
ಧಾರವಾಡದಲ್ಲಿ ಸೋಮವಾರ ನಡೆದ ಜಿಲ್ಲಾಮಟ್ಟದ ಗ್ಯಾರಂಟಿ ಉತ್ಸವದಲ್ಲಿ ಸಚಿವ ಸಂತೋಷ ಎಸ್.ಲಾಡ್ ಮಾತನಾಡಿದರು
ಧಾರವಾಡ: ‘ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅನುಷ್ಠಾನಗೊಳಿಸಿರುವ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿಯವರು ಟೀಕಿಸುತ್ತಾರೆ. ಬಿಜೆಪಿಯವರೇ ಈ ಯೋಜನೆಗಳನ್ನು ಬಿಹಾರ, ಮಹಾರಾಷ್ಟ್ರ ಮತ್ತು ಅಸ್ಸಾಂ ರಾಜ್ಯಗಳಲ್ಲಿ ನಕಲು ಮಾಡಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್.ಲಾಡ್ ಹೇಳಿದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ವತಿಯಿಂದ ಸೃಜನಾ ರಂಗಮಂದಿರದಲ್ಲಿ ಸೋಮವಾರ ನಡೆದ ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ಜಿಲ್ಲಾಮಟ್ಟದ ಗ್ಯಾರಂಟಿ ಕಾರ್ಯಗಾರ ಮತ್ತು ಗ್ಯಾರಂಟಿ ಉತ್ಸವದಲ್ಲಿ ಮಾತನಾಡಿದರು.
‘ಗ್ಯಾರಂಟಿ ಯೋಜನೆಗಳಿಗಾಗಿ ವಾರ್ಷಿಕ ₹ 60 ಸಾವಿರ ಕೋಟಿ ಅನುದಾನ ಒದಗಿಸುತ್ತಿದೆ. ಯೋಜನೆ
ಗಳು ಮಹಿಳೆಯರು ಸ್ವಾಭಿಮಾನದಿಂದ ಬದುಕುವಂತೆ ಮಾಡಿವೆ. ಕರ್ನಾಟಕದಲ್ಲಿ ತಲಾದಾಯ, ಜಿಡಿಪಿ ಹೆಚ್ಚಾಗಿವೆ’ ಎಂದು ಹೇಳಿದರು.
‘ಕೇಂದ್ರದಲ್ಲಿನ ಬಿಜೆಪಿ ಸರ್ಕಾರವು ನವೋದ್ಯಮ (ಸ್ಟಾರ್ಟ್‌ಅಪ್) ಸ್ಥಾಪನೆಗೆ ಆದ್ಯತೆ ನೀಡಿರುವುದಾಗಿ ಹೇಳುತ್ತಿದೆ. ದೇಶದಲ್ಲಿ 2.11 ಲಕ್ಷ ‘ಸ್ಟಾರ್ಟ್ ಅಪ್‘ಗಳು ಮುಚ್ಚಿವೆ’ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಬೆಳಗಾವಿ ವಿಭಾಗದ ಉಪಾಧ್ಯಕ್ಷ ಎಸ್.ಆರ್.ಪಾಟೀಲ, ಜಿಲ್ಲಾಧ್ಯಕ್ಷ ಎಸ್.ಆರ್.ಪಾಟೀಲ, ಹೆಸ್ಕಾಂ ಅಧ್ಯಕ್ಷ ಅಜಿಂ ಪೀರ್ ಎಸ್.ಖಾದ್ರಿ, ವಿಧಾನ ಪರಿಷತ್ತಿನ ಸದಸ್ಯ ಎಫ್.ಎಚ್.ಜಕ್ಕಪ್ಪನವರ, ಡಿಸಿ ದಿವ್ಯಪ್ರಭು, ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ, ಎಸ್ಪಿ ಗುಂಜನ್ ಆರ್ಯ ಉಪಸ್ಥಿತರಿದ್ದರು.
ಶಿಳ್ಳೆ ಹಾಕಿದ ಲಾಡ್!
ಕಾರ್ಯಕ್ರಮದ ಕೊನೆ ಹಂತದಲ್ಲಿ ಎಚ್.ಎಂ.ರೇವಣ್ಣ ಅವರು ಭಾಷಣಕ್ಕೆ ನಿಂತಾಗ ಸಭಾಂಗಣದಲ್ಲಿನ ಕೆಲವರು ಹೊರಗೆ ಹೋಗಲು ಮುಂದಾದಾಗ ಸಚಿವ ಸಂತೋಷ್ ಲಾಡ್ ಅವರು ಶಿಳ್ಳೆ ಹಾಕಿ ಅವರಿಗೆ ಕುಳಿತುಕೊಳ್ಳುವಂತೆ ಕೈಸನ್ನೆ ಮಾಡಿದರು. ಅದನ್ನು ಗಮನಿಸದೆ ಕೆಲವರು ಹೊರಟಾಗ ಲಾಡ್ ಅವರು ಮತ್ತೊಮ್ಮೆ ಶಿಳ್ಳೆ ಹಾಕಿ ಆಸೀನರಾಗುವಂತೆ ಸೂಚಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಧಾರವಾಡ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಜಿಲ್ಲೆಯ ಶೇ 98 ರಷ್ಟು ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳ ಸವಲತ್ತುಗಳು ತಲುಪುತ್ತಿವೆಚ್.ಎಂ.ರೇವಣ್ಣ, ಅಧ್ಯಕ್ಷ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ
‘ಅಭಿವೃದ್ಧಿ ಅರ್ಥಶಾಸ್ತ್ರಜ್ಞರ ಸಲಹೆ ಮೇರೆಗೆ ಗ್ಯಾರಂಟಿ ಯೋಜನೆ ರೂಪಿತ’
‘ಅಭಿವೃದ್ಧಿ ಅರ್ಥಶಾಸ್ತ್ರಜ್ಞರ ಸಲಹೆ ಪಡೆದು ಗ್ಯಾರಂಟಿ ಯೋಜನೆಗಳನ್ನು ರೂಪಿಸಿದ್ದಾರೆ. ಜನಸಾಮಾನ್ಯರ ಅಭಿವೃದ್ಧಿ ಈ ಯೋಜನೆಗಳ ಗುರಿ’ ಜಾಗೃತ ಕರ್ನಾಟಕದ ಎಚ್.ವಿ.ವಾಸು ಹೇಳಿದರು.
‘ಈ ಯೋಜನೆಗಳಿಂದಾಗಿ ತಲಾದಾಯ ಹೆಚ್ಚಳವಾಗುತ್ತದೆ. ಕೊಳ್ಳುವ ಶಕ್ತಿ ಹೆಚ್ಚಾಗುತ್ತದೆ. ಬಡವರು ಘನತೆಯಿಂದ ಬದಕು ನಡೆಸಲು ಸಾಧ್ಯವಾಗುತ್ತದೆ’ ಎಂದು ವಿವರಿಸಿದರು.
’2024–25ನೇ ಸಾಲಿನಲ್ಲಿ ಭಾರತದಲ್ಲಿ ತಲಾದಾಯ ₹1.40 ಲಕ್ಷ ಇದ್ದರೆ, ಕರ್ನಾಟಕದಲ್ಲಿ ತಲಾದಾಯ ₹ 2.04 ಲಕ್ಷ ಇದೆ. ಜಿಡಿಪಿ ಬೆಳವಣಿಗೆ ದರ ಹೆಚ್ಚಾಗಿದೆ’ ಎಂದು ವಿಶ್ಲೇಷಿಸಿದರು.
‘ಈ ಯೋಜನೆಗಳಿಂದ ಸರ್ಕಾರ ದಿವಾಳಿ ಆಗುತ್ತೆ, ಅಭಿವೃದ್ಧಿ ಕೆಲಸಗಳಿಗೆ ಅನುದಾನ ಇರಲ್ಲ, ಜನರು ಸೋಮಾರಿಗಳಾಗುತ್ತಾರೆ, ಬಿಟ್ಟಿ ಭಾಗ್ಯ ಎಂದು ಟೀಕಿಸುವುದು ತಪ್ಪು. ಇವು ಬಿಟ್ಟಿ ಭಾಗ್ಯಗಳಲ್ಲ ದಾಸೋಹ’ ಎಂದರು.
ಒಬ್ಬೊಬ್ಬರು 10 ವೋಟು ಹಾಕಿಸಿ ಎಂದ ಶಾಸಕ!
‘ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರಿಗೆ ಅನುಕೂಲವಾಗಿದೆ. ಒಬ್ಬೊಬ್ಬ ಮಹಿಳೆಯರು 10 ವೋಟುಗಳನ್ನು ಹಾಕಿಸಬೇಕು. ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು’ ಎಂದು ಶಾಸಕ ಎನ್.ಎಚ್.ಕೋನರೆಡ್ಡಿ ಹೇಳಿದರು.
ಸರ್ಕಾರದ ಕಾರ್ಯಕ್ರಮದಲ್ಲಿ ಹೀಗೆ ಹೇಳಲು ಅವಕಾಶ ಇದೆಯೇ ಎಂಬ ಮಾತುಗಳು ಸಭಿಕರ ವಲಯದಲ್ಲಿ ಕೇಳಿಬಂದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.