
ಧಾರವಾಡ: ‘ಕ್ರೀಡೆಗಳಿಂದ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸುತ್ತದೆ. ಕ್ರೀಡೆಗಳಿಗೆ ಆದ್ಯತೆ ನೀಡುವುದರಿಂದ ನೆಮ್ಮದಿ ಜೀವನ ನಡೆಸಬಹುದು’ ಎಂದು ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ದನಗೌಡರ ಹೇಳಿದರು.
ಜಿಲ್ಲಾ ಒಲಿಂಪಿಕ್ ಅಸೋಸಿಯೇಷನ್ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಹಯೋಗದಲ್ಲಿ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ 10 ಕಿ.ಮೀ ಕ್ರಾಸ್ ಕಂಟ್ರಿ ಓಟದ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗಿರುವ ಕ್ರೀಡೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಬದಲಿಗೆ ಭಾಗವಹಿಸುವಿಕೆ ಮುಖ್ಯ. ಕ್ರೀಡೆಗಳಿಂದ ಸ್ಪರ್ಧಾ ಮನೋಭಾವ ಮೂಡುತ್ತದೆ. ಕ್ರೀಡೆಗಳಲ್ಲಿ ಭಾಗವಹಿಸಿದರೆ ಒತ್ತಡ ನಿವಾರಣೆಯಾಗುತ್ತದೆ’ ಎಂದರು.
ಕ್ರಾಸ್ ಕಂಟ್ರಿ ಓಟವು ದೈಹಿಕ ಸಾಮರ್ಥ್ಯದ ನೈಜ ಪರೀಕ್ಷೆ. ಇಂತಹ ಸ್ಪರ್ಧೆಯಲ್ಲಿ ಯುವ ಜನಾಂಗವು ಹೆಚ್ಚೆಚ್ಚು ಪಾಲ್ಗೊಳ್ಳಬೇಕು. ಸ್ಪರ್ಧೆಯ ನಿಮಯಮಗಳಿಗೆ ಬದ್ಧರಾಗಿ ನಡೆಯಬೇಕು ಎಂದು ಹೇಳಿದರು.
ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಶಿವು ಹಿರೇಮಠ ಮಾತನಾಡಿ, ಕ್ರೀಡೆಯು ಬದುಕಿನಲ್ಲಿ ಶಿಸ್ತು, ಸದೃಢದಿಂದ ಇರುವ ವಿಧಾನ ಕಲಿಸಲಿದೆ. ಓಟಗಾರರು ಗೆಲುವಿನತ್ತ ಗಮನ ಹರಿಸದೆ, ಕ್ರೀಡಾ ಸ್ಪೂರ್ತಿಯಿಂದ ಪಾಲ್ಗೊಳ್ಳಬೇಕು ಎಂದರು.
ಪಾಲಿಕೆ ವಿರೋಧ ಪಕ್ಷದ ನಾಯಕ ಇಮ್ರಾನ್ ಎಲಿಗಾರ ಮಾತನಾಡಿ, ಎಲ್ಲರೂ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು. ಉತ್ತಮ ಸಾಧನೆ ಮಾಡುವ ಮೂಲಕ ದೇಶಕ್ಕೆ ಹೆಮ್ಮೆ ತರಬೇಕು ಎಂದರು.
ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಬಸವರಾಜ ತಾಳಿಕೋಟಿ,ಅಂತರರಾಷ್ಟ್ರೀಯ ಕ್ರೀಡಾಪಟು ಸಿದ್ದಪ್ಪ ಶಿವನೂರ, ರಾಷ್ಟ್ರೀಯ ಕ್ರೀಡಾಪಟು ರಾಜೇಶ್ವರಿ ಪಾಟೀಲ, ಮಹೇಶ್ವರಿ ಉದಗಟ್ಟಿ, ಕೆ.ಎಸ್.ಭೀಮಣ್ಣವರ, ರಾಮಚಂದ್ರ ಪಡತಾರೆ ಉಪಸ್ಥಿತರಿದ್ದರು.
4 ಕಿ.ಮೀ ಬಾಲಕರ ವಿಭಾಗ (16 ವರ್ಷದೊಳಗಿನವರು): 1.ಕುಮಾರಗೌಡ ಪಾಟೀಲ (ಧಾರವಾಡ) 2.ಮಹೇಶ ಕಲಗೌತ್ತಿ(ಧಾರವಾಡ) 3.ಮಂಜುನಾಥ ಪಾಟೀಲ (ಹುಬ್ಬಳ್ಳಿ) 4.ಸಂದೀಪ ವಡ್ಡರ (ಧಾರವಾಡ) 5.ಚನ್ನಬಸಯ್ಯ ಹಿರೇಮಠ (ಧಾರವಾಡ) 6.ಅರ್ಜುನ ತಳವಾರ (ಹುಬ್ಬಳ್ಳಿ).
ಬಾಲಕಿಯರ ವಿಭಾಗ: 1.ಲಕ್ಷ್ಮಿ ಓಬ್ಬಣ್ಣವರ 2.ಶ್ರೇಯಾ ಗಂಟಿ 3.ತೈರಾ ಗಡದ 4.ರಾಜಶ್ರೀ ಮರೆಡ 5.ಸುಮಾ ನಂದೆಣ್ಣವರ 6ನೇ ಸ್ಥಾನ ಲಕ್ಷ್ಮೀ ಜಿ.ಪಡೆದಿದ್ದಾರೆ. (ಎಲ್ಲರೂ ಧಾರವಾಡದವರು).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.