ADVERTISEMENT

ಡೊಳ್ಳು, ಭಜನೆ, ಜಗ್ಗಲಿಗೆ ನಾದವೇ ಡಿಜೆ: ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 5:33 IST
Last Updated 20 ಆಗಸ್ಟ್ 2025, 5:33 IST
ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಭವನದಲ್ಲಿ ಮಂಗಳವಾರ ನಡೆದ ಸೌಹಾರ್ದ ಸಭೆಯಲ್ಲಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿದರು
ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಭವನದಲ್ಲಿ ಮಂಗಳವಾರ ನಡೆದ ಸೌಹಾರ್ದ ಸಭೆಯಲ್ಲಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿದರು ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ಹಬ್ಬದ ಸಂದರ್ಭದಲ್ಲಿ ಡಿಜೆ ಬಳಕೆ ಇತ್ತೀಚಿನ ವರ್ಷಗಳಿಂದ ಆರಂಭವಾಗಿದೆ. ಹಿಂದೂ ಪರಂಪರೆಯಲ್ಲಿ ಡೊಳ್ಳು, ಭಜನೆ, ಜಗ್ಗಲಗಿ ನಾದವೇ ಡಿಜೆ ಆಗಿದೆ’ ಎಂದು ನಗರದ ಮೂರು ಸಾವಿರಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಹು-ಧಾ ಮಹಾನಗರ ಪೊಲೀಸ್ ಘಟಕ ಮಂಗಳವಾರ ಹಮ್ಮಿಕೊಂಡಿದ್ದ ‘ಸೌಹಾರ್ದ ಸಭೆ’ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ರಾತ್ರಿ 10ರವರೆಗೆ ಮಾತ್ರ ಡಿಜೆ ಬಳಸಲು ಅವಕಾಶವಿದ್ದು, ಬಳಕೆ ಅವಧಿ ವಿಸ್ತರಿಸುವಂತೆ ಕೆಲವು ಗಣೇಶ ಸಮಿತಿಯವರು ಒತ್ತಾಯಿಸಿದ್ದಾರೆ. ಅವಕಾಶವಿದ್ದರೆ, ಎರಡು ತಾಸು ಹೆಚ್ಚು ವಿಸ್ತರಿಸಲು ಇಲಾಖೆ ಯೋಚಿಸಬಹುದು. ಹುಬ್ಬಳ್ಳಿಯಲ್ಲಿ ಎಲ್ಲ ಧರ್ಮದವರೂ ಪ್ರೀತಿ–ವಿಶ್ವಾಸದಿಂದ ಹಬ್ಬಗಳನ್ನುಆಚರಿಸುತ್ತಿರುವುದು ಸಾಮರಸ್ಯದ ಸಂಕೇತ’ ಎಂದರು.

ADVERTISEMENT

ಮುಸ್ಲಿಂ ಧರ್ಮಗುರು ತಾಜುದ್ದೀನ್‌ಪಿರ್‌ ಖಾದ್ರಿ ಮಾತನಾಡಿ, ‘ಇಸ್ಲಾಂ ಧರ್ಮದಲ್ಲಿ ಧ್ವನಿವರ್ಧಕ ಬಳಸಲು ಅವಕಾಶವಿಲ್ಲ. ಈ ವರ್ಷದಿಂದ ಅದನ್ನು ಬಳಸದಿರುವಂತೆ ಎಲ್ಲ ಮುತುವಲ್ಲಿಗಳು ಸೇರಿ ನಿರ್ಣಯ ಕೈಗೊಂಡು, ಅಂಜುಮನ್‌ ಸಂಸ್ಥೆಯಿಂದ ಠರಾವು ಪಾಸು ಮಾಡಲಾಗಿದೆ’ ಎಂದು ಹೇಳಿದರು.

‘ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿರುವ ಪೆಂಡಾಲ್‌ಗಳ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಬೇಕು. ಚನ್ನಮ್ಮ ವೃತ್ತದ ಬಳಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿ ಸ್ಥಗಿತಗೊಳಿಸಿ, ಬಂದ್‌ ಮಾಡಿರುವ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಬೇಕು. ಗಣೇಶ ಮೂರ್ತಿ ವಿಸರ್ಜನೆ ಸಂದರ್ಭ ಧಾರ್ಮಿಕ ಭಾವನೆಗೆ ಬೆಲೆಕೊಟ್ಟು ಡಿಜೆ ಬಳಕೆಗೆ ಅವಕಾಶ ಕಲ್ಪಿಸಬೇಕು’ ಎಂದು ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ಅಧ್ಯಕ್ಷ ಮೋಹನ‌ ಲಿಂಬಿಕಾಯಿ ಆಗ್ರಹಿಸಿದರು.

ಡಿಸಿಪಿ ಮಹಾನಿಂಗ ನಂದಗಾವಿ, ಶಹರ ತಹಶೀಲ್ದಾರ್ ಮಹೇಶ ಗಸ್ತೆ, ಪಾಲಿಕೆ ಹೆಚ್ಚುವರಿ ಆಯುಕ್ತ ವಿಜಯಕುಮಾರ್, ಪಾಲಿಕೆಯ ವಿರೋಧ ಪಕ್ಷದ ನಾಯಕ ಇಮ್ರಾನ್ ಯಲಿಗಾರ, ಉದ್ಯಮಿ ವಿ.ಎಸ್.ವಿ.‌ ಪ್ರಸಾದ್, ರಮೇಶಕುಮಾರ, ಅಲ್ತಾಫ್ ಕಿತ್ತೂರು, ಮಹೇಂದ್ರ ಸಿಂಘಿ, ಗುರುನಾಥ ಉಳ್ಳಿಕಾಶಿ ಇದ್ದರು.

ಶಾಂತಿ ಕದಡುವವರ ಗಡೀಪಾರು: ಶಶಿಕುಮಾರ್‌

ಹುಬ್ಬಳ್ಳಿ: ‘ಪದೇ ಪದೇ ಅಪರಾಧ ಪ್ರಕರಣದಲ್ಲಿ ಪಾಲ್ಗೊಂಡು ಸಮಾಜದಲ್ಲಿ ಶಾಂತಿ ಕದಡುವವರ ಪಟ್ಟಿ ಸಿದ್ಧವಾಗುತ್ತಿದ್ದು ಶೀಘ್ರದಲ್ಲಿಯೇ ಅವರನ್ನು ಗಡೀಪಾರು ಮಾಡಲಾಗುವುದು. ಸಮಾಜಘಾತುಕ ಶಕ್ತಿಗಳು ಎಲ್ಲ ಸಮುದಾಯದಲ್ಲೂ ಇದ್ದಾರೆ. ಶಾಂತಿ ಭಂಗ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಈ ವರ್ಷವೂ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಯಾಗುತ್ತಿದೆ. ಸಾಂಪ್ರದಾಯಕ ಸಂಗೀತ ಬಳಸಿ ಸೌಹಾರ್ದದಿಂದ ಹಬ್ಬ ಆಚರಿಸಬೇಕು’ ಎಂದು ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್‌ ಹೇಳಿದರು. 

ಸೌಹಾರ್ದ ಸಭೆಯಲ್ಲಿ ‘ಗುಂಡಿ’ ಸದ್ದು

ಗಣೇಶ ಮತ್ತು ಈದ್‌ ಮೀಲಾದ್‌ ಹಬ್ಬದ ಸೌಹಾರ್ದ ಸಭೆಯಲ್ಲಿ ವಿವಿಧ ಧರ್ಮದ ಧರ್ಮಗಳು ಸೇರಿ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಗುಂಡಿ ಬಿದ್ದ ರಸ್ತೆಗಳ ಕುರಿತು ಮಾತನಾಡಿದರು.

ಹಬ್ಬ ಸಮೀಪಿಸುತ್ತಿದ್ದರೂ ಪಾಲಿಕೆ ಗುಂಡಿ ಮುಚ್ಚುವಲ್ಲಿ ಆಸಕ್ತಿ ತೋರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುತವಲ್ಲಿ ರಾಜೇಸಾಬ್ ಸಿಕಂದರ್ ಸಂಗೀತಾ ದೇವದಾಸ ಶೇಖರಯ್ಯ ಮಠಪತಿ ಶಿವಾನಂದ ಮುತ್ತಣ್ಣವರ ಅಲ್ತಾಫ್‌ ಕಿತ್ತೂರು ಮೋಹನ ಲಿಂಬಿಕಾಯಿ ರಸ್ತೆ ದುರಸ್ತಿಗೆ ಆಗ್ರಹಿಸಿದರು.

‘ಪ್ರತಿವರ್ಷವೂ ಹಬ್ಬದ ಸಂದರ್ಭ ಇದೇ ಸಮಸ್ಯೆ ಎದುರಾಗುತ್ತಿದೆ. ಪಾಲಿಕೆ ತನ್ನ ಜವಾಬ್ದಾರಿಯನ್ನು ನಿಭಾಯಿಸಬೇಕು’ ಎಂದು ಒತ್ತಾಯಿಸಿದರು.

ಡಿಜೆ ಬಳಕೆಗೆ ಅನುಮತಿ ನೀಡುವಂತೆ ಸಾಕಷ್ಟು ಗಣೇಶ ಸಮಿತಿಗಳು ವಿನಂತಿಸಿವೆ. ಸುಪ್ರೀಂ ಕೋರ್ಟ್ ನಿರ್ದೇಶನ ಮೀರಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ .
ಎನ್‌. ಶಶಿಕುಮಾರ್‌, ಕಮಿಷನರ್‌ ಹು–ಧಾ ಮಹಾನಗರ
ಹಬ್ಬಕ್ಕೆ ತನ್ನದೇ ಆದ ಹಿನ್ನೆಲೆ ಮಹತ್ವ ಇರುತ್ತದೆ. ಶ್ರೀಮಂತಿಕೆ ಪ್ರದರ್ಶನ ಅದರ ಉದ್ದೇಶವಲ್ಲ. ದೇವರು ಮೆಚ್ಚುವ ಹಾಗೆ ಶಾಂತಿಯಿಂದ ಹಬ್ಬ ಆಚರಿಸಿ ಮಾದರಿಯಾಗಬೇಕು.
ಮ್ಯಾಕ್ಸಿಮ್ ಡಿಸೋಜ್, ಕ್ರೈಸ್ತ್‌ ಧರ್ಮಗುರು
ನಗರದ ರಸ್ತೆಗಳೆಲ್ಲ ಗುಂಡಿ ಬಿದ್ದು ಹಾಳಾಗಿದ್ದು ಅವುಗಳನ್ನು ದುರಸ್ತಿ ಪಡಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಸಂಬಂಧಪಟ್ಟ ಇಲಾಖೆ ದುರಸ್ತಿಗೆ ಮುಂದಾಗಲಿ.
ಗ್ಯಾನಿ ಗುರುವಂತ್‌ಸಿಂಗ್, ಸಿಖ್ ಧರ್ಮಗುರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.