ADVERTISEMENT

ಧಾರವಾಡ | ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 6:40 IST
Last Updated 3 ಡಿಸೆಂಬರ್ 2025, 6:40 IST
ಧಾರವಾಡದಲ್ಲಿ ಮಂಗಳವಾರ ಬಿಜೆಪಿ ರೈತ ಮೋರ್ಚಾದಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು
ಧಾರವಾಡದಲ್ಲಿ ಮಂಗಳವಾರ ಬಿಜೆಪಿ ರೈತ ಮೋರ್ಚಾದಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು   

ಧಾರವಾಡ: ಮಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಜೆಪಿ ಮಹಾನಗರ ಹಾಗೂ ಗ್ರಾಮೀಣ ರೈತ ಮೋರ್ಚಾದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಕಡಪಾ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಕಾರರು ಮೆಕ್ಕೆಜೋಳ ಹಾಗೂ ಹೆಸರುಕಾಳನ್ನು ರಸ್ತೆಗೆ ಸುರಿದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

‘ಮೆಕ್ಕಜೋಳ, ಹೆಸರು, ಉದ್ದು ಖರೀದಿಗೆ ನಿಗದಿಪಡಿಸಿದ ಮಾನದಂಡಗಳನ್ನು ಸಡಿ‌ಲಿಸಬೇಕು. ಬೆಳೆ ವಿಮೆ ಕಂತು ಪಾವತಿಸಿದ ಎಲ್ಲ ರೈತರಿಗೆ ಮಧ್ಯಂತರ ಪರಿಹಾರ ನೀಡಬೇಕು. ಪ್ರತಿ ಟನ್‌ ಕಬ್ಬಿಗೆ ನಿಗದಿಪಡಿಸಿರುವ ₹3,300 ದರವನ್ನು ಸರ್ಕಾರವು ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಮಾತನಾಡಿ, ‘ರಾಜ್ಯದಲ್ಲಿ 10 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮಕ್ಕೆಜೋಳ ಬೆಳೆಯಲಾಗಿದೆ. ಬೆಲೆ ಕುಸಿತದಿಂದ ರೈತರು ಸಂಕಷ್ಟಕ್ಕೀಡಾಗಿದ್ಧಾರೆ. ಕೇಂದ್ರ ಸರ್ಕಾರ ₹2,400 ಬೆಂಬಲ ಬೆಲೆ ಘೋಷಿಸಿದರೂ ರಾಜ್ಯ ಸರ್ಕಾರ ಖರೀದಿ ಕೇಂದ್ರ ತೆರೆಯಲು ಕ್ರಮ ವಹಿಸಿಲ್ಲ’ ಎಂದು ದೂರಿದರು.

‘ಪ್ರತಿ ಬೆಳೆಗಾರರಿಂದ ಕನಿಷ್ಠ 50 ಕ್ವಿಂಟಲ್ ಮಕ್ಕೆಜೋಳವನ್ನು ಬೆಂಬಲ ಬೆಲೆಯಡಿ ಖರೀದಿಸಬೇಕು. ಇಲ್ಲದಿದ್ದರೆ ಸಾವಿರಾರು ರೈತರೊಂದಿಗೆ ಬೆಳಗಾವಿಯ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ಎಚ್ಚರಿಸಿದರು. 

ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್, ಮಾಜಿ ಶಾಸಕಿ ಸೀಮಾ ಮಸೂತಿ, ಬಿಜೆಪಿ ಮುಖಂಡ ಲಿಂಗರಾಜ ಪಾಟೀಲ, ನಾಗರಾಜ ಛಬ್ಬಿ, ರಾಘವೇಂದ್ರಗೌಡ ಪಾಟೀಲ, ಕರೆಪ್ಪ ಅಮ್ಮಿನಭಾವಿ, ಶಂಕರಕುಮಾರ ದೇಸಾಯಿ, ಶಶಿಮೌಳಿ ಕುಲಕರ್ಣಿ, ಸಂಜಯ ಕಪಟಕರ, ಸುರೇಶ ಬೆದರೆ, ಮೋಹನ ರಾಮದುರ್ಗ ಇದ್ದರು.

ಎಂಎಸ್‌ಪಿ; ಮಾನದಂಡ ಸಡಿಲಿಸಲು ಒತ್ತಾಯ ಪ್ರತಿ ರೈತರಿಂದ ಕನಿಷ್ಠ 50 ಕ್ವಿಂಟಲ್ ಮಕ್ಕೆಜೋಳ ಖರೀದಿಸಲು ಮನವಿ ಟನ್‌ ಕಬ್ಬಿಗೆ ₹3,300 ದರ; ಎಲ್ಲ ಜಿಲ್ಲೆಗೆ ವಿಸ್ತರಿಸಲು ಆಗ್ರಹ

ರಾಜಕೀಯದಲ್ಲಿ ಕಾಲಹರಣ
‘ಬೆಳೆಗಳಿಗೆ ಬೆಂಬಲ ಬೆಲೆ ನೀಡುವಂತೆ ರೈತರು ಹೋರಾಟದಲ್ಲಿ ತೊಡಗಿದ್ದಾರೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರು ರಾಜಕೀಯದಲ್ಲಿ ಕಾಲಹರಣ ಮಾಡುತ್ತಿದ್ದಾರೆ’ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ದೂರಿದರು.  ಶಾಸಕ ಎಂ.ಆರ್. ಪಾಟೀಲ ಮಾತನಾಡಿ ‘ಕೇಂದ್ರ ಸರ್ಕಾರವು ಕೃಷಿ ಸಮ್ಮಾನ್ ಯೋಜನೆಯಡಿ  ರೈತರಿಗೆ ವಾರ್ಷಿಕ ₹6 ಸಾವಿರ ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ₹4 ಸಾವಿರ ಸೇರಿದಂತೆ ಒಟ್ಟು ₹10 ಸಾವಿರ ನೀಡಲಾಗುತಿತ್ತು ಈಗಿನ ಕಾಂಗ್ರೆಸ್‌ ಸರ್ಕಾರವು ರಾಜ್ಯದ ಪಾಲನ್ನು ರದ್ದುಗೊಳಿಸಿದೆ. ರೈತರ ಮಕ್ಕಳಿಗೆ ವಿದ್ಯಾನಿಧಿ  ವಿದ್ಯಾರ್ಥಿವೇತನವನ್ನೂ ನೀಡುತ್ತಿಲ್ಲ' ಎಂದು ದೂರಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.