚಳಿ ಆವರಿಸುತ್ತದೆ. ರಾತ್ರಿ 10ರ ನಂತರ ಅದು ವಿಪರೀತವಾಗುತ್ತದೆ. ಬೆಳಿಗ್ಗೆಯಂತೂ ಐಸ್‌ ಟ್ಯೂಬ್‌ನಲ್ಲಿ ಇದ್ದಂತ ಅನುಭವ. ಪ್ರತಿದಿನ ಬೆಳಿಗ್ಗೆ 6ಕ್ಕೆ ವಾಯುವಿಹಾರಕ್ಕೆ ಹೋಗುತ್ತಿದ್ದೆ. ಮೈಕೊರೆಯುವ ಚಳಿ ಸಹಿಸಲು ಸಾಧ್ಯವಾಗದ ಕಾರಣ, ಎರಡು ದಿನಗಳಿಂದ ವಾಯುವಿಹಾರ ಬಿಟ್ಟಿದ್ದೇನೆ’ ಎಂದು ಕೇಶ್ವಾಪುರ ರಾಮಣ್ಣ ಸಾಣೇಹಳ್ಳಿ ಹೇಳಿದರು.

‘ಇತ್ತೀಚಿಗಿನ ವರ್ಷದಲ್ಲಿ ಇಷ್ಟೊಂದು ಗಾಢವಾದ ಚಳಿಯಂತೂ ನನ್ನ ಅನುಭವಕ್ಕೆ ಬಂದಿಲ್ಲ. ಸೂರ್ಯನ ಶಾಖ ಜಾಸ್ತಿ ಇರುವ ಮಧ್ಯಾಹ್ನ 12 ಹೊತ್ತಿಗೂ ಚಳಿ ಇರುತ್ತದೆ. ಗಡಗಡ ನಡುಗುವ ಚಳಿಯಲ್ಲಿಯೇ ಮುಖಕ್ಕೆ, ತಲೆಗೆ, ಕೈಗೆ ಹಾಗೂ ಕಾಲಿಗೆ ರಕ್ಷಣೆ ಮಾಡಿಕೊಂಡು ನಗರ ಸ್ವಚ್ಛತೆಗೆ ಹೋಗುತ್ತೇನೆ’ ಎಂದು ಪೌರ ಕಾರ್ಮಿಕ ಮಹಿಳೆ ಸುನಂದಾ ತಿರಮಲಪ್ಪ ಹೇಳುತ್ತಾರೆ.

ಹೃದಯ ರೋಗಿಗಳಿಗೆ ಸೂಚನೆ..

ವಾತಾವರಣದಲ್ಲಿ ತಾಪಮಾನ ಕುಸಿತವಾಗಿರುವುದರಿಂದ ಹೃದಯ ಸಂಬಂಧಿತ ರೋಗಿಗಳು ಅಗತ್ಯವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವುದು ಹೃದ್ರೋಗ ತಜ್ಞರ ಸಲಹೆ. ‘ಹೃದಯ ಹಾಗೂ ಶ್ವಾಸಕೋಶ ಸಂಬಂಧಿತ ರೋಗಿಗಳು ಹೃದಯಕ್ಕೆ ಸ್ಟಂಟ್‌ ಅಳವಡಿಸಿಕೊಂಡವರು ಬೈಪಾಸ್‌ ಶಸ್ತ್ರಚಿಕಿತ್ಸೆಗೆ ಒಳಗಾದವರು ಹಾಗೂ ಔಷಧಿಗಳನ್ನು ಸೇವನೆ ಮಾಡುತ್ತಿರುವವರು ಬೆಳಿಗ್ಗೆ 7.30ರ ಒಳಗೆ ವಾಯುವಿಹಾರಕ್ಕೆ ತೆರಳಲೇಬಾರದು. ನಂತರವೂ ವಾಯುವಿಹಾರ ಮಾಡಬೇಕಾದರೆ ಕಡ್ಡಾಯವಾಗಿ ಶೂ ಧರಿಸಬೇಕು. ವಿಪರೀತ ಚಳಿಯಿಂದ ರಕ್ತದ ಹರಿಯುವಿಕೆಯಲ್ಲಿ ಏರುಪೇರಾಗಿ ಹೃದಯದ ಮೇಲೆ ಪರಿಣಾಮ ಬೀರಬಹುದು’ ಎಂದು ವೈದ್ಯ ಡಾ. ಜಿ. ಸತ್ತೂರು ಎಚ್ಚರಿಕೆ ನೀಡುತ್ತಾರೆ. ‘ಹೃದಯ ಸಮಸ್ಯೆ ಇರುವವರು ಬೆಚ್ಚಗಿನ ದಿರಿಸು ಧರಿಸುವುದು ಹೆಚ್ಚು ನೀರು ಕುಡಿಯುವುದು ಧೂಮಪಾನ ಸೇವನೆ ಮಾಡದಿರುವುದು ಒಳ್ಳೆಯದು. ಚಳಿಯೆಂದು ನೀರು ಕಡಿಮೆ ಕುಡಿದರೆ ತೇವಾಂಶ ಕಡಿಮೆಯಾಗಿ ಚರ್ಮ ಶುಷ್ಕವಾಗಿ ಬಿರುಕು ಬಿಡುತ್ತದೆ. ಹೆಚ್ಚಿನ ಸಮಸ್ಯೆಯಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.