ADVERTISEMENT

ಧಾರವಾಡ | ಯುವಜನರಲ್ಲಿ ಉದ್ಯಮಶೀಲ ಮನೋಭಾವ ಬೆಳೆಸಿ: ಭುವನೇಶ ಪಾಟೀಲ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 5:04 IST
Last Updated 21 ಡಿಸೆಂಬರ್ 2025, 5:04 IST
ಧಾರವಾಡದಲ್ಲಿ ನಡೆದ ಜಿಲ್ಲಾಮಟ್ಟದ ಬ್ಯಾಂಕ್‌ರ್ಸ್‌ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಎನ್‌.ಎಚ್‌.ಕೋನರಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ ಪಾಲ್ಗೊಂಡಿದ್ದರು
ಧಾರವಾಡದಲ್ಲಿ ನಡೆದ ಜಿಲ್ಲಾಮಟ್ಟದ ಬ್ಯಾಂಕ್‌ರ್ಸ್‌ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಎನ್‌.ಎಚ್‌.ಕೋನರಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ ಪಾಲ್ಗೊಂಡಿದ್ದರು   

ಧಾರವಾಡ: ‘ಯುವಜನರಲ್ಲಿ ಉದ್ಯಮಶೀಲ ಮನೋಭಾವ ಬೆಳೆಸಲು ಬ್ಯಾಂಕ್‌ಗಳು ಮಾರ್ಗದರ್ಶನ ನೀಡಬೇಕು. ಉದ್ಯಮ ಸ್ಥಾಪನೆಗೆ ಸಾಲ ಸೌಲಭ್ಯ ಒದಗಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾಮಟ್ಟದ ಬ್ಯಾಂಕ್‌ರ್ಸ್‌ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು. ‘ಕೃಷಿ, ಸಣ್ಣ ಉದ್ಯಮ, ಸ್ವಉದ್ಯೋಗ, ಮಹಿಳಾ ಸ್ವಸಹಾಯ ಗುಂಪು ಹಾಗೂ ಯುವಜನರಿಗೆ ಸಕಾಲದಲ್ಲಿ ಸಾಲ ಸೌಲಭ್ಯ ಒದಗಿಸಬೇಕು. ಸಾಲ ಮಂಜೂರಾತಿಗೆ ವಿಳಂಬ ಮಾಡಬಾರದು. ಜಿಲ್ಲೆಯಲ್ಲಿ ಸಾಲ ವಿತರಣೆ, ಠೇವಣಿ ಅನುಪಾತವನ್ನು ಮತ್ತಷ್ಟು ಸುಧಾರಣೆ ಮಾಡಬೇಕು. ಎಲ್ಲ ಬ್ಯಾಂಕ್‌ಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು‘ ಎಂದು ಸೂಚಿಸಿದರು.

‘ಡಿಜಿಟಲ್ ಬ್ಯಾಂಕಿಂಗ್ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ನಗದು ರಹಿತ ವಹಿವಾಟು ಉತ್ತೇಜಿಸುವ ಮೂಲಕ ಆರ್ಥಿಕ ಶಿಸ್ತು ಬೆಳೆಸಬೇಕು. ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು, ಗ್ರಾಹಕರಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಾಗೃತಿ ಮೂಡಿಸಬೇಕು’ ಎಂದು ತಿಳಿಸಿದರು.

ADVERTISEMENT

‘ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಸರ್ಕಾರಿ ಹಾಗೂ ಅರೆ ಸರ್ಕಾರಿ ಬ್ಯಾಂಕ್‌ಗಳು ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್‍ಆರ್) ಚಟುವಟಿಕೆಯಡಿ ಗ್ರಂಥಾಲಯ ಸ್ಥಾಪನೆ, ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ಕ್ಲಾಸ್ ರೂಂ ವ್ಯವಸ್ಥೆ, ಅಂಗನವಾಡಿ, ಶಾಲಾ ಕಟ್ಟಡಗಳ ದುರಸ್ತಿಗೆ ನೆರವಾಗಬೇಕು’ ಎಂದರು.

ಆರ್‌ಬಿಐ ಬೆಂಗಳೂರು ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕ ಅರುಣಕುಮಾರ, ನಬಾರ್ಡ್‌ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಮಯೂರ್ ಕಾಂಬಳೆ, ಬ್ಯಾಂಕ್ ಆಫ್ ಬರೋಡಾ ಉಪ ಪ್ರಾದೇಶಿಕ ವ್ಯವಸ್ಥಾಪಕ ಅಮರೇಶಗೌಡ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಧಾರವಾಡ ಪ್ರಾದೇಶಿಕ ವ್ಯವಸ್ಥಾಪಕ ಚಂದ್ರಶೇಖರ ಪಾಟೀಲ, ಧಾರವಾಡ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಲೀಡ್ ಬ್ಯಾಂಕ್ ಜಿಲ್ಲಾ ಮುಖ್ಯ ವ್ಯವಸ್ಥಾಪಕ ಬಸವರಾಜ ಗಡಾದವರ ಇದ್ದರು.

ಧಾರವಾಡದಲ್ಲಿ ಶನಿವಾರ ನಡೆದ ಜಿಲ್ಲಾಮಟ್ಟದ ಬ್ಯಾಂಕ್‌ರ್ಸ್‌ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಭುವನೇಶ ಪಾಟೀಲ ಅವರು ಮೊರಬದ ಕೃಷಿ ಸಮೃದ್ಧಿ ರೈತ ಉತ್ಪಾದಕರ ಸಂಘಕ್ಕೆ ಸಾಲ ಮಂಜೂರಾತಿ ಪತ್ರ ವಿತರಿಸಿದರು
‘ಸ್ಥಳೀಯ ಭಾಷೆಗೆ ಆದ್ಯತೆ ನೀಡಿ’
‘ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಕೆವಿಜಿಬಿ) ವಿಲೀನಗೊಂಡ ನಂತರ ಸಮಸ್ಯೆಗಳು ಹೆಚ್ಚಾಗಿ ರೈತರಿಗೆ ತೊಂದರೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಗಳನ್ನು ಪರಿಹರಿಸಲು ಕ್ರಮವಹಿಸಬೇಕು’ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು. ‘ಬಹುತೇಕ ರೈತರಿಗೆ ಕನ್ನಡ ಬಿಟ್ಟು ಬೇರೆ ಭಾಷೆ ತಿಳಿಯಲ್ಲ. ಬ್ಯಾಂಕ್‌ನವರು ಸ್ಥಳೀಯ ಭಾಷೆಗೆ ಆದ್ಯತೆ ನೀಡಬೇಕು. ‌ವ್ಯವಸ್ಥಾಪಕರಿಗೆ ಕನ್ನಡ ತಿಳಿಯದಿದ್ದರೆ ಸ್ಥಳೀಯ ಸಿಬ್ಬಂದಿ ಅವರ ಜತೆಗಿದ್ದು ರೈತರಿಗೆ ಸ್ಪಂದಿಸಬೇಕು’ ಎಂದರು.

ವಿವಿಧ ಘಟಕ ಸ್ಥಾಪನೆಗೆ ಸಾಲ ಮಂಜೂರಾತಿ

ಧಾರವಾಡ: ಬೇಳೆ ಮೆಣಸಿಕಾಯಿ ಹಾಗೂ ತೈಲ ಸಂಸ್ಕರಣೆ ಘಟಕ ಹಾಗೂ ಸೋಲಾರ್‌ ಡ್ರೈಯರ್‌ ಘಟಕಗಳನ್ನು ಒಂದೇ ಸೂರಿನಡಿ ಸ್ಥಾಪಿಸಲು ಮೊರಬದ ಕೃಷಿ ಸಮೃದ್ಧಿ ರೈತ ಉತ್ಪಾದಕರ ಸಂಘಕ್ಕೆ ರಾಜ್ಯ ಸರ್ಕಾರದ ವಿವಿಧ ಇಲಾಖೆ ಯೋಜನೆಗಳಡಿ ಅಮ್ಮಿನಭಾವಿ ಯುಕೋ ಬ್ಯಾಂಕ್ ಶಾಖೆಯು ಮಂಜೂರಾತಿ ನೀಡಿರುವ ಸಾಲದ ಪತ್ರವನ್ನು ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ ಅವರು ಸಂಘದ ಆಡಳಿತ ಮಂಡಳಿ ನಿರ್ದೇಶಕಗೆ ಶನಿವಾರ ವಿತರಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳು ಸೆಲ್ಕೋ ಫೌಂಡೇಷನ್ ಸಹಾಯ ಧನ ಯೋಜನೆಯಡಿ ಮೊರಬದ ಕೃಷಿ ಸಮೃದ್ಧಿ ರೈತ ಉತ್ಪಾದಕರ ಸಂಘಕ್ಕೆ ₹44.7 ಲಕ್ಷ ಸಾಲ ಮಂಜೂರಾಗಿದೆ. ಸಂಘವು ವಿವಿಧ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಬೆಳೆಗಳನ್ನು ಮೌಲ್ಯವರ್ಧನೆ ನಿಟ್ಟಿನಲ್ಲಿ ಘಟಕ ಸ್ಥಾಪನೆಗೆ ಸಾಲ ಸೌಲಭ್ಯಕ್ಕಾಗಿ ಅಮ್ಮಿನಭಾವಿಯ ಯುಕೋ ಬ್ಯಾಂಕ್‌ ಶಾಖೆಗೆ ಮನವಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.