ADVERTISEMENT

ಬೊಮ್ಮಾಯಿ ಸರ್ಕಾರದಲ್ಲೂ ಭ್ರಷ್ಟಾಚಾರ: ಶಾಸಕ ಜಿ. ಪರಮೇಶ್ವರ ಆರೋಪ

ಟಿಪ್ಪು ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2021, 15:09 IST
Last Updated 10 ನವೆಂಬರ್ 2021, 15:09 IST
ಟಿಪ್ಪು ಜಯಂತಿ ಅಂಗವಾಗಿ ಹುಬ್ಬಳ್ಳಿಯಲ್ಲಿ ಬುಧವಾರ ಶಾಸಕ ಪರಮೇಶ್ವರ ಟಿಪ್ಪು ಭಾವಚಿತ್ರಕ್ಕೆ ನಮಸ್ಕರಿಸಿದರು
ಟಿಪ್ಪು ಜಯಂತಿ ಅಂಗವಾಗಿ ಹುಬ್ಬಳ್ಳಿಯಲ್ಲಿ ಬುಧವಾರ ಶಾಸಕ ಪರಮೇಶ್ವರ ಟಿಪ್ಪು ಭಾವಚಿತ್ರಕ್ಕೆ ನಮಸ್ಕರಿಸಿದರು   

ಹುಬ್ಬಳ್ಳಿ: ಭ್ರಷ್ಟಾಚಾರದ ಕಾರಣಕ್ಕಾಗಿಯೇ ಬಿ.ಎಸ್‌. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿ ಆ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಅವರನ್ನು ನೇಮಿಸಲಾಗಿದೆ. ಈ ಸರ್ಕಾರದಲ್ಲಿಯೂ ಭ್ರಷ್ಟಾಚಾರ ಮುಂದುವರಿದಿದೆ ಎಂದು ಶಾಸಕ ಜಿ. ಪರಮೇಶ್ವರ ಆರೋಪಿಸಿದರು.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಬೊಮ್ಮಾಯಿ ಆಡಳಿತದಿಂದ ಒಳ್ಳೆಯದಾಗಬಹುದು ಎಂದು ಜನ ನಿರೀಕ್ಷೆ ಇಟ್ಟುಕೊಂಡಿದ್ದರು. ಅವರ ಆಡಳಿತವನ್ನು ಅಳತೆ ಮಾಡುವಷ್ಟು ಸಮಯವಾಗಿಲ್ಲವಾದರೂ, ಆರಂಭಿಕ ಹೆಜ್ಜೆಗಳೇ ಸರಿಯಿಲ್ಲ. ವಿಧಾನಸೌಧ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಪರ್ಸಂಟೇಜ್‌ ಲೆಕ್ಕಾಚಾರ ಮುಂದುವರಿದಿದೆ’ ಎಂದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರಂತರವಾಗಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಹೆಚ್ಚಿಸುತ್ತಲೇ ಇವೆ. ಇಂಧನ ಮೇಲಿನ ಎಕ್ಸೈಸ್‌ ಸುಂಕದಿಂದಾಗಿ ಎರಡೂ ಸರ್ಕಾರಗಳಿಗೆ ಬಂದ ಹಣವೆಷ್ಟು ಎನ್ನುವುದನ್ನು ಬಹಿರಂಗಗೊಳಿಸಬೇಕು.’ ಎಂದು ಆಗ್ರಹಿಸಿದರು.

ADVERTISEMENT

‘ಪರಿಶಿಷ್ಟರ ಬದುಕು ನಮ್ಮ ಪಕ್ಷ ಉದ್ದಾರ ಮಾಡಿದೆ ಎನ್ನುವ ಕಾರಣಕ್ಕಾಗಿಯೇ ಅವರು ನಮ್ಮೊಂದಿಗಿದ್ದಾರೆ. ಸಿದ್ದರಾಮಯ್ಯ ಪರಿಶಿಷ್ಟರ ವಿರೋಧ ಹೇಳಿಕೆ ನೀಡಿದ್ದಾರೆ ಎಂದು ವಿನಾಕಾರಣ ವಿವಾದ ಹುಟ್ಟುಹಾಕುತ್ತಿದ್ದಾರೆ. ಅವರ ಮೇಲೆ ಗೂಬೆ ಕೂಡಿಸಲು ಬಿಜೆಪಿ ಯತ್ನಿಸುತ್ತಿದೆ’ ಎಂದು ಟೀಕಿಸಿದರು.

ಟಿಪ್ಪು ಜಯಂತಿ ಆಚರಣೆ: ಪಕ್ಷದ ಕಚೇರಿಯಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಪರಮೇಶ್ವರ ‘ಸಮುದಾಯಗಳ ಉತ್ತೇಜನಕ್ಕೆ ಆಯಾ ಧರ್ಮದ ಪ್ರಮುಖರ ಜಯಂತಿ ಆಚರಣೆ ಮಾಡಲಾಗುತ್ತದೆ. ಅಧಿಕಾರದಲ್ಲಿದ್ದಾಗ ಕಾಂಗ್ರೆಸ್‌ ಅನೇಕ ಸಮುದಾಯಕ್ಕೆ ಹಣ ನೀಡಿದೆ. ಇದೆಲ್ಲವನ್ನೂ ಕಾರ್ಯಕರ್ತರು ಜನರ ಮನೆ ಬಾಗಿಲಿಗೆ ತಲುಪಿಸಬೇಕು. ಇಲ್ಲವಾದರೆ ಈ ಎಲ್ಲ ಕೆಲಸವನ್ನು ನಾವೇ ಮಾಡಿದ್ದು ಎಂದು ಬಿಜೆಪಿಯವರು ಸುಳ್ಳು ಪ್ರಚಾರ ಮಾಡುತ್ತಾರೆ’ ಎಂದರು.

ಚುರುಕುಗೊಳಿಸಿ: ಪಕ್ಷವನ್ನು ತಳಮಟ್ಟದಿಂದ ಗಟ್ಟಿಗೊಳಿಸಬೇಕಾಗಿದ್ದು, ಬ್ಲ್ಯಾಕ್‌ ಹಂತದಿಂದ ಚುನಾವಣೆಗಳನ್ನು ನಡೆಸಬೇಕಾಗಿದೆ. ಇದಕ್ಕಾಗಿ ಪಕ್ಷದ ಸದಸ್ಯತ್ವ ನೋಂದಣಿ ಚುರುಕುಗೊಳಿಸಬೇಕು ಎಂದು ಪರಮೇಶ್ವರ ಕಾರ್ಯಕರ್ತರಿಗೆ ಕರೆ ನೀಡಿದರು.

ಪ್ರಕಾಶ ಬುರಬುರೆ ಪದಗ್ರಹಣ

ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಒಬಿಸಿ ಘಟಕದ ನೂತನ ಅಧ್ಯಕ್ಷರಾಗಿ ನೇಮಕವಾದ ಪ್ರಕಾಶ ಬುರಬುರೆ ಬುಧವಾರ ಅಧಿಕಾರ ಪದಗ್ರಹಣ ಮಾಡಿದರು. ಪರಮೇಶ್ವರ ಹಾಗೂ ಒಬಿಸಿ ರಾಜ್ಯ ಘಟಕದ ಅಧ್ಯಕ್ಷ ಎಂ.ಡಿ.ಲಕ್ಷ್ಮಿನಾರಾಯಣ ಪಕ್ಷದ ಬಾವುಟ ನೀಡಿದರು.

ಶಾಸಕ ಪ್ರಸಾದ ಅಬ್ಬಯ್ಯ, ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್‌ ಹಳ್ಳೂರ, ಗ್ರಾಮೀಣ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ, ಪಕ್ಷದ ಪ್ರಮುಖರಾದ ಐ.ಜಿ. ಸನದಿ, ಸದಾನಂದ ಡಂಗನವರ, ಬಸವರಾಜ ಕರಿಗಾರ, ನಾಗರಾಜ ಗೌರಿ, ನಾಗರಾಜ ಛಬ್ಬಿ, ಚಂದ್ರಶೇಖರ ಜುಟ್ಟಲ, ವಸಂತ ಲದ್ವಾ, ಶಿವಶಂಕರ ಹಂಪಣ್ಣನವರ ಸೇರಿದಂತೆ ಅನೇಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.