ADVERTISEMENT

ಧಾರವಾಡ | ಪತ್ನಿ ಹತ್ಯೆಗೆ ₹ 40 ಲಕ್ಷಕ್ಕೆ ಸುಪಾರಿ: ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 2:11 IST
Last Updated 3 ಮಾರ್ಚ್ 2026, 2:11 IST
ಲಲಿತಾ 
ಲಲಿತಾ    

ಧಾರವಾಡ: ತಾಲ್ಲೂಕಿನ ಅಮ್ಮಿನಬಾವಿ ದುರ್ಗಾದೇವಿ ಗುಡಿ ಸಮೀಪ (ಸವದತ್ತಿ ರಸ್ತೆ) ಫೆ.26ರಂದು ವಾಹನ ಡಿಕ್ಕಿ ಹೊಡೆದು ಲಲಿತಾ ಹಾತರಕಿ ಎಂಬುವರು ಸಾವಿಗೀಡಾದ ಪ್ರಕರಣ ಹೊಸ ತಿರುವು ಪಡೆದಿದೆ. ಸುಪಾರಿ ನೀಡಿ ಪತಿಯೇ ಪತ್ನಿಯನ್ನು ಹತ್ಯೆ ಮಾಡಿಸಿದ್ದು ಪೊಲೀಸ್‌ ತನಿಖೆಯಿಂದ ಪತ್ತೆಯಾಗಿದೆ. ನಾಲ್ವರು ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ವಾಹನ, ನಾಲ್ಕು ಮೊಬೈಲ್‌ ಫೋನ್‌ ಮತ್ತು ₹ 20 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ.

ನರೇಂದ್ರ ಗ್ರಾಮದ ಉದಯಕುಮಾರ ಹಾತರಕಿ (ಲಲಿತಾ ಪತಿ) , ಗರಗ ಗ್ರಾಮದ ನಾಗಪ್ಪ, ದೊಡವಾಡದ ನಾಗರಾಜ ಉಪ್ಪಿನ ಹಾಗೂ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ನಿಚ್ಚನಕಿಯ ಅಭಿಷೇಕ ವರಗನ್ನವರ ಬಂಧಿತರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗುಂಜನ್‌ ಆರ್ಯ ಮಾತನಾಡಿ,

ADVERTISEMENT

‘ಪ್ರಕರಣದ ತನಿಖೆಗೆ ಐದು ತಂಡಗಳನ್ನು ರಚಿಸಲಾಗಿತ್ತು. ಕೆಎಸ್‌ಆರ್‌ಟಿಸಿ ಬಸ್‌ನ ಡೆಶ್‌ ಬೋರ್ಡ್‌ ಕ್ಯಾಮೆರಾ, ಸವದತ್ತಿ ಕಡೆಗಿನ ರಸ್ತೆಯ ವಿವಿಧೆಡೆಗಳ ಸಿಸಿಟಿವಿ ಕ್ಯಾಮೆರಾಗಳ ಫೂಟೇಜ್‌ಗಳನ್ನು ಪರಿಶೀಲಿಸಿ ಹಂತಕರ ಜಾಡು ಪತ್ತೆ ಹಚ್ಚಲಾಯಿತು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ತಿಳಿಸಿದರು.

‘ನಂಬರ್‌ ಫಲಕ ಇಲ್ಲದ ವಾಹನ (ಥಾರ್‌ ಕಾರು) ಗುದ್ದಿಸಿ ಲಲಿತಾ ಅವರನ್ನು ಹತ್ಯೆ ಮಾಡಲಾಗಿದೆ. ₹ 40 ಲಕ್ಷಕ್ಕೆ ಸುಪಾರಿ ಒಪ್ಪಂದ ಮಾಡಿಕೊಂಡು, ₹ 10 ಲಕ್ಷ ಪಾವತಿಸಿದ್ದು ವಿಚಾರಣೆ ವೇಳೆ ಗೊತ್ತಾಗಿದೆ. ಆರೋಪಿಗಳು ಒಂದೂವರೆ ತಿಂಗಳ ಹಿಂದೆ ಸಂಚು ರೂಪಿಸಿದ್ದರು. ಆರೋಪಿ ಉದಯಕುಮಾರ ಪತ್ನಿ ಲಲಿತಾಗೆ ಫೋನ್‌ ಮಾಡಿ ಅಮ್ಮಿನಬಾವಿ ಗ್ರಾಮದ ದುರ್ಗಾದೇವಿ ಗುಡಿ ಸಮೀಪಕ್ಕೆ ಬರಲು ಹೇಳಿದ್ದ. ಲಲಿತಾ ಅವರು ರಸ್ತೆಯಲ್ಲಿ ನಡೆದು ಬರುವಾಗ ವಾಹನ‌ ಗುದ್ದಿಸಿದ್ದರು. ಡಿಕ್ಕಿ ರಭಸಕ್ಕೆ ಲಲಿತಾ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದರು. ಆರೋಪಿಗಳು ವಾಹನದೊಂದಿಗೆ ಪರಾರಿಯಾಗಿದ್ದರು. ವಾಹನವು ಆರೋಪಿ ನಾಗರಾಜ ಅವರದ್ದು’ ಎಂದರು.

‘ಲಲಿತಾ ಅವರು ಉದಯಕುಮಾರ ಅವರ ಮೊದಲ ಪತ್ನಿ. ದಂಪತಿಯ ನಡುವೆ ಕಲಹವಾಗಿ ಸುಮಾರು 15 ವರ್ಷಗಳ ಹಿಂದೆ ಇಬ್ಬರು ಬೇರೆಯಾಗಿದ್ದರು. ಉದಯಕುಮಾರ ಎರಡನೇ ಮದುವೆಯಾಗಿದ್ದಾರೆ. ಲಲಿತಾ ಅವರು ಪತಿಯ ಊರು ಸೋಮಾಪುರ ಗ್ರಾಮವನ್ನು ಬಿಟ್ಟು ತವರೂರು ನರೇಂದ್ರಕ್ಕೆ ಬಂದು ವಾಸವಾಗಿದ್ದರು. ಲಲಿತಾ ಅವರಿಗೆ ಪುತ್ರಿ ಇದ್ದಾರೆ. ಲಲಿತಾ ಅವರಿಗೆ ಜೀವನಾಂಶಕ್ಕೆ ಉದಯಕುಮಾರ ಅವರು 1.5 ಎಕರೆ ಜಮೀನು ನೀಡಬೇಕು ಎಂದು ತೀರ್ಮಾನವಾಗಿತ್ತು. ಆಸ್ತಿ ವಿಚಾರಕ್ಕೆ ಇಬ್ಬರು ಪದೇ ಪದೇ ಜಗಳ ನಡೆದಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದ ಇನ್ನು ಕೆಲವು ಆರೋಪಿಗಳ ಪತ್ತೆಗೆ ಶೋಧ ನಡೆಯುತ್ತಿದೆ. ಪ್ರಕರಣವನ್ನು ಭೇದಿಸಿದ ‌ಐದು ತಂಡಗಳಿಗೆ ಪ್ರಶಂಸೆ ಪತ್ರ ನೀಡಲಾಗುವುದು’ ಎಂದರು.

ಲಲಿತಾ ತಂದೆ ನಿಂಗಪ್ಪ ಅವರು ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಉದಯಕುಮಾರ
ನಾಗಪ್ಪ
ಅಭಿಷೇಕ
ನಾಗರಾಜ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.