ADVERTISEMENT

ಯೋಜನೆಗಳ ಸಮರ್ಪಕ ಅನುಷ್ಠಾನಗೊಳಿಸಿ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚನೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2022, 2:18 IST
Last Updated 29 ಜೂನ್ 2022, 2:18 IST

ಧಾರವಾಡ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಕಲ್ಯಾಣಕ್ಕಾಗಿ ಸರ್ಕಾರ ಜಾರಿ ಮಾಡಿರುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ಅವರಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ 2ನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಲೋಕೋಪಯೋಗಿ, ಪಂಚಾಯ್ತರಾಜ್ ಎಂಜಿನಿಯರಿಂಗ್ ವಿಭಾಗ, ಸಣ್ಣ ಮತ್ತು ಮಧ್ಯಮ ನೀರಾವರಿ ಹಾಗೂ ಜಲಸಂಪನ್ಮೂಲ ಸೇರಿದಂತೆ ಯಾವುದೇ ಇಲಾಖೆಗಳು ಕೈಗೊಳ್ಳುವ ₹50 ಲಕ್ಷದೊಳಗಿನ ಎಲ್ಲ ಕಾಮಗಾರಿಗಳಲ್ಲಿ ಎಸ್.ಸಿ ಹಾಗೂ ಎಸ್.ಟಿ ಗುತ್ತಿಗೆದಾರರಿಗೆ ಕಡ್ಡಾಯವಾಗಿ ನಿಯಮಾನುಸಾರ ಮೀಸಲಾತಿ ನೀಡಬೇಕು ಎಂದು ಸೂಚನೆ ನೀಡಿದರು.

ADVERTISEMENT

ಪೊಲೀಸರು ದೌರ್ಜನ್ಯಕ್ಕೊಳಗಾಗಿ ರಕ್ಷಣೆ ಕೋರಿ ಬರುವ ಸಂತ್ರಸ್ತರ ದೂರುಗಳನ್ನು ಆದ್ಯತೆ ಮೇಲೆ ದಾಖಲಿಸಿಕೊಂಡು ನಿಗದಿತ ಅವಧಿಯೊಳಗೆ ಆರೋಪ ಪಟ್ಟಿ ಸಲ್ಲಿಸಿ, ನ್ಯಾಯ ಒದಗಿಸಬೇಕು. ಜಿಲ್ಲೆಯ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ದೌರ್ಜನ್ಯಕ್ಕೀಡಾದ ಪರಿಶಿಷ್ಟ ವ್ಯಕ್ತಿಗಳ ದೂರುಗಳನ್ನು ದಾಖಲಿಸಿಕೊಳ್ಳಲು ವಿಳಂಬ ಮಾಡಬಾರದು. ಜಿಲ್ಲೆಯಲ್ಲಿ ಈವರೆಗೆ ಬಾಕಿ ಇರುವ 134 ಪ್ರಕರಣಗಳನ್ನು ತ್ವರಿತವಾಗಿವಿಲೀನಗೊಳಿಸಬೇಕು ಎಂದು ಸರ್ಕಾರಿ ವಕೀಲರಿಗೆ ಸೂಚಿಸಿದರು.

ಸ್ಮಶಾನಜಾಗಗಳ ಕೊರತೆ ಎದುರಿಸುತ್ತಿರುವ ಜಿಲ್ಲೆಯ ಗ್ರಾಮಗಳಲ್ಲಿ ತಹಶೀಲ್ದಾರರು ಪರಿಶೀಲನೆ ನಡೆಸಿ ರುದ್ರಭೂಮಿ ಒದಗಿಸಲು ಸ್ಪಂದಿಸಬೇಕು ಎಂದು ಸೂಚಿಸಿದರು.

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ‘ಹು–ಧಾ ಮಹಾನಗರ ಪಾಲಿಕೆ, ಕಿಮ್ಸ್, ಡಿಮ್ಹಾನ್ಸ್ ಸೇರಿದಂತೆ ಸಾರ್ವಜನಿಕ ವಲಯದ ವಿವಿಧ ಕಚೇರಿ ಹಾಗೂ ಸಂಸ್ಥೆಗಳಲ್ಲಿ ಸಫಾಯಿ ಕರ್ಮಚಾರಿಗಳಿಗೆ ಅಗತ್ಯ ಸೌಲಭ್ಯ, ವೇತನ, ಭತ್ಯೆಗಳನ್ನು ಸಕಾಲದಲ್ಲಿ ಪಾವತಿಸಬೇಕು. ಪಾಲಿಕೆಯಲ್ಲಿ ಹೊರಗುತ್ತಿಗೆ ಮೂಲಕ ಮಾನವ ಸಂಪನ್ಮೂಲ ಒದಗಿಸುತ್ತಿರುವ ಗುತ್ತಿಗೆದಾರರು ಪಾಲಿಕೆಗೆ ವಂಚಿಸುತ್ತಿರುವ ಆರೋಪಗಳಿವೆ. ಪಾಲಿಕೆಯು ವಿಶೇಷ ಜಾಗೃತದಳ ರಚಿಸಿ, ವಾರ್ಡ್ ವಾರು ಪರಿಶೀಲನೆ ಕೈಗೊಂಡು ಅಕ್ರಮ ತಡೆಯಬೇಕು’ ಎಂದರು.

‘ಅವಳಿ ನಗರದ ಪಾರ್ಕಿಂಗ್ ಸ್ಥಳಗಳ ಗುತ್ತಿಗೆ ಪಡೆದಿರುವವರು ನಿಗದಿಗಿಂತ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಬಗ್ಗೆ, ರೈಲ್ವೆ ಪೊಲೀಸರು ಅಲ್ಲಿನ ಸಫಾಯಿ ಕರ್ಮಚಾರಿಗಳಿಗೆ ತೊಂದರೆ ನೀಡುತ್ತಿರುವ ಬಗ್ಗೆ ಅನೇಕ ಮಾಹಿತಿಗಳಿವೆ ಸಂಬಂಧಿಸಿದವರ ವಿರುದ್ಧ ಕ್ರಮ ವಹಿಸಬೇಕು’ ಎಂದರು.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಬಿ.ಗೋಪಾಲಕೃಷ್ಣ ಮಾತನಾಡಿ, ‘ಹೊರಗುತ್ತಿಗೆ ಪೌರಕಾರ್ಮಿಕರ ಕುರಿತು ವಲಯವಾರು ವ್ಯಕ್ತಿಗತವಾಗಿ ಪರಿಶೀಲನೆ ಕೈಗೊಳ್ಳಲಾಗುತ್ತಿದೆ. ಗುತ್ತಿಗೆದಾರರಸಂಬಂಧಿಕರು ಇದ್ದರೆ ಕ್ರಮ ವಹಿಸಲಾಗುವುದು. ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಪೌರ ಕಾರ್ಮಿಕರ ಪ್ರತ್ಯೇಕವಾಗಿ ಹೊಸ ಉಳಿತಾಯ ಖಾತೆಗಳನ್ನು ತೆರೆದು, ಬ್ಯಾಂಕ್ ಮೂಲಕ ವಿಮಾ ಸೌಲಭ್ಯ, ಎಟಿಎಂ ಕಾರ್ಡ್‌ಗಳನ್ನು ನೇರವಾಗಿ ಹೊರಗುತ್ತಿಗೆ ಕಾರ್ಮಿಕರಿಗೆ ಹಸ್ತಾಂತರಿಸಲು ಕ್ರಮ ವಹಿಸಲಾಗಿದೆ’ ಎಂದರು.

ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಅಶೊಕ ದೊಡ್ಡಮನಿ, ಸಿದ್ದಲಿಂಗಪ್ಪ ಕರೆಮ್ಮನವರ, ಇಂದುಮತಿ ಶಿರಗಾಂವ ಅವರು ವಿವಿಧ ಪ್ರಕರಣಗಳ ಕುರಿತು ಸಭೆಯ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.