ADVERTISEMENT

ಹುಬ್ಬಳ್ಳಿ: ಆನ್‌ಲೈನ್‌ನಲ್ಲಿ ಹೂಡಿಕೆ ಮಾಡಿದ ವ್ಯಕ್ತಿಗೆ ₹4.27 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 1:43 IST
Last Updated 26 ನವೆಂಬರ್ 2021, 1:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹುಬ್ಬಳ್ಳಿ: ದುಪ್ಪಟ್ಟು ಹಣಕ್ಕಾಗಿ ಆನ್‌ಲೈನ್ ಆ್ಯಪ್‌ನಲ್ಲಿ ಹಣ ಹೂಡಿಕೆ ಮಾಡಿದ ವ್ಯಕ್ತಿಯೊಬ್ಬರಿಂದ ದುಷ್ಕರ್ಮಿಗಳು ಒಟ್ಟು ₹4.27 ಲಕ್ಷ ಪಡೆದು ವಂಚಿಸಿದ್ದಾರೆ.

ನವನಗರದ ಶಿವಾಜಿ ಕುರ್ಲೇಕರ ವಂಚನೆಗೊಳಗಾದವರು. ಆರ್‌ಟಿ ಗೋಲ್ಡ್ ಕಂಪನಿಯ ‘ಆರ್‌ಟಿ ಗೋಲ್ಡ್‌’ ಎಂಬ ಆ್ಯಪ್‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ಶಿವಾಜಿ ಅವರಿಗೆ ಸ್ನೇಹಿತರೊಬ್ಬರು ಸಲಹೆ ನೀಡಿದ್ದರು. ಅದರಂತೆ, ಆ್ಯಪ್‌ನಲ್ಲಿ ಒಂದು ಐ.ಡಿ ಕ್ರಿಯೇಟ್ ಮಾಡಿಕೊಟ್ಟಿದ್ದರು.

ನಂತರ ಕಂಪನಿಯ ಮ್ಯಾನೇಜರ್ ಎಂದು ಹೇಳಿಕೊಂಡ ಕರೆ ಮಾಡಿದ ಸೆಲೆನಾ ಎಂಬ ಮಹಿಳೆ, ಹಣ ಹೂಡಿಕೆಗೆ ಸೂಚನೆ ನೀಡಿದ್ದರು. ಅದರಂತೆ ಆನ್‌ಲೈನ್ ಮೂಲಕ ಹೂಡಿಕೆ ಮಾಡಿದ್ದ ಶಿವಾಜಿ ಅವರಿಗೆ ಆರಂಭದಲ್ಲಿ ಒಂದಿಷ್ಟು ಲಾಭ ಬಂದಿತ್ತು. ಮತ್ತಷ್ಟು ಲಾಭಕ್ಕಾಗಿ ಹೆಚ್ಚಿನ ಮೊತ್ತ ಹೂಡಿಕೆಗೆ ಮನವೊಲಿಸಿದ್ದ ಮಹಿಳೆ, ಶಿವಾಜಿ ಅವರ ವಿವಿಧ ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ಒಟ್ಟು ₹4.27 ಲಕ್ಷ ಹೂಡಿಕೆ ಮಾಡಿಸಿಕೊಂಡಿದ್ದರು. ನಂತರ, ರಿಟರ್ನ್ಸ್ ನೀಡದೆ ಸಂಪರ್ಕಕ್ಕೂ ಸಿಗದೆ ವಂಚಿಸಿದ್ದಾರೆ ಎಂದು ಸೈಬರ್ ಠಾಣೆ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಉದ್ಯೋಗದ ಹೆಸರಲ್ಲಿ ವಂಚನೆ: ನೌಕರಿ ಡಾಟ್‌ಕಾಂ ವೆಬ್‌ಸೈಟ್‌ನಲ್ಲಿ ಉದ್ಯೋಗಕ್ಕಾಗಿ ಸ್ವವರ ಹಂಚಿಕೊಂಡಿದ್ದ ವ್ಯಕ್ತಿಯಿಂದ ಆನ್‌ಲೈನ್ ವಂಚಕರು ₹42 ಸಾವಿರ ಪಡೆದು ವಂಚಿಸಿದ್ದಾರೆ. ನಗರದ ಎಸ್‌.ಎಸ್. ಪಾಂಡುರಂಗಿ ವಂಚನೆಗೊಳಗಾದ ಉದ್ಯೋಗಾಕಾಂಕ್ಷಿ.

ಸ್ವವಿವರದಲ್ಲಿದ್ದ ಪಾಂಡುರಂಗಿ ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದ ವಂಚಕರು, ‘ನಿಮಗೆ ರಿಲಾಯನ್ಸ್ ಜಿಯೊ ಇನ್ಫೋಕಾಂ ಲಿಮಿಟೆಡ್ ಕಂಪನಿಯಲ್ಲಿ ಉದ್ಯೋಗಕ್ಕಾಗಿ ನಿಮ್ಮ ಹೆಸರು ಅಂತಿಮ ಪಟ್ಟಿಯಲ್ಲಿದೆ’ ಎಂದು ಹೇಳಿದ್ದರು. ಈ ಕುರಿತು ಅವರ ಮೊಬೈಲ್‌ಗೆ ಸಂದೇಶ ಕೂಡ ಕಳಿಸಿದ್ದರು. ಆನ್‌ಲೈನ್‌ ಮೂಲಕವೇ ಅವರ ಸಂದರ್ಶನ ನಡೆಸಿ, ಆಫರ್ ಲೆಟರ್ ಕೂಡ ಇಮೇಲ್ ಮಾಡಿದ್ದರು.

ಕಡೆಗೆ ಕಂಪನಿಯ ನಿಯಮದ ಪ್ರಕಾರ ವಿವಿಧ ಪ್ರಕ್ರಿಯೆಗಳ ಶುಲ್ಕ ಭರಿಸಬೇಕು ಎಂದು ಹೇಳಿ ಡೆಪಾಸಿಟ್, ಸಂಬಳದ ಬ್ಯಾಂಕ್ ಖಾತೆ, ಓಪನಿಂಗ್ ಪೀಜ್, ಅಗ್ರಿಮೆಂಟ್‌ ಮುಂತಾದ ಪ್ರಕ್ರಿಯೆಗಳ ಹೆಸರಿನಲ್ಲಿ ಪಾಂಡುರಂಗಿ ಮತ್ತು ಅವರ ತಂದೆಯ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ₹42,050 ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಕಡೆಗೆ ತಮ್ಮ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡು ಉದ್ಯೋಗ ನೀಡದೆ ವಂಚಿಸಿದ್ದಾರೆ ಎಂದು ಸೈಬರ್ ಠಾಣೆ ಪೊಲೀಸರು ತಿಳಿಸಿದ್ದಾರೆ.

ಆರೋಪಿ ಬಂಧನ:ಹದಿನಾರುವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಳ್ಳತನ ಪ್ರಕರಣದ ಆರೋಪಿಯನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಹಳೇ ಹುಬ್ಬಳ್ಳಿಯ ಮೌಲಾಲಿ ಗಫಾರಸಾಬ ಬಂಧಿತ ಆರೋಪಿ. ದ್ವಿಚಕ್ರ ವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿಂತೆ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಇನ್‌ಸ್ಪೆಕ್ಟರ್ ಅಶೋಕ ಚವ್ಹಾಣ ನೇತೃತ್ವದ ತಂಡ ಆತನನ್ನ ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸಿದ್ದಾರೆ. ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕದ್ದ ಮಾಲು ಖರೀದಿ: ಆರೋಪಿ ಸೇರಿ ಮೂವರ ಬಂಧನ

ಹುಬ್ಬಳ್ಳಿ: ಮನೆಗಳ್ಳತನ ಪ್ರಕರಣದ ಆರೋಪಿ ಜೊತೆಗೆ, ಕದ್ದ ಚಿನ್ನಾಭರಣವನ್ನು ಆತನಿಂದ ಖರೀದಿಸುತ್ತಿದ್ದ ಇಬ್ಬರನ್ನು ಕಸಬಾಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.ಮೂವರ ಬಂಧನದಿಂದಾಗಿ ಕಳೆದ ನವೆಂಬರ್‌ನಲ್ಲಿ ಗೌಸಿಯಾ ಟೌನ್, ಅಲ್ತಾಫ ಪ್ಲಾಟ್ ಹಾಗೂ ಈ ವರ್ಷದಲ್ಲಿ ಈಶ್ವರನಗರ, ಗೌಸಿಯಾ ನಗರ ಹಾಗೂ ರಣದಮ್ಮ ಕಾಲೊನಿಯಲ್ಲಿ ನಡೆದಿದ್ದ ಮನೆಗಳ್ಳತನದ ಐದು ಪ್ರಕರಣಗಳು ಪತ್ತೆಯಾಗಿವೆ.

ಆರೋಪಿಗಳಿಂದ ₹3.80 ಲಕ್ಷ ಮೌಲ್ಯದ 97 ಗ್ರಾಂ ಚಿನ್ನಾಭರಣ ಹಾಗೂ ₹10,800 ಮೌಲ್ಯದ 183 ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೇರೆ ಊರಿನ ಆರೋಪಿ ಆಗಾಗ ಹುಬ್ಬಳ್ಳಿಗೆ ಬಂದು, ಬಾಗಿಲು ಹಾಕಿರುವ ಮನೆಗಳನ್ನು ಗುರುತಿಸಿ ಕೃತ್ಯ ಎಸಗುತ್ತಿದ್ದ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಲಿಗೆ–ಮೂವರ ಬಂಧನ:ನಗರದ ರೈಲು ನಿಲ್ದಾಣದ ಉದ್ಯಾನದ ಬಳಿ ಬುಧವಾರ ಕೊಪ್ಪಳದಿಂದ ಬಂದಿದ್ದ ಪ್ರಯಾಣಿಕರೊಬ್ಬರನ್ನು ಅಡ್ಡಗಟ್ಟಿ ₹4,500 ಹಾಗೂ ಮೊಬೈಲ್ ಫೋನ್ ಸುಲಿಗೆ ಮಾಡಿದ್ದ ಮೂವರನ್ನು ಶಹರ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಆರೋಪಿಗಳು ಸುಲಿಗೆ ಮಾಡಿದ್ದ ನಗದು ಹಾಗೂ ಮೊಬೈಲ್ ವಶಪಡಿಸಿಕೊಂಡು, ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ ಎಂದು ಪೊಲೀಸರು ತಿಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.