ADVERTISEMENT

ಹುಬ್ಬಳ್ಳಿ | ಯೋಜನೆಗಳಿದ್ದರೂ ತಪ್ಪದ ಅಂಗವಿಕಲರ ಬವಣೆ

2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 37,221 ಅಂಗವಿಕಲರು; ಯೋಜನೆಗಳಿಗೆ ಅನುದಾನ ಕೊರತೆ

ಸತೀಶ ಬಿ.
Published 9 ಡಿಸೆಂಬರ್ 2024, 5:25 IST
Last Updated 9 ಡಿಸೆಂಬರ್ 2024, 5:25 IST
   

ಹುಬ್ಬಳ್ಳಿ: ಅಂಗವಿಕಲರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು, ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ಬಹುತೇಕರಿಗೆ ಸರ್ಕಾರದ ಯೋಜನೆಗಳು ತಲುಪದೆ ಅವರು ಪರದಾಡುವಂತಾಗಿದೆ.

‘ಅಂಗವಿಕಲರಿಗೆ ಅನುಕಂಪ ಬೇಡ, ನೆರವು ನೀಡಿ’ ಎಂಬುದು ಭಾಷಣಕ್ಕಷ್ಟೇ ಸೀಮಿತವಾಗಿದೆ. ಜಿಲ್ಲೆಯಲ್ಲಿ 2011ರ ಜನಗಣತಿ ಪ್ರಕಾರ 37,221 ಜನ ಅಂಗವಿಕಲರಿದ್ದಾರೆ. ಆ ನಂತರ ಸಮೀಕ್ಷೆ ನಡೆಯದ ಕಾರಣ ನಿಖರ ಮಾಹಿತಿಯೂ ಅಧಿಕಾರಿಗಳ ಬಳಿ ಲಭ್ಯವಿಲ್ಲ.

ಜಿಲ್ಲೆಯಲ್ಲಿ 26 ಸಾವಿರ ಯುಡಿಐಡಿ ಕಾರ್ಡ್ (ಅಂಗವಿಕಲರ ವಿಶಿಷ್ಟ ಗುರುತಿನ ಚೀಟಿ) ವಿತರಿಸಲಾಗಿದೆ. ಅರ್ಹರಲ್ಲದವರೂ ಕಾರ್ಡ್‌ ಪಡೆದಿದ್ದಾರೆ. ಈ ಬಗ್ಗೆ ಸರಿಯಾಗಿ  ಪರಿಶೀಲನೆ ನಡೆಯದ ಕಾರಣ ನಿಜವಾದ ಅಂಗವಿಕಲರು ಸೌಲಭ್ಯಗಳಿಂದ ವಂಚಿತರಾಗುವಂತಾಗಿದೆ.

ADVERTISEMENT

ಈ ಮೊದಲು ಅಂಧರು, ಕಿವುಡರು, ಮೂಗರು, ಬುದ್ಧಿಮಾಂದ್ಯರು, ದೈಹಿಕ ಅಂಗವಿಕಲತೆ ಹೊಂದಿರುವವರನ್ನು ಮಾತ್ರ ಅಂಗವಿಕಲರೆಂದು ಗುರುತಿಸಲಾಗಿತ್ತು. ಈಗ ಕುಷ್ಠರೋಗಿಗಳು, ಅಪಘಾತಕ್ಕೀಡಾಗಿ ಶಾಶ್ವತವಾಗಿ ಅಂಗವಿಕಲರಾದವರು, ಆ್ಯಸಿಡ್ ದಾಳಿಗೆ ಒಳಗಾದವರು ಸೇರಿದಂತೆ 21 ಬಗೆಯನ್ನು ಅಂಗವಿಕಲರ ಪಟ್ಟಿಗೆ ಸೇರಿಸಲಾಗಿದೆ.

ಈ ಹಿಂದೆ ಅಂಗವಿಕಲರಿಗೆ ಇಲಾಖೆಯಿಂದ ಗುರುತಿನ ಚೀಟಿ ನೀಡಲಾಗುತ್ತಿತ್ತು. ಇದನ್ನು ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನ ಕಷ್ಟವಾಗಿತ್ತು. ನೈಜ ಫಲಾನುಭವಿಗಳ ಬದಲಿಗೆ ಬೇರೆಯವರು ಲಾಭ ಪಡೆಯುತ್ತಿದ್ದರು. ಈ ಅಕ್ರಮಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ, ನಕಲು ಮಾಡಲಾಗದ ಗುರುತಿನ ಚೀಟಿ ಬಳಕೆಗೆ ತಂದಿದೆ. 6 ವರ್ಷ ಮೇಲಿನ ಎಲ್ಲ ಅಂಗವಿಕಲರಿಗೆ ಇದನ್ನು ಕಡ್ಡಾಯಗೊಳಿಸಲಾಗಿದೆ.

ಯುಡಿಐಡಿ ಕಾರ್ಡ್ ಜಾಗತಿಕವಾಗಿ ಅಂಗೀಕರಿಸಿದ ಏಕೈಕ ಗುರುತಿಸುವಿಕೆಯಾಗಿದ್ದು, ಅದು ಅಂಗವಿಕಲರ ಅಗತ್ಯಗಳನ್ನು ಪೂರೈಸುತ್ತದೆ. ಈ ಯೋಜನೆಯ ಭಾಗವಾಗಿ ಸರ್ಕಾರವು ಪ್ರೋತ್ಸಾಹಗಳನ್ನು ನೀಡುತ್ತಿದೆ. ಆದರೆ, ಈ ಕಾರ್ಡ್ ಸಿಗದವರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಅಂಥವರಿಗೆ ಆದಷ್ಟು ಬೇಗ ಕಾರ್ಡ್ ವಿತರಣೆ ಆಗಬೇಕು ಎಂಬುದು ಅಂಗವಿಕಲರ ಒತ್ತಾಯ.

ಅಂಗವಿಕಲ ವಿದ್ಯಾರ್ಥಿಗಳ ವಿದ್ಯಾರ್ಥಿವೇತನಕ್ಕೆ ಕೇವಲ ₹8 ಲಕ್ಷ ಅನುದಾನ ಬಂದಿದೆ. ಫಲಾನುಭವಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಆಗಿಲ್ಲ. ಅದೇ ರೀತಿ ಅಂಗವಿಕಲರಿಗೆ ಸಾಧನ ಸಲಕರಣೆ ವಿತರಣೆ, ಯಂತ್ರಚಾಲಿತ ದ್ವಿಚಕ್ರ ವಾಹನ, ಟಾಕಿಂಗ್ ಲ್ಯಾಪ್‌ಟಾಪ್‌, ಶ್ರವಣದೋಷವುಳ್ಳವರಿಗೆ ಹೊಲಿಗೆಯಂತ್ರ, ಅಂಧ ವಿದ್ಯಾರ್ಥಿಗಳಿಗೆ ಬ್ರೈಲ್‌ ಕಿಟ್‌, ವೈದ್ಯಕೀಯ ಪರಿಹಾರ ನಿಧಿ, ಶಿಶುಪಾಲನಾ ಭತ್ಯೆ, ವಿವಾಹ ಪ್ರೋತ್ಸಾಹಧನ ಸೇರಿದಂತೆ ವಿವಿಧ ಯೋಜನೆಗಳಿಗೆ ಸಾಕಷ್ಟು ಜನ ಅರ್ಜಿ ಸಲ್ಲಿಸಿದರೂ, ಫಲಾನುಭವಿಗಳನ್ನು ಗುರುತಿಸಿ, ಸೌಲಭ್ಯ ಒದಗಿಸುವ ಕೆಲಸ ಆಗಿಲ್ಲ. ಹೆಸರಿಗೆ ಮಾತ್ರ ಅಂಗವಿಲಕರಿಗೆ ಯೋಜನೆ ಇದ್ದು, ಬವಣೆ ಮಾತ್ರ ತಪ್ಪಿಲ್ಲ ಎಂಬುದು ಅಂಗವಿಕಲರ ಅಳಲು.

ಸರ್ಕಾರದಿಂದ ಈವರೆಗೂ ಅನುದಾನ ಬಿಡುಗಡೆ ಆಗಿಲ್ಲ. ಹೀಗಾಗಿ ಫಲಾನುಭವಿಗಳ ಅಯ್ಕೆ ಸಾಧ್ಯವಾಗಿಲ್ಲ ಎನ್ನುತ್ತಾರೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ ಕೆ.

ಅಂಗವಿಕಲರ ಯೋಜನೆಗಳನ್ನು ನಿಜವಾಗಿ ಅಂಗವಿಕಲರಲ್ಲದವರು ಪಡೆಯುತ್ತಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಲು ಸಮಿತಿ ರಚಿಸುವ ಅಗತ್ಯ ಇದೆ ಎನ್ನುತ್ತಾರೆ ಧಾರವಾಡ ತಾಲ್ಲೂಕಿನ ವಿವಿದೋದ್ದೇಶ ಪುನರ್ವಸತಿ (ಎಂಆರ್‌ಡಬ್ಲ್ಯು) ಕಾರ್ಯಕರ್ತ ಬಸವರಾಜ ಬೆಳಾರ ಹೇಳಿದರು.

ಅಂಗವಿಕಲರು, ಹಿರಿಯ ನಾಗರಿಕರ ಪುನರ್ವಸತಿ, ಸರ್ಕಾರದ ಯೋಜನೆಗಳ  ಮಾಹಿತಿ ಸೇರಿದಂತೆ ಸೌಲಭ್ಯಗಳಿಂದ ವಂಚಿತರಾಗುವಂತೆ ವಿಆರ್‌ಡಬ್ಲ್ಯ್ಯು, ಎಂಆರ್‌ಡಬ್ಲ್ಯುಗಳು ಶ್ರಮಿಸುತ್ತಾರೆ. ಅವರಿಗೆ ಸೇವಾ ಭದ್ರತೆ ಇಲ್ಲ. ಗೌರವಧನದ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಸೇವಾ ಭದ್ರತೆ ಕಲ್ಪಿಸಬೇಕು ಎಂಬುದು ಅವರ ಒತ್ತಾಯ.

ಅಗತ್ಯ ಕ್ರಮ: ಅವಳಿ ನಗರದಲ್ಲಿ 38 ಸಾರ್ವಜನಿಕ ಶೌಚಾಲಯಗಳಿದ್ದು, ಅದರಲ್ಲಿ 30ರಲ್ಲಿ ಅಂಗವಿಕಲರಿಗೆ ಬೇಕಾದ ಸೌಲಭ್ಯಗಳಿವೆ. 53 ಸಮುದಾಯ ಶೌಚಾಲಯಗಳಿದ್ದು, ಅಲ್ಲಿ ಸೌಲಭ್ಯ ಕೊರತೆ ಇದೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಹೇಳಿದರು.

ವೆಸ್ಟರ್ನ್‌ ಕಮೋಡ್‌ ಶೌಚಾಲಯ ನಿರ್ಮಿಸಿ

ಜಿಲ್ಲೆಯ 144 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಅಂಗವಿಕಲರ ಮನೆಗಳಲ್ಲಿ ವೆಸ್ಟರ್ನ್ ಕಮೋಡ್ (ಪಾಶ್ಚಾತ್ಯ ಮಾದರಿ) ಶೌಚಾಲಯ ನಿರ್ಮಾಣ ಮಾಡಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದ್ದು, ಈವರೆಗೂ ಅದು ಈಡೇರಿಲ್ಲ ಎನ್ನುತ್ತಾರೆ ಸಕ್ಷಮ ಸಂಸ್ಥೆಯ ಕೇಶವ ತೆಲಗು. ‘ಅಂಗವಿಕಲರನ್ನು ಗೌರವದಿಂದ ಕಾಣಿ‘ ಎಂಬ ನಾಮಫಲಕವನ್ನು ಅವಳಿ ನಗರದಲ್ಲಿ ಹಾಕಬೇಕು ಎಂದು ಈ ಹಿಂದಿನ ನಿತೇಶ ಪಾಟೀಲ ಅವರು ಜಿಲ್ಲಾಧಿಕಾರಿಯಾಗಿದ್ದಾಗ ಆದೇಶಿಸಿದ್ದರು. ಅದು ಜಾರಿಯಾಗಿಲ್ಲ ಎಂದರು. ಶೇ 75ರಷ್ಟು ಅಂಗವಿಕಲತೆ ಇರುವವರಿಗೆ ಮಾತ್ರ ತ್ರಿಚಕ್ರ ಕೊಡಲಾಗುತ್ತಿದೆ. ಈ ನಿಯಮ ತೆಗೆದು ಎಲ್ಲ ರೀತಿಯ ಅಂಗವಿಕಲರಿಗೂ ತ್ರಿಚಕ್ರ ವಾಹನ ನೀಡಬೇಕು ಎಂದು ಒತ್ತಾಯಿಸಿದರು.

ಶೇ 75ಕ್ಕಿಂತ ಕಡಿಮೆ ಅಂಗವಿಕಲತೆ ಇದ್ದರೆ ₹800 ಮಾಸಾಶನ, ಅದಕ್ಕಿಂತ ಹೆಚ್ಚು ಇದ್ದರೆ ₹1,400 ಮಾಸಾಶನ ನೀಡಲಾಗುತ್ತಿದೆ. ಎಲ್ಲರಿಗೂ ಒಂದೇ ರೀತಿ ₹3 ಸಾವಿರ ಮಾಸಾಶನ ನೀಡಬೇಕು ಎಂದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಯುಡಿಐಡಿ ಕಾರ್ಡ್‌ ತೋರಿಸಿದರೆ ಉಚಿತ ಚಿಕಿತ್ಸೆ ನೀಡಬೇಕು. ಹು–ಧಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಂಗವಿಕರಿಗೆ ನಾಲ್ಕು ವಾರ್ಡ್‌ಗಳಲ್ಲಿ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.

ಈಡೇರದ ಬೇಡಿಕೆಗಳು

  • ಸಾರ್ವಜನಿಕ ಶೌಚಾಲಯಗಳಲ್ಲಿ ಅಂಗವಿಕಲರಿಗೆ ಪ್ರತ್ಯೇಕ ಕೊಠಡಿ, ವೆಸ್ಟರ್ನ್ ಕಮೋಡ್ ವ್ಯವಸ್ಥೆ

  • ಅಂಗವಿಕಲರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್‌

  • ಮಹಾನಗರ ಪಾಲಿಕೆ ವಾಣಿಜ್ಯ ಸಂಕೀರ್ಣಗಳಲ್ಲಿ ಅಂಗವಿಕಲರಿಗೆ ಪ್ರತ್ಯೇಕ ಮಳಿಗೆ

  • ಪಂಚತಾರಾ ಹೋಟೆಲ್‌, ಶಾಪಿಂಗ್ ಕಾಂಪ್ಲೆಕ್ಸ್, ಲಾಡ್ಜ್‌ಗಳಲ್ಲಿ ಅಂಗವಿಕಲರ ಅನುಕೂಲಕ್ಕೆ ರ‍್ಯಾಂಪ್‌

  • ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಉಚಿತ ಪ್ರವೇಶ

  • ರಿಯಾಯಿತಿ ದರದಲ್ಲಿ ಸಾಂಸ್ಕೃತಿಕ ಭವನ ನೀಡುವುದು

ಪೂರಕ ಮಾಹಿತಿ: ಬಿ.ಜೆ. ಧನ್ಯಪ್ರಸಾದ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.