
ಹುಬ್ಬಳ್ಳಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧರಿಸಿರುವ ದುಬಾರಿ ಬೆಲೆಯ ವಾಚ್ ಬಗ್ಗೆ ಚರ್ಚೆಯಾಗುತ್ತಿದೆಯೇ ಹೊರತು, ಅಭಿವೃದ್ಧಿ ಕುರಿತು ಯಾವುದೇ ಚರ್ಚೆಯಾಗುತ್ತಿಲ್ಲ. ರಾಜ್ಯದಲ್ಲಿ ಅರಾಜಕತೆ ಸ್ಥಿತಿಯಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಮಾಜವಾದಿ ಎಂದು ಹೇಳುವ ಸಿಎಂ ಸಿದ್ದರಾಮಯ್ಯ ಅವರು ಲಕ್ಷಾಂತರ ಮೌಲ್ಯದ ವಾಚ್ ಕಟ್ಟುವ ಮೂಲಕ ಮಜಾವಾದಿಯಾಗಿದ್ದಾರೆ’ ಎಂದು ವ್ಯಂಗ್ಯವಾಡಿದರು.
‘ಮುಖ್ಯಮಂತ್ರಿ ಅಧಿಕಾರ ಹಂಚಿಕೆ ಚರ್ಚೆಗೆ ಪೂರ್ಣವಿರಾಮ ಹಾಕಿದ್ದೇವೆ ಎಂದು ಕಾಂಗ್ರೆಸ್ ಹೈಕಮಾಂಡ್ ಎಲ್ಲಿಯೂ ಹೇಳಿಲ್ಲ. ಕಾಂಗ್ರೆಸ್ ಹೈಕಮಾಂಡ್ ದುರ್ಬಲವಾಗಿದೆ’ ಎಂದು ಟೀಕಿಸಿದರು.
ರಾಜಕೀಯ ಮಾಡಿಲ್ಲ: ‘ದೆಹಲಿಯಲ್ಲಿ ಮುಖ್ಯಮಂತ್ರಿ ಅವರು ಕರೆದ ರಾಜ್ಯದ ಸಂಸದರ ಸಭೆಗೆ ಗೈರು ಆಗಿರುವ ಬಗ್ಗೆ ಈಗಾಗಲೇ ಸ್ಪಷ್ಟನೆ ನೀಡಿದ್ದು, ಅಂದು ಪ್ರಧಾನಿ ಅವರೊಂದಿಗೆ ಸಭೆ ಇತ್ತು. ಹೀಗಾಗಿ ಸಭೆಗೆ ಹಾಜರಾಗಿರಲಿಲ್ಲ. ಇದನ್ನು ನಾವು ರಾಜಕಾರಣಗೊಳಿಸಿಲ್ಲ. ಮುಖ್ಯಮಂತ್ರಿ ಸ್ಥಾನದ ಬಗ್ಗೆ ಗೌರವವಿದೆ. ಫೋನ್ ಮಾಡಿ ತಿಳಿಸಿದ್ದರೆ ಸಮಯ ನೋಡಿಕೊಂಡು ಹೋಗುತ್ತಿದ್ದೇವು. ರಾಜ್ಯದ ನೆಲ, ಜಲಕ್ಕಾಗಿ ನಾವೆಲ್ಲಾ ಬದ್ಧರಿದ್ದೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.