ADVERTISEMENT

ಎರಡು ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿ: ಆರ್.ವಿ. ದೇಶಪಾಂಡೆ

ಕಾಂಗ್ರೆಸ್‌ ಉಸ್ತುವಾರಿಗಳ ಭೇಟಿಗೆ ಆಕಾಂಕ್ಷಿಗಳ, ವಿವಿಧ ಸಮಾಜದ ಮುಖಂಡರ ದಂಡು

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 11:43 IST
Last Updated 19 ಆಗಸ್ಟ್ 2021, 11:43 IST
ಹುಬ್ಬಳ್ಳಿಯಲ್ಲಿ ಗುರುವಾರ ಪಾಲಿಕೆ ಚುನಾವಣೆಯ ಕಾಂಗ್ರೆಸ್‌ ಉಸ್ತುವಾರಿಗಳ ಹಾಗೂ ಮುಖಂಡರ ಸಭೆ ನಡೆಯಿತು
ಹುಬ್ಬಳ್ಳಿಯಲ್ಲಿ ಗುರುವಾರ ಪಾಲಿಕೆ ಚುನಾವಣೆಯ ಕಾಂಗ್ರೆಸ್‌ ಉಸ್ತುವಾರಿಗಳ ಹಾಗೂ ಮುಖಂಡರ ಸಭೆ ನಡೆಯಿತು   

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್‌ ಪಕ್ಷದಲ್ಲಿ ಚಟುವಟಿಕೆ ಚುರುಕುಗೊಂಡಿವೆ.

82 ಸ್ಥಾನಗಳಿಗೆ ಸಲ್ಲಿಕೆಯಾಗಿರುವ 365 ಅರ್ಜಿಗಳ ಆಕಾಂಕ್ಷಿಗಳು ಮತ್ತು ಅವರ ಬೆಂಬಲಿಗರು ಪಕ್ಷದ ಚುನಾವಣಾ ಉಸ್ತುವಾರಿಗಳ ಹಾಗೂ ಮುಖಂಡರನ್ನು ಭೇಟಿಮಾಡಿ ನಮಗೇ ಟಿಕೆಟ್‌ ನೀಡುವಂತೆ ಕೋರಿಕೊಳ್ಳುತ್ತಿದ್ದಾರೆ.

ಟಿಕೆಟ್ ನೀಡಲು ಶಿಫಾರಸು ಮಾಡುವಂತೆ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್‌ ಹಳ್ಳೂರ, ಶಾಸಕ ಪ್ರಸಾದ ಅಬ್ಬಯ್ಯ, ಮುಖಂಡರಾದ ಅಲ್ತಾಫ್‌ ಕಿತ್ತೂರ, ಇಸ್ಮಾಯಿಲ್‌ ತಮಟಗಾರ, ಸದಾನಂದ ಡಂಗನವರ, ಅನ್ವರ್‌ ಮುಧೋಳ, ಗಿರೀಶ ಗದಿಗೆಪ್ಪಗೌಡರ ಸೇರಿದಂತೆ ಹಲವು ನಾಯಕರಿಗೆ ಆಕಾಂಕ್ಷಿಗಳು ದುಂಬಾಲು ಬೀಳುತ್ತಿದ್ದಾರೆ. ಅರ್ಜಿ ಸಲ್ಲಿಸಲು ಆ. 17ರಂದೇ ಕೊನೆಯ ದಿನಾಂಕ ಮುಗಿದಿದ್ದರೂ ಗುರುವಾರ ನಗರದ ಕ್ಯೂಬಿಕ್ಸ್‌ ಹೋಟೆಲ್‌ನಲ್ಲಿ ಅರ್ಜಿಗಳು ಸಲ್ಲಿಕೆಯಾಗುತ್ತಲೇ ಇದ್ದವು.

ADVERTISEMENT

ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದಪಾಲಿಕೆ ಚುನಾವಣೆ ಪಕ್ಷದ ಉಸ್ತುವಾರಿ ಸಮಿತಿ ಅಧ್ಯಕ್ಷ ಆರ್‌.ವಿ. ದೇಶಪಾಂಡೆ, ‘ಸ್ಥಳೀಯವಾಗಿ ಯಾರು ಉತ್ತಮ ಅಭ್ಯರ್ಥಿ ಎನ್ನುವುದನ್ನು ತಿಳಿದುಕೊಳ್ಳಲು ಸಭೆಗಳನ್ನು ನಡೆಸಲಾಗುತ್ತಿದೆ. ಆಕಾಂಕ್ಷಿಗಳ ಹುಮ್ಮಸ್ಸಿನಿಂದ ಖುಷಿಯಾಗಿದೆ. ಶುಕ್ರವಾರ ಪಟ್ಟಿಯನ್ನು ಅಂತಿಮಗೊಳಿಸಿ ಕೆಪಿಸಿಸಿಗೆ ಕಳುಹಿಸಲಾಗುವುದು. ಎರಡು ದಿನಗಳಲ್ಲಿ ಪಟ್ಟಿ ಪ್ರಕಟವಾಗಲಿದೆ’ ಎಂದರು.

ಸಭೆ: ಟಿಕೆಟ್‌ ಅಂತಿಮಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ನಾಯಕರು ಹೋಟೆಲ್‌ನಲ್ಲಿ ಸರಣಿ ಸಭೆಗಳನ್ನು ನಡೆಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಇಲ್ಲಿನ ಚುನಾವಣೆಗೆ ಪಕ್ಷದ ಸಂಯೋಜಕರಾಗಿರುವ ಆರ್‌. ಧ್ರುವ ನಾರಾಯಣ, ವಿಧಾನಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ, ಸದಸ್ಯರಾದ ಶಿವಾನಂದ ಪಾಟೀಲ ಹಾಗೂ ತನ್ವೀರ್‌ ಸೇಠ್‌ ಅವರು ಸ್ಥಳೀಯ ಮುಂಚೂಣಿ ಘಟಕದ ನಾಯಕರನ್ನು ಕರೆದು ಚರ್ಚಿಸಿದರು. ಪಕ್ಷದ ಹಿರಿಯ ನಾಯಕ ಎ.ಎಂ. ಹಿಂಡಸಗೇರಿ ಕೂಡ ಇದ್ದರು.

ಟಿಕೆಟ್‌ಗಾಗಿ ಅರ್ಜಿ ಸಲ್ಲಿಸುವ ಆಕಾಂಕ್ಷಿಗಳಲ್ಲಿ ಗೆಲ್ಲುವ ಸಂಭಾವ್ಯ ಅಭ್ಯರ್ಥಿಗಳು ಯಾರು? ಅವರ ಸಾಮರ್ಥ್ಯವೇನು? ಪಕ್ಷಕ್ಕೆ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡಿದ್ದಾರಾ? ಕ್ಷೇತ್ರದ ಜನರೊಂದಿಗೆ ಅವರ ಒಡನಾಟ ಹೇಗಿದೆ? ಹೀಗೆ ಹಲವು ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಂಡರು.

ಸಾಕಷ್ಟು ಟಿಕೆಟ್ ಆಕಾಂಕ್ಷಿಗಳು ಖುದ್ದು ನಾಯಕರನ್ನು ಭೇಟಿಯಾಗಲು ಹವಣಿಸುತ್ತಿದ್ದರು. ಆಕಾಂಕ್ಷಿಗಳ ಜೊತೆ ಅವರ ಬೆಂಬಲಿಗರು ಕೂಡ ನಿರಂತರವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದ ಕಾರಣ ಕೋವಿಡ್‌ ನಿಯಮ ಉಲ್ಲಂಘನೆಯಾಗುವ ಆತಂಕದಿಂದ ಮುಖಂಡರು ವಾಪಸ್‌ ಕಳುಹಿಸಿದರು. ಸಮಾಜದ ವತಿಯಿಂದ ಮನವಿ ಸಲ್ಲಿಸುವವರು ಮತ್ತು ಮುಂಚೂಣಿ ಘಟಕದ ನಾಯಕರಷ್ಟೇ ಇರಬೇಕು; ಎಲ್ಲರೂ ವಾಪಸ್‌ ಹೋಗಬೇಕೆಂದು ಶ್ರೀನಿವಾಸ್‌ ಮಾನೆ ಸೂಚಿಸಿದರು.

ಮುಸ್ಲಿಂ ಸಮಾಜಕ್ಕೆ 21 ಟಿಕೆಟ್ ಕೊಡಲು ಮನವಿ

ಅವಳಿ ನಗರಗಳಲ್ಲಿ ಮುಸ್ಲಿಂ ಸಮಾಜದ ಜನ ಹೆಚ್ಚಿನ ಸಂಖ್ಯೆಯಲ್ಲಿರುವ 21 ವಾರ್ಡ್‌ಗಳಿಗೆ ನಮ್ಮ ಸಮಾಜದ ಆಕಾಂಕ್ಷಿಗಳಿಗೆ ಟಿಕೆಟ್‌ ಕೊಡಬೇಕು ಎಂದು ಹುಬ್ಬಳ್ಳಿ–ಧಾರವಾಡ ಅಂಜುಮನ್‌ ಸಮಿತಿಗಳ ವತಿಯಿಂದ ಮುಖಂಡರಿಗೆ ಮನವಿ ಸಲ್ಲಿಸಲಾಯಿತು.

‘21 ಕ್ಷೇತ್ರಗಳಲ್ಲಿ ಮುಸ್ಲಿಂ ಸಮಾಜದ ಅಭ್ಯರ್ಥಿಗಳ ಗೆಲುವಿಗೆ ಅನುಕೂಲವಿದೆ. ನಮ್ಮ ಸಮಾಜದ ಮತಗಳು ಎಲ್ಲಿ ಹೆಚ್ಚಿಲ್ಲವೋ ಅಲ್ಲಿ ಬೇರೆ ಸಮಾಜಗಳ ಆಕಾಂಕ್ಷಿಗಳಿಗೆ ಟಿಕೆಟ್‌ ಕೊಟ್ಟರೆ ಅವರಿಗೂ ಬೆಂಬಲವಾಗಿ ನಿಲ್ಲುತ್ತೇವೆ ಎಂದು ಮುಖಂಡರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ’ ಎಂದು ಹುಬ್ಬಳ್ಳಿ ಅಂಜುಮನ್‌ ಸಮಿತಿ ಅಧ್ಯಕ್ಷ ಯುಸೂಫ್‌ ಸವಣೂರ ತಿಳಿಸಿದರು.

ಮಿಷನ್‌ಗಿಂತ, ಸಾಧನೆ ಮುಖ್ಯ: ಆರ್.ವಿ. ದೇಶಪಾಂಡೆ

ಬಿಜೆಪಿ 61 ವಾರ್ಡ್‌ಗಳಲ್ಲಿ ಗೆಲ್ಲುವ ಮಿಷನ್‌ ಹೊಂದಿದೆಯಲ್ಲ ಎಂದು ದೇಶಪಾಂಡೆ ಅವರನ್ನು ಪ್ರಶ್ನಿಸಿದಾಗ ‘ಹಿಂದಿನ ಹತ್ತು ವರ್ಷ ಪಾಲಿಕೆಯಲ್ಲಿ ಆಡಳಿತ ನಡೆಸಿದರೂ ಬಿಜೆಪಿ ಏನೂ ಕೆಲಸ ಮಾಡಿಲ್ಲ. ಕಾಲಿಡಲು ಸಾಧ್ಯವಾಗದಷ್ಟು ಇಲ್ಲಿನ ರಸ್ತೆಗಳು ಕೆಟ್ಟು ಹೋಗಿವೆ. ಮಿಷನ್‌ ಮುಖ್ಯವಲ್ಲ; ಅಂದುಕೊಂಡಿದ್ದನ್ನು ಎಷ್ಟರ ಮಟ್ಟಿಗೆ ಸಾಧಿಸಿ ತೋರಿಸುತ್ತೇವೆ ಎನ್ನುವುದು ಮುಖ್ಯ’ ಎಂದರು.

‘ಬಿಜೆಪಿ ಆಡಳಿತದ ವೈಫಲ್ಯ ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಮುಖ್ಯವಾಗಿ ಇರುತ್ತದೆ. ಅಧಿಕಾರಕ್ಕೆ ಬಂದರೆ ಏನು ಮಾಡುತ್ತೇವೆ ಎನ್ನುವುದನ್ನೂ ಸ್ಪಷ್ಟವಾಗಿ ಹೇಳುತ್ತೇವೆ. ನಮ್ಮ ಪಕ್ಷ ಈ ಬಾರಿ ಬಹುಮತ ಪಡೆಯುವುದು ನಿಶ್ಚಿತ’ ಎಂದು ಭರವಸೆ ವ್ಯಕ್ತಪಡಿಸಿದರು.

ಹುಬ್ಬಳ್ಳಿಯಲ್ಲಿ ಗುರುವಾರ ಪಾಲಿಕೆ ಚುನಾವಣೆಯ ಕಾಂಗ್ರೆಸ್‌ ಉಸ್ತುವಾರಿಗಳ ಹಾಗೂ ಮುಖಂಡರ ಸಭೆ ನಡೆಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.