ADVERTISEMENT

ಹುಬ್ಬಳ್ಳಿ: ಮಗನ ಮದುವೆಗೆಂದು ಮಾಡಿಸಿದ್ದ ₹15 ಲಕ್ಷ ಬೆಲೆಬಾಳುವ ಆಭರಣ ಕಳವು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2020, 10:02 IST
Last Updated 7 ಆಗಸ್ಟ್ 2020, 10:02 IST
ಪ್ರಭುಗೌಡ ಎಸ್.ಪಾಟೀಲ ಎಂಬುವರ ಮನೆಯ ಅಲ್ಮೇರಾ ತೆಗೆದಿರುವ ದೃಶ್ಯ
ಪ್ರಭುಗೌಡ ಎಸ್.ಪಾಟೀಲ ಎಂಬುವರ ಮನೆಯ ಅಲ್ಮೇರಾ ತೆಗೆದಿರುವ ದೃಶ್ಯ   

ಹುಬ್ಬಳ್ಳಿ: ಇಲ್ಲಿನ ಬೈರಿದೇವರಕೊಪ್ಪದ ವೀರ ಸಂಗೊಳ್ಳಿ ರಾಯಣ್ಣ ಬಡಾವಣೆಯಲ್ಲಿ ವಾಸವಾಗಿರುವ ಕೆ.ಸಿ.ಸಿ. ಬ್ಯಾಂಕ್‌ನ ನಿವೃತ್ತ ಉದ್ಯೋಗಿ ಪ್ರಭುಗೌಡ ಎಸ್.ಪಾಟೀಲ ಎಂಬುವರ ಮನೆಯಲ್ಲಿ ಶುಕ್ರವಾರ ಬೆಳಗಿನ ಜಾವ ₹15 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಚಿನ್ನದ ಆಭರಣಗಳು ಕಳವಾಗಿವೆ.

ಮನೆಗೆ ಹಿಂಬಾಗಿಲಿನ ಮೂಲಕ ಒಳ ಬಂದ ಕಳ್ಳರು ಈ ಕೃತ್ಯ ಎಸಗಿದ್ದಾರೆ. ಪ್ರಭುಗೌಡ ಅವರು ಮಗನ ಮದುವೆಗಾಗಿ ಮಾಡಿಸಿಟ್ಟಿದ್ದ 30 ತೊಲೆ ಬಂಗಾರ, ಬೆಳ್ಳಿ ಆಭರಣ ಮತ್ತು ₹12 ಸಾವಿರ ನಗದು ಕಳ್ಳತನವಾಗಿದೆ. ಬೆಳಿಗ್ಗೆ 6.30ರ ಸುಮಾರಿಗೆ ಪಾಟೀಲರ ಪತ್ನಿ ಅಲ್ಮೇರಾ ತೆಗೆದು ನೋಡಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಮನೆಯವರು ಕೆಲ ಹೊತ್ತು ಮನೆಯ ಸುತ್ತಲೂ ಹುಡುಕಿದ ಬಳಿಕ ನವನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕಳವಾದ ಕೊಠಡಿಯ ಪಕ್ಕದಲ್ಲೇ ಪಾಟೀಲ ದಂಪತಿ ಮಲಗಿದ್ದರು. ಮಗ, ಮಗಳು ಹಾಗೂ ಮೊಮ್ಮಗಳು ಸೇರಿದಂತೆ ಒಟ್ಟು ಐವರು ಜನ ಮನೆಯಲ್ಲಿದ್ದರು. ಪಾಟೀಲರ ಮಗನ ಮದುವೆ ಏಪ್ರಿಲ್‌ನಲ್ಲಿ ನಿಗದಿಯಾಗಿತ್ತು. ಕೊರೊನಾ ಲಾಕ್‌ಡೌನ್ ಕಾರಣದಿಂದ ಮದುವೆ ಮುಂಡೂಡಲಾಗಿತ್ತು. ಆದ್ದರಿಂದ ಆಭರಣಗಳನ್ನು ಮನೆಯಲ್ಲಿಯೇ ಇಡಲಾಗಿತ್ತು.

ADVERTISEMENT

ನವನಗರ ಇನ್‌ಸ್ಟೆಕ್ಟರ್‌ ಪ್ರಭು ಸೂರಿನ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮನೆಯ ಸುತ್ತಲಿನ ಸಿ.ಸಿ.ಟಿ.ವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದು, ಮೂವರು ಇದ್ದ ತಂಡ ಅದೇ ಬಡಾವಣೆಯ ಮೂರ್ನಾಲ್ಕು ಮನೆಗಳ ಸುತ್ತಾಡಿದೆ ಎಂಬುದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.