ಹುಬ್ಬಳ್ಳಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್ಐಟಿಯು ಕೂಡಲೇ ಮಧ್ಯಂತರ ವರದಿ ಪ್ರಕಟಿಸಬೇಕು ಎಂದು ಜೈನ ಸಮಾಜದ ಮುಖಂಡರು ಆಗ್ರಹಿಸಿದರು.
ಇಲ್ಲಿನ ವರೂರಿನ ನವಗ್ರಹತೀರ್ಥ ಕ್ಷೇತ್ರದಲ್ಲಿ ಗುಣಧರನಂದಿ ಮಹಾರಾಜರ ನೇತೃತ್ವದಲ್ಲಿ ಭಾನುವಾರ ನಡೆದ ಜೈನ ಸಮಾಜದ ಮುಖಂಡರು, ಜೈನ ಮುನಿಗಳ ಸಭೆಯಲ್ಲಿ, ವಿವಿಧ ಬೇಡಿಕೆಗಳ ಕುರಿತು ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ.ಪರಮೇಶ್ವರ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ನಿರ್ಣಯಿಸಲಾಯಿತು.
ಪ್ರಕರಣದ ಸಾಕ್ಷಿ ದೂರುದಾರ ಹೇಳಿದ್ದ ಬಹುತೇಕ ಸ್ಥಳಗಳಲ್ಲಿ ಶೋಧ ಕಾರ್ಯ ನಡೆದಿದೆ. ಆತನನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಇದು ಹೀಗೆಯೇ ಮುಂದುವರಿದರೆ ಮಂಜುನಾಥಸ್ವಾಮಿ ದೇವಸ್ಥಾನವನ್ನು ನೆಲಸಮಗೊಳಿಸುವ ಅಪಾಯವಿದೆ ಎಂದು ಮುಖಂಡರು ಸಭೆಯಲ್ಲಿ ಹೇಳಿದರು.
ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಿದ ಗಿರೀಶ ಮಟ್ಟೆಣ್ಣವರ ಕೂಡಲೇ ಕ್ಷಮೆ ಕೇಳಬೇಕು. ಆತನ ವಿರುದ್ಧ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಜೈನ ಸಮಾಜದ ವತಿಯಿಂದ ಪ್ರಕರಣದ ದಾಖಲಿಸಲಾಗುವುದು. ಕೂಡಲೇ ಆತನನ್ನು ಪೊಲೀಸರು ಬಂಧಿಸಬೇಕು ಎಂದು ಆಗ್ರಹಿಸಿದರು.
ಧಾರವಾಡ ಕಲಾಮಂದಿರದಿಂದ ಜಿಲ್ಲಾದಿಕಾರಿ ಕಚೇರಿವರೆಗೆ ಸೋಮವಾರ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿ, ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಗುವುದು. ಬೇಡಿಕೆ ಈಡೇರಿಸದಿದ್ದರೆ ಸೆಪ್ಟೆಂಬರ್ 1ರಂದು ಧಾರವಾಡ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಳಿಸಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ವೀರಕುಮಾರ ಪಾಟೀಲ, ವೆರ್ನಾಳ್ ತಾಳಿಕೋಟಿ, ವಿನಯ್ ಶೆಟ್ಟಿ, ದೇವಿಂದ್ರ ಕಾಗೇನವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.