ADVERTISEMENT

ಧಾರವಾಡ | ಮುಂದಿನ ಪೀಳಿಗೆಗೆ ಸಂಸ್ಕೃತಿ ಪಸರಿಸಿ: ಜಿಲ್ಲಾಧಿಕಾರಿ ದಿವ್ಯಪ್ರಭು

ರಾಷ್ಟ್ರೀಯ ಟ್ರಸ್ಟಗಳಿಗೆ ನೇಮಕವಾದ ಅಧ್ಯಕ್ಷರು, ಸದಸ್ಯರಿಗೆ ಅಭಿನಂದನಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 7:28 IST
Last Updated 30 ಆಗಸ್ಟ್ 2025, 7:28 IST
ಧಾರವಾಡದ ವಿವಿಧ ಟ್ರಸ್ಟ್‌ಗಳಿಗೆ ನೇಮಕವಾಗಿರುವ ಅಧ್ಯಕ್ಷರು, ಸದಸ್ಯರನ್ನು ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಅಭಿನಂದಿಸಲಾಯಿತು
ಧಾರವಾಡದ ವಿವಿಧ ಟ್ರಸ್ಟ್‌ಗಳಿಗೆ ನೇಮಕವಾಗಿರುವ ಅಧ್ಯಕ್ಷರು, ಸದಸ್ಯರನ್ನು ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಅಭಿನಂದಿಸಲಾಯಿತು   

ಧಾರವಾಡ: ‘ಸಂಸ್ಕೃತಿ, ಪರಂಪರೆ ಪೂರ್ವಿಕರ ಬಳುವಳಿ. ಅವುಗಳನ್ನು ಉಳಿಸಿ–ಬೆಳೆಸಿ, ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿಯನ್ನು ಎಲ್ಲರೂ ನಿರ್ವಹಿಸಬೇಕು’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ಜಿಲ್ಲೆಯ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ಗಳಿಗೆ ನೂತನವಾಗಿ ನೇಮಕವಾದ ಅಧ್ಯಕ್ಷ, ಸದಸ್ಯರಿಗೆ ಜಿಲ್ಲಾಧಿಕಾರಿ ಕಚೇರಿ ನೂತನ ಸಭಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಶುಕ್ರವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

‘ಸಾಹಿತ್ಯ, ಸಾಂಸ್ಕೃತಿಕ ಶ್ರೀಮಂತಿಕೆ, ವೈಶಿಷ್ಟ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಸರ್ಕಾರ ಟ್ರಸ್ಟ್‌ಗಳನ್ನು ಸ್ಥಾಪಿಸಿದೆ. ಟ್ರಸ್ಟ್‌ಗೆ ನೇಮಕವಾದವರು ಹೊಸ ಕಾರ್ಯಕ್ರಮಗಳನ್ನು ರೂಪಿಸಿ, ಗತ ವೈಭವ ಮರುಕಳಿಸುವಂತೆ ಮಾಡಬೇಕು’ ಎಂದರು.

ADVERTISEMENT

‘ಸಂಸ್ಕೃತಿ ಬದುಕಿನ ಬೇರು. ಅದನ್ನು ಸದೃಢಗೊಳಿಸುವ ಕೆಲಸ ಆಗಬೇಕು. ಸಮಸ್ಯೆ, ಸವಾಲುಗಳನ್ನು ನಿಭಾಯಿಸಲು ಜಿಲ್ಲಾಡಳಿತ ಸಹಕಾರ ನೀಡಲಿದೆ’ ಎಂದು ಹೇಳಿದರು.

ವಿವಿಧ ಟ್ರಸ್ಟ್‌ಗಳ ಸದಸ್ಯರಾದ ಹನುಮಾಕ್ಷಿ ಗೋಗಿ, ಶರಣಮ್ಮ ಗೊರೆಬಾಳ, ನಿಜಗುಣಿ ರಾಜಗುರು ಮಾತನಾಡಿದರು.

ದ.ರಾ. ಬೇಂದ್ರೆ ಟ್ರಸ್ಟ್‌ ಅಧ್ಯಕ್ಷ ಸರಜೂ ಕಾಟ್ಕರ್, ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗುಂಜನ್‌ ಆರ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಸುರೇಶ ಹಿರೇಮಠ, ಆರತಿ ದೇವಶಿಖಾಮಣಿ ಪಾಲ್ಗೊಂಡಿದ್ದರು. 

ಕಲಾ ಭವನಕ್ಕೆ ಕಾಯಕಲ್ಪ ಕಲ್ಪಿಸಿ ಕಾರ್ಯಕ್ರಮಗಳನ್ನು ನಡೆಸಲು ವ್ಯವಸ್ಥೆ ಮಾಡಬೇಕು. ಉದ್ಯಾನಗಳಲ್ಲಿ ಶಿಲ್ಪ ಕಲಾಕೃತಿಗಳ ನಿರ್ವಹಣೆ ಆಗಬೇಕು.
– ಮಾರುತಿ ಬಿ, ಅಧ್ಯಕ್ಷ ಡಿ.ವಿ.ಹಾಲಭಾವಿ ಟ್ರಸ್ಟ್
ಧಾರವಾಡವು ಸಾಹಿತ್ಯ ಸಂಗೀತ ಕಲೆ ಸಾಂಸ್ಕೃತಿಕ ಸಿರಿವಂತಿಕೆಯ ಊರು. ನಗರದ ಪ್ರವೇಶ ಭಾಗದಲ್ಲಿ ‘ಸಂಗೀತ ಸಾಹಿತ್ಯ ಕಾಶಿಗೆ ಸ್ವಾಗತ’ ಎಂಬ ಸ್ವಾಗತ ಕಮಾನು ಹಾಕಬೇಕು
– ಕೈವಲ್ಯಕುಮಾರ ಗುರವ, ಅಧ್ಯಕ್ಷ ಬಸವರಾಜ ರಾಜಗುರು ಟ್ರಸ್ಟ್‌
ಜಿಲ್ಲಾ ಕೇಂದ್ರದಲ್ಲಿ ರಂಗಭೂಮಿ ಚಟುವಟಿಕೆಗಳು ಬಹಳಷ್ಟು ನಡೆಯುತ್ತವೆ. ಇಲ್ಲಿ ಜಿಲ್ಲಾ ರಂಗಮಂದಿರ ನಿರ್ಮಾಣಕ್ಕೆ ಕ್ರಮ ವಹಿಸಬೇಕು.
– ರಾಜು ತಾಳಿಕೋಟಿ, ನಿರ್ದೇಶಕ ರಂಗಾಯಣ

‘ಸಾಂಸ್ಕೃತಿಕ ಉತ್ಸವ ಆಯೋಜನೆ ಆಗಲಿ’

‘ಧಾರವಾಡದ ಎಲ್ಲ ಟ್ರಸ್ಟ್‌ಗಳ ಪದಾಧಿಕಾರಿಗಳು ಒಗ್ಗೂಡಿ ವಾರ್ಷಿಕವಾಗಿ ಒಂದು ಕಾರ್ಯಕ್ರಮ ನಡೆಸಲು ಯೋಜನೆ ರೂಪಿಸಬೇಕು. ಧಾರವಾಡ ಉತ್ಸವದಲ್ಲಿ ಸಾಂಸ್ಕೃತಿಕ ಉತ್ಸವ ಆಯೋಜನೆ ಮಾಡಬಹುದು. ಎಲ್ಲ ಟ್ರಸ್ಟ್‌ಗಳ ಕಾರ್ಯಕ್ರಮಗಳಲ್ಲಿ ವಿವಿಧ ಟ್ರಸ್ಟ್‌ಗಳ ಅಧ್ಯಕ್ಷರು ಸದಸ್ಯರು ಕಡ್ಡಾಯವಾಗಿ ಭಾಗವಹಿಸಬೇಕು’ ಎಂದು ಎ‌ಂ.ಎಂ.ಕಲಬುರ್ಗಿ ಟ್ರಸ್ಟ್‌ ಅಧ್ಯಕ್ಷ ವೀರಣ್ಣ ರಾಜೂರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.