
ಹುಬ್ಬಳ್ಳಿ: ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ನೀಡಲಾಗುವ ‘ಧೀಮಂತ ಸನ್ಮಾನ’ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳ 97 ಜನರನ್ನು ಆಯ್ಕೆ ಮಾಡಲಾಗಿದೆ. ಇವರ ಜೊತೆಗೆ ವಿಶೇಷ ಸಾಧಕರೆಂದು 59 ಜನರನ್ನು ಗುರುತಿಸಲಾಗಿದ್ದು, ಒಟ್ಟು 129 ಜನ ಸಾಧಕರಿಗೆ ಪ್ರಶಸ್ತಿ ನೀಡಿ, ಗೌರವಿಸಲು ಪಾಲಿಕೆ ತೀರ್ಮಾನಿಸಿದೆ.
ಪೌರಕಾರ್ಮಿಕ ಕ್ಷೇತ್ರ (2), ಕೈಗಾರಿಕೆ (3), ವೈದ್ಯಕೀಯ ಕ್ಷೇತ್ರ (9), ಸಂಶೋಧಕರು (3), ಕ್ರೀಡಾ ಕ್ಷೇತ್ರ (5), ಪತ್ರಿಕೋದ್ಯಮ (14), ಛಾಯಾಗ್ರಹಣ (1), ಸಾಹಿತ್ಯ ಕ್ಷೇತ್ರ (9), ಕನ್ನಡಪರ ಹೋರಾಟಗಾರರು (2), ರಂಗ ಕ್ಷೇತ್ರ (2), ನೃತ್ಯ ಕ್ಷೇತ್ರ (3), ಸಂಗೀತ ಕ್ಷೇತ್ರ (4), ಚಿತ್ರಕಲಾ (4), ಜಾನಪದ (2), ಕೃಷಿ ಕ್ಷೇತ್ರ (2), ಶಿಕ್ಷಣ ಕ್ಷೇತ್ರ (8), ಯೋಗ ಕ್ಷೇತ್ರ (4), ವಿಶೇಷ ಚೇತನರು (3), ಎನ್‌ಜಿಒ ಮತ್ತು ಸಂಘ ಸಂಸ್ಥೆಗಳ ಕ್ಷೇತ್ರ (4), ಸೇವಾ ಕ್ಷೇತ್ರ (7), ಸಾಮಾಜಿಕ (6) ಹಾಗೂ ವಿಶೇಷ ಸಾಧಕರು (27), ಪ್ರತಿಭಾವಂತ ಮಕ್ಕಳನ್ನು (5) ಆಯ್ಕೆ ಮಾಡಲಾಗಿದೆ.
ಪಾಲಿಕೆಯ ಉಪಮೇಯರ್ ಸಂತೋಷ ಚವ್ಹಾಣ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಧೀಮಂತ ಸನ್ಮಾನ ಸಮಿತಿಯಲ್ಲಿ ವಿರೋಧ ಪಕ್ಷದ ನಾಯಕ ಇಮ್ರಾನ ಎಲಿಗಾರ, ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ತಿಪ್ಪಣ್ಣ ಮಜ್ಜಗಿ, ದೊರೆರಾಜ ಮಣಿಕುಂಟ್ಲ ಸದಸ್ಯರಾಗಿದ್ದರು. ಪಾಲಿಕೆಯ ಆರೋಗ್ಯ ಅಧಿಕಾರಿ ಡಾ.ಶ್ರೀಧರ ದಂಡಪ್ಪನವರ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.
ಅರ್ಜಿಗಳ ಮಹಾಪೂರ:
ರಾಜ್ಯೋತ್ಸವ ಆಚರಣೆಯ ವರ್ಷಕ್ಕೆ ಸರಿಸಮವಾಗಿ ಈ ಸಲ 70 ಜನರಿಗೆ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿತ್ತು. ಆದರೆ, ಪ್ರಶಸ್ತಿ ಆಕಾಂಕ್ಷಿಗಳಿಂದ ಅರ್ಜಿಗಳ ಮಹಾಪೂರವೇ ಹರಿದುಬಂದಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಒಟ್ಟು 623 ವ್ಯಕ್ತಿಗಳು ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ ಅರ್ಹತೆ, ವಯಸ್ಸಿನ ಹಿರಿತನ ಹಾಗೂ ಇತರ ಅಂಶಗಳನ್ನು ಪರಿಗಣಿಸಿ, ಅಂತಿಮ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಸಮಿತಿ ಸದಸ್ಯ ತಿಪ್ಪಣ್ಣ ಮಜ್ಜಗಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಶಸ್ತಿ ವಿತರಣೆ ಇಂದು:
ಪ್ರಶಸ್ತಿಗೆ 70 ಜನ ಸಾಧಕರನ್ನು ಗುರುತಿಸಬೇಕಾಗಿತ್ತು. ಆದರೆ, ಹಲವು ಜನ ಉತ್ತಮ ಸಾಧಕರಿದ್ದರು. ಇವರಿಗೆಲ್ಲ ನಿರಾಶೆಗೊಳಿಸಬಾರದೆಂದು ಧೀಮಂತ ಸನ್ಮಾನ ಪ್ರಶಸ್ತಿ ಸಂಖ್ಯೆ ಹೆಚ್ಚಿಸಲಾಗಿದೆ. ಇನ್ನುಳಿದ 59 ಜನರಿಗೆ ವಿಶೇಷ ಸಾಧಕರ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಸಂತೋಷ ಚವ್ಹಾಣ ‘ಪ್ರಜಾವಾಣಿ’ಗೆ ತಿಳಿಸಿದರು.
ನಗರದ ಇಂದಿರಾಗಾಜಿನ ಮನೆ ಉದ್ಯಾನದಲ್ಲಿ ನ.1ರಂದು ಸಂಜೆ 5ಗಂಟೆಗೆ ನಡೆಯಲಿರುವ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ನೀಡಿ, ಸನ್ಮಾನಿಸಲಾಗುವುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.