
ಧಾರವಾಡ: ‘ದುರ್ಬಲ ವರ್ಗಗಳ (ಅಂಚಿನ ಸಮುದಾಯಗಳು) ಕುರಿತ ಸಾಹಿತ್ಯ ರಚನೆಯನ್ನು ಪ್ರೋತ್ಸಾಹಿಸಬೇಕು. ಓದುಗರ ಹೃದಯ ತಟ್ಟುವಂಥ ಸಾಹಿತ್ಯ ರಚಿಸಬೇಕು’ ಎಂದು ಗೋವಾದ ಸಾಹಿತಿ ದಾಮೋದರ ಮಾವುಜೊ ಹೇಳಿದರು.
ಪ್ರೊಗ್ರೆಸಿವ್ ಕಲ್ಚರಲ್ ಅಸೊಸಿಯೇಷನ್ ಆಫ್ ಇಂಡಿಯಾ (ಪಿಸಿಎಐ) ವತಿಯಿಂದ ನಗರದ ಆಲೂರು ವೆಂಕಟರಾವ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ವಿಚಾರಗಳ (ಅಸಮ್ಮತಿ, ಖಂಡನೆ...) ಅಭಿವ್ಯಕ್ತಿ ಬರೆವಣಿಗೆಯ ಉದ್ದೇಶವಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಕೇರಳ ಮತ್ತು ಪಶ್ಚಿಮ ಬಂಗಾಳದವರು ಮುಂಚೂಣಿಯಲಿದ್ದಾರೆ. ಈ ರಾಜ್ಯಗಳವರು ದುರ್ಬಲ ವರ್ಗಗಳ ಜನರ ಬಗ್ಗೆ ಕಾಳಜಿ ತೋರುತ್ತಾರೆ. ಆ ಜನರ ವಿಷಯಗಳ ಕುರಿತು ಸಾಹಿತ್ಯ ರಚಿಸುತ್ತಾರೆ’ ಎಂದು ಹೇಳಿದರು.
‘ಭಾರತವು ವಿವಿಧತೆಯ ದೇಶ. ವಿವಿಧ ಭಾಷೆಗಳ ಜನರು ಇದ್ಧಾರೆ. ಸಿದ್ದಲಿಂಗ ಪಟ್ಟಣಶೆಟ್ಟಿ ಅವರು ಕನ್ನಡ ಮತ್ತು ಹಿಂದಿ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ಧಾರೆ. ಕಾವ್ಯ, ಗದ್ಯ, ನಾಟಕಗಳನ್ನು ಬರೆದಿದ್ದಾರೆ. ಅನುವಾದ ಮಾಡಿದ್ದಾರೆ. ಭಾಷೆಗಳ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸಿದ್ದಾರೆ. ಓದುಗರನ್ನು ತಲುಪಿದ್ಧಾರೆ. ಇಂಥ ಸಾಹಿತಿಗಳ ಪರಂಪರೆ ಮುಂದುವರಿಯಬೇಕು’ ಎಂದರು.
‘ದಕ್ಷಿಣ ಭಾರತದವರು ಹಿಂದಿ ಭಾಷೆಯನ್ನು ಇಷ್ಟಪಡುವುದಿಲ್ಲ ಎಂಬ ಭಾವನೆ ಉತ್ತರ ಭಾರತದವರಲ್ಲಿ ಇದೆ. ನಾವು ಹಿಂದಿಯನ್ನು ಪ್ರೀತಿಸುತ್ತೇವೆ. ಆದರೆ, ಕೇಂದ್ರ ಸರ್ಕಾರವು ಆ ಭಾಷೆಯನ್ನು ಹೇರುವುದನ್ನು ಒಪ್ಪುವುದಿಲ್ಲ. ಮಾತೃಭಾಷೆ ಮತ್ತು ದೇಶದ ಇತರ ಭಾಷೆಗಳನ್ನು ಪ್ರೀತಿಸುತ್ತೇವೆ’ ಎಂದು ಹೇಳಿದರು.
ಸಿದ್ದಲಿಂಗ ಪಟ್ಟಣಶೆಟ್ಟಿ ಪ್ರಯೋಗಶೀಲ ಕವಿ. ಪ್ರತಿ ಸಂಗತಿಗಳನ್ನು ಪ್ರತಿಮೆಗಳ ಮೂಲಕ ಹೇಳುವುದು ಅವರ ವೈಶಿಷ್ಟ್ಯ. ಅವರ ಕವಿತೆಗಳು ವ್ಯಕ್ತಿಗತ ಅನುಭವದ ದಾಖಲೆಗಳು–ದೇವು ಪತ್ತಾರ, ಲೇಖಕ ಬುಕ್‌ಬ್ರಹ್ಮ
ಪಟ್ಟಣಶೆಟ್ಟಿ ಅವರ ಕತೆಗಳಲ್ಲಿ ಜೀವಂತಿಕೆ ಇರುತ್ತದೆ. ಸಣ್ಣ ವಿಷಯಗಳನ್ನೂ ಬಿಡುವುದಿಲ್ಲ. ಅವರದು ವಿವೇಕ ಬದ್ಧತೆಯ ಬರವಣಿಗೆ. ಗಡಿಗಳನ್ನು ಮೀರಿದ ಪ್ರೀತಿ ಬರವಣಿಗೆಯಲ್ಲಿ ಇರುತ್ತದೆ–ಪ್ರಜ್ಞಾ ಮತ್ತೀಹಳ್ಳಿ, ಲೇಖಕಿ
ಪಟ್ಟಣಶೆಟ್ಟಿ ಅವರು ರಂಗ ಸಂಘಟಕ ನಾಟಕಕಾರ ರಂಗಕರ್ಮಿ ನಿರ್ದೇಶಕ ಅನುವಾದಕರಾಗಿ ತೊಡಗಿಸಿಕೊಂಡವರು. ರಂಗಭೂಮಿ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಮಾಡಿದ್ಧಾರೆ–ಶಿರೀಷ ಜೋಶಿ, ರಂಗಕರ್ಮಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.