
ಕಲಘಟಗಿ: ತಾಲ್ಲೂಕಿನ ಕೆಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಹಾಗೂ ಔಷಧಿ ಕೊರತೆಯಿಂದ ಗ್ರಾಮೀಣ ಭಾಗದ ಬಡ ಜನರು ಚಿಕಿತ್ಸೆಗಾಗಿ ದೂರದ ತಾಲ್ಲೂಕು ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗೆ ತೆರಳುವ ಅನಿವಾರ್ಯತೆ ಎದುರಾಗಿದೆ.
ತಾಲ್ಲೂಕು 87 ಗ್ರಾಮಗಳು 28 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 6 ಪ್ರಾಥಮಿಕ ಆರೋಗ್ಯ ಕೇಂದ್ರಗಳಾದ ಮುಕ್ಕಲ, ಬಮ್ಮಿಗಟ್ಟಿ, ಸಂಗಮೇಶ್ವರ, ಗಳಗಿ ಹುಲಕೊಪ್ಪ, ಮಿಶ್ರಿಕೋಟಿ, ಗಂಜಿಗಟ್ಟಿ, ಬಮ್ಮಿಗಟ್ಟಿ ಹಾಗೂ ಸಂಗಮೇಶ್ವರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಗತ್ಯ ವೈದ್ಯರ ಕೊರತೆಯಿಂದಾಗಿ ಇಲ್ಲಿನ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ಸಿಗುತ್ತಿಲ್ಲ.
ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಪ್ರತ್ಯೇಕ ಆಂಬುಲೆನ್ಸ್ ವಾಹನ ಕೊರತೆ ಎದುರಿಸುತ್ತಿವೆ.
ಗಂಜಿಗಟ್ಟಿ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಸುಮಾರು 14 ಗ್ರಾಮಗಳು ಒಳಪಡುತ್ತವೆ. ಇಲ್ಲಿ ವೈದ್ಯರು ಇದ್ದರೂ ಸ್ಟಾಪ್ ನರ್ಸ್ ಕೊರತೆಯಿಂದ ಕೇವಲ ಔಷಧಿ ಉಪಚಾರಕ್ಕೆ ಮಾತ್ರ ಸೀಮಿತವಾಗಿದೆ. ರೋಗಿಗಳಿಗೆ ಚುಚ್ಚು ಮದ್ದು ಹಾಗೂ ಸಲಾಯನ್ ಬಾಟಲಿ ಅವಶ್ಯಕತೆ ಇದ್ದಾಗ ಬೇರೆ ಆಸ್ಪತ್ರೆಗೆ ತೆರಳುವ ಪರಿಸ್ಥಿತಿ ಎದುರಾಗಿದೆ.
ಗ್ರಾಮೀಣ ಆರೋಗ್ಯ ಕೇಂದ್ರ ದುಮ್ಮವಾಡ, ತಬಕದಹೊನ್ನಳ್ಳಿ, ದೇವಿಕೊಪ್ಪ ಹಾಗೂ ‘ನಮ್ಮ ಕ್ಲಿನಿಕ್’ ಕಲಘಟಗಿಯಲ್ಲಿದೆ. ತಾಲ್ಲೂಕಿನ ವಿವಿಧ ಗ್ರಾಮಗಳ 33 ಆಯುಷ್ಮಾನ್ ಆರೋಗ್ಯ ಕೇಂದ್ರಗಳಲ್ಲಿ 13 ಹುದ್ದೆ ಖಾಲಿ ಇವೆ. 8 ಆರೋಗ್ಯ ನಿರೀಕ್ಷಣಾಧಿಕಾರಿಗಳು ಕೊರತೆಯಿದೆ ಎಂದು ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಿದರು.
ಕೆಲವು ಗ್ರಾಮೀಣ ಆಸ್ಪತ್ರೆ ಸುತ್ತಮುತ್ತ ಗಿಡಗಂಟೆಗಳು ಬೆಳೆದು ಸ್ವಚ್ಛತೆ ಇಲ್ಲವಾಗಿದೆ.
‘ಗಂಜಿಗಟ್ಟಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಮೊದಲು 24×7 ಸೇವೆ ಇದ್ದಾಗ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅನುಕೂಲವಾಗಿತ್ತು. ಈಗ ಔಷಧಿ ಉಪಚಾರಕ್ಕೆ ಸೀಮಿತವಾಗಿ ಅದು ನಾಮಕವ್ಯವಸ್ಥೆ ಆಸ್ಪತ್ರೆಯಾಗಿದೆ. ಅಧಿಕಾರಿಗಳು ಗಮನಹರಿಸಿ ಮೊದಲಿನ ಸೇವೆ ನೀಡಿ ಜನರಿಗೆ ಅನುಕೂಲ ಕಲ್ಪಿಸಬೇಕು‘ ಎಂದು ಗಂಜಿಗಟ್ಟಿ ಗ್ರಾಮ ಪಂಚಾಯಿತಿ ಸದಸ್ಯ ನಿಂಗಪ್ಪ ಮುತ್ತೆನ್ನವರ ಒತ್ತಾಯಿಸಿದರು.
‘ಸಂಗಮೇಶ್ವರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಅರಣ್ಯದಂಚಿನ ಪ್ರದೇಶದಲ್ಲಿದೆ. ಇಲ್ಲಿ ಕಾಯಂ ವೈದ್ಯರನ್ನು ನೇಮಿಸಬೇಕು’ ಎಂದು ಬಿಜೆಪಿ ತಾಲ್ಲೂಕ ಘಟಕದ ಅಧ್ಯಕ್ಷ ಯಲ್ಲಾರಿ ಶಿಂಧೆ ಆಗ್ರಹಿದರು.
ವೈದ್ಯರ ಕೊರತೆ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ವಾರದಲ್ಲಿ 3 ದಿನಗಳವರೆಗೆ ಕಲಘಟಗಿ ಆಸ್ಪತ್ರೆ ವೈದ್ಯರ ನೇಮಿಸಲಾಗಿದೆ.-ಎನ್.ಬಿ.ಕರ್ಲವಾಡ, ತಾಲ್ಲೂಕು ಆರೋಗ್ಯಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.