ಎಡ್ಯುವರ್ಸ್
ಹುಬ್ಬಳ್ಳಿ: ಎಲ್.ಎಲ್.ಬಿ ಮಾಡುವುದೆಂದರೆ ಕೋರ್ಟ್‌ನಲ್ಲಿ ಕಪ್ಪುಕೋಟ್ ಹಾಕಿಕೊಂಡು ವಾದ ಮಾಡುವುದಕಷ್ಟೇ ಸೀಮಿತ ಎಂಬ ಕಾಲವೊಂದಿತ್ತು. ಆದರೆ, ಈಗ ಹತ್ತು ಹಲವು ವಿಭಿನ್ನ ರೀತಿಯ ವೃತ್ತಿಗಳು ರೂಪುಗೊಂಡಿವೆ. ಕಾನೂನು ಶಿಕ್ಷಣ ಪಡೆದುಕೊಂಡರೆ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಅಥವಾ ಸ್ವತಂತ್ರವಾಗಿಯೂ ವೃತ್ತಿಯನ್ನು ರೂಪಿಸಿಕೊಳ್ಳಬಹುದು. ವಕೀಲಿಕೆಯಿಂದ ಹಿಡಿದು ಕಾರ್ಪೊರೇಟ್ ವಲಯದವರೆಗೆ ಹಲವು ರೀತಿಯ ವೃತ್ತಿಗಳು ಕಾನೂನು ಪದವೀಧರರಿಗೆ ತೆರೆದುಕೊಂಡಿವೆ. ಇದೇ ಈ ಕೋರ್ಸ್‌ನ ಹೆಚ್ಚುಗಾರಿಕೆ.
ದ್ವಿತೀಯ ಪಿಯುಸಿ ಪೂರ್ಣಗೊಂಡ ಬಳಿಕ ಐದು ವರ್ಷದ ಬಿ.ಎ.ಎಲ್.ಎಲ್.ಬಿ, ಬಿ.ಬಿ.ಎ.ಎಲ್.ಎಲ್.ಬಿ, ಬಿ.ಕಾಂ.ಎಲ್.ಎಲ್.ಬಿ, ಬಿ.ಎ.ಎಲ್.ಎಲ್.ಬಿ (ಆನರ್ಸ್), ಬಿ.ಬಿ.ಎ.ಎಲ್.ಎಲ್.ಬಿ (ಆನರ್ಸ್) ಮಾಡಬಹುದು. ಇಲ್ಲವೇ, ಈಗಾಗಲೇ ಪದವಿ ಶಿಕ್ಷಣ ಪಡೆದಿದ್ದರೆ ಮೂರು ವರ್ಷಗಳ ಅವಧಿಯ ಎಲ್.ಎಲ್.ಬಿ ಕೋರ್ಸ್ ಮಾಡಬಹುದು. ಎಲ್.ಎಲ್.ಬಿ ಪದವಿ ಪಡೆದ ನಂತರ ವೃತ್ತಿಗೆ ಸೇರಿಕೊಳ್ಳಬಹುದು ಇಲ್ಲವೇ ಸ್ನಾತಕೋತ್ತರ ಪದವಿ, ಪಿಎಚ್.ಡಿ ಸೇರಿದಂತೆ ಉನ್ನತ ಶಿಕ್ಷಣ ಮುಂದುವರಿಸಬಹುದು.
ಹುಬ್ಬಳ್ಳಿ ಸಮೀಪದ ನವನಗರದಲ್ಲಿ ಕರ್ನಾಟಕ ರಾಜ್ಯ ಕಾನೂನು ಶಿಕ್ಷಣ ವಿಶ್ವವಿದ್ಯಾಲಯ ಸೇರಿದಂತೆ ವಿವಿಧೆಡೆ ಇರುವ ಕಾನೂನು ಕಾಲೇಜುಗಳಲ್ಲಿ ಕಾನೂನು ಶಿಕ್ಷಣ ಪಡೆಯಬಹುದು.
ದ್ವಿತೀಯ ಪಿಯುಸಿಯಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಶೇ 45 ಅಂಕಗಳೊಂದಿಗೆ ಪಾಸಾಗಿರಬೇಕು. ಒಬಿಸಿ ವಿದ್ಯಾರ್ಥಿಗಳು ಶೇ 42 ಅಂಕಗಳು ಹಾಗೂ ಎಸ್.ಸಿ/ಎಸ್.ಟಿ ವಿದ್ಯಾರ್ಥಿಗಳು ಶೇ 40ರಷ್ಟು ಅಂಕ ಪಡೆದಿದ್ದಾರೆ 5 ವರ್ಷದ ಕಾನೂನು ಪದವಿ ಪಡೆಯಬಹುದು.
ಕರ್ನಾಟಕ ರಾಜ್ಯ ಕಾನೂನು ಶಿಕ್ಷಣ ವಿಶ್ವವಿದ್ಯಾಲಯವು ಪ್ರವೇಶ ಪರೀಕ್ಷೆಯ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಇನ್ನುಳಿದ ಬಹುತೇಕ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಅಂಕಗಳ ಆಧಾರದ ಮೇಲೆ ಪ್ರವೇಶ ಪಡೆಯಬಹುದು.
ವಕೀಲಿಕೆ ಮಾಡಬಹುದು. ನ್ಯಾಯಾಂಗ ಇಲಾಖೆಯಲ್ಲಿ, ಸರ್ಕಾರದ ಕಾನೂನು ಇಲಾಖೆಯಲ್ಲಿ ವಿವಿಧ ಹುದ್ದೆ ಗಿಟ್ಟಿಸಿಕೊಳ್ಳಬಹುದು. ಸರ್ಕಾರಿ ವಕೀಲರಾಗಬಹುದು. ಖಾಸಗಿ ಕಂಪನಿಗಳಿಗೆ, ಬ್ಯಾಂಕ್‌ಗಳಿಗೆ, ಎನ್‌ಜಿಒಗಳಿಗೆ, ಕಾರ್ಪೊರೇಟ್ ಕಂಪನಿಗಳಿಗೆ ಕಾನೂನು ಸಲಹೆಗಾರರಾಗಬಹುದು. ವಿವಿಧ ಕಾಲೇಜುಗಳಲ್ಲಿ ಕಾನೂನು ವಿಷಯದ ಉಪನ್ಯಾಸಕರಾಗಿ ಸೇರಿಕೊಳ್ಳಬಹುದು.
ಕಾನೂನು ಪದವಿ ಪಡೆದ ನಂತರ ವಿವಿಧ ವಿಷಯಗಳ ಕುರಿತು ಉನ್ನತ ಶಿಕ್ಷಣ ಪಡೆಯಬಹುದು. ಅಂತರರಾಷ್ಟ್ರೀಯ ಕಾನೂನು, ಸಾಂವಿಧಾನಿಕ ಕಾನೂನು, ಕಾರ್ಮಿಕ ಕಾನೂನು, ಸೈಬರ್ ಕಾನೂನು ಹಾಗೂ ಕೌಟುಂಬಿಕ ಕಾನೂನುಗಳ ಬಗ್ಗೆ ಉನ್ನತ ಶಿಕ್ಷಣ ಪಡೆಯಬಹುದು.
ಉತ್ತಮ ಬರವಣಿಗೆ ಶೈಲಿ ಸಿದ್ಧಿಸಿದ್ದರೆ ಕಾನೂನು ಶಿಕ್ಷಣ ಕುರಿತು ಪುಸ್ತಕ ಬರೆಯಬಹುದು, ವಿವಿಧ ಪತ್ರಿಕೆಗಳಿಗೆ ಲೇಖನ ಬರೆಯಬಹುದು ಅಥವಾ ಪೂರ್ಣಾವಧಿಗೆ ಕೋರ್ಟ್ ವರದಿಗಾರರಾಗಿಯೂ ಕಾರ್ಯನಿರ್ವಹಿಸಬಹುದು. ಕೆಲವು ಖಾಸಗಿ ಕಂಪನಿಗಳಲ್ಲಿ ಕಾನೂನು ಸಲಹೆಗಾರ, ಕಾನೂನು ಸಂಶೋಧಕ ಆಗಲು ಅವಕಾಶವಿದೆ.
ರಾಜಕೀಯದಲ್ಲಿಯೂ ತಮ್ಮ ಅದೃಷ್ಟ ಪರೀಕ್ಷಿಸಬಹುದು. ನಮ್ಮ ಬಹುತೇಕ ಶಾಸಕರು, ಸಂಸದರು ಕಾನೂನು ಶಿಕ್ಷಣ ಪಡೆದಿದ್ದಾರೆ ಎನ್ನುವುದು ಗಮನಾರ್ಹ.
ಕಾನೂನು ಶಿಕ್ಷಣ ಪಡೆದುಕೊಂಡರೆ ಸಾಕಷ್ಟು ಉದ್ಯೋಗಾವಕಾಶಗಳು ಇವೆ. ಯುವಕರು ಕಾನೂನು ಶಿಕ್ಷಣ ಪಡೆಯುವುದರ ಕಡೆ ಗಮನ ಹರಿಸಬೇಕು. –ಪ್ರೊ.ಸಿ.ಬಸವರಾಜ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಕುಲಪತಿ
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ನವನಗರ– ಹುಬ್ಬಳ್ಳಿ
ಜೆ.ಎಂ.ಪಾಟೀಲ ಕಾನೂನು ಮಹಾವಿದ್ಯಾಲಯ ಡಿ.ಸಿ.ಕಂಪೌಂಡ್ ಧಾರವಾಡ
ಎಚ್.ವಿ.ಕೌಜಲಗಿ ಕಾನೂನು ಮಹಾವಿದ್ಯಾಲಯ ಬೈಲಹೊಂಗಲ ಬೆಳಗಾವಿ ಜಿಲ್ಲೆ
ಹುರಕಡ್ಲಿ ಅಜ್ಜ ಕಾನೂನು ಮಹಾವಿದ್ಯಾಲಯ ಧಾರವಾಡ
ಜೆ.ಎಸ್.ಎಸ್.ಸಕ್ರಿ ಕಾನೂನು ಮಹಾವಿದ್ಯಾಲಯ ಹೆಗ್ಗೇರಿ ಹುಬ್ಬಳ್ಳಿ
ಕೆ.ಎಚ್.ಪಾಟೀಲ ಸ್ಕೂಲ್ ಆಫ್ ಲಾ ವಿದ್ಯಾನಗರ ಹುಬ್ಬಳ್ಳಿ
ಕೆ.ಎಲ್.ಇ ಸಂಸ್ಥೆಯ ಗುರುಸಿದ್ದಪ್ಪ ಕೊತ್ತಂಬರಿ ಕಾನೂನು ಮಹಾವಿದ್ಯಾಲಯ ವಿದ್ಯಾನಗರ ಹುಬ್ಬಳ್ಳಿ
ಕೆ.ಎಲ್.ಇ ಸಂಸ್ಥೆಯ ಬಿ.ವ್ಹಿ.ಬೆಲ್ಲದ ಕಾನೂನು ಮಹಾವಿದ್ಯಾಲಯ ಲಿಂಗರಾಜ ಕಾಲೇಜ ಕ್ಯಾಂಪಸ್ ಬೆಳಗಾವಿ
ಕೆ.ಎಲ್.ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯ ಚಿಕ್ಕೋಡಿ ಬೆಳಗಾವಿ ಜಿಲ್ಲೆ
ರಾಜಾ ಲಕಮಗೌಡ ಕಾನೂನು ಮಹಾವಿದ್ಯಾಲಯ ತಿಲಕವಾಡಿ ಬೆಳಗಾವಿ
ಎಂ.ಇ.ಎಸ್ ಕಾನೂನು ಮಹಾವಿದ್ಯಾಲಯ ವಿದ್ಯಾನಗರ ಶಿರಸಿ
ಮಹಾತ್ಮಾ ಗಾಂಧೀಜಿ ಕಾನೂನು ಮಹಾವಿದ್ಯಾಲಯ ಸಂಕೇಶ್ವರ ಹುಕ್ಕೇರಿ ತಾಲ್ಲೂಕು ಬೆಳಗಾವಿ ಜಿಲ್ಲೆ
ರಾಣೆಬೆನ್ನೂರು ಶಿಕ್ಷಣ ಸಂಸ್ಥೆಯ ಕಾನೂನು ಮಹಾವಿದ್ಯಾಲಯ ರಾಣೆಬೆನ್ನೂರು ಹಾವೇರಿ ಜಿಲ್ಲೆ
ಎಸ್.ಸಿ. ನಂದಿಮಠ ಕಾನೂನು ಮಹಾವಿದ್ಯಾಲಯ ಬಾಗಲಕೋಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.