ADVERTISEMENT

ಕರಕುಶಲ ವಸ್ತುಗಳ ಪ್ರದರ್ಶನಕ್ಕೆ ಚಾಲನೆ

ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ 15 ದಿನ ಪ್ರದರ್ಶನ, ಮಾರಾಟ

​ಪ್ರಜಾವಾಣಿ ವಾರ್ತೆ
Published 9 ಮೇ 2022, 13:00 IST
Last Updated 9 ಮೇ 2022, 13:00 IST
ಹುಬ್ಬಳ್ಳಿಯ ಸಿದ್ಧಾರೂಢ ರೈಲು ನಿಲ್ದಾಣದಲ್ಲಿ ಸೋಮವಾರ ಕರಕುಶಲ ವಸ್ತುಗಳ ಮಳಿಗೆಗೆ ಚಾಲನೆ ನೀಡಿದ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ ಹಾಗೂ ಗಣ್ಯರು, ಮಡಿಕೆ ತಯಾರಿಕೆಯನ್ನು ವೀಕ್ಷಿಸಿದರು
ಹುಬ್ಬಳ್ಳಿಯ ಸಿದ್ಧಾರೂಢ ರೈಲು ನಿಲ್ದಾಣದಲ್ಲಿ ಸೋಮವಾರ ಕರಕುಶಲ ವಸ್ತುಗಳ ಮಳಿಗೆಗೆ ಚಾಲನೆ ನೀಡಿದ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ ಹಾಗೂ ಗಣ್ಯರು, ಮಡಿಕೆ ತಯಾರಿಕೆಯನ್ನು ವೀಕ್ಷಿಸಿದರು   

ಹುಬ್ಬಳ್ಳಿ: ಸ್ಥಳೀಯ ಕುಶಲಕರ್ಮಿಗಳು, ಉತ್ಪನ್ನಗಳು ಹಾಗೂ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಕೇಂದ್ರ ಸರ್ಕಾರದ ‘ಒಂದು ನಿಲ್ದಾಣ, ಒಂದು ಉತ್ಪನ್ನ’ ಯೋಜನೆಯಡಿ ನಗರದ ಸಿದ್ಧಾರೂಢ ರೈಲು ನಿಲ್ದಾಣದ ಪ್ರವೇಶದ್ವಾರದಲ್ಲಿ ಸೋಮವಾರ ಕರಕುಶಲ ವಸ್ತುಗಳ ಮಳಿಗೆಗೆ ಚಾಲನೆ ನೀಡಲಾಯಿತು.

ಗ್ರಾಮೋದ್ಯೋಗ ಆಯೋಗದ ಬೆಳಗಾವಿಯ ಖಾನಾಪುರದ ಕೇಂದ್ರ ಖಾದಿ ಮತ್ತು ಗ್ರಾಮೀಣ ಕುಂಬಾರಿಕೆ ಸಂಸ್ಥೆ ಮಳಿಗೆ ತೆರೆದಿದ್ದು, 15 ದಿನಗಳ ಕಾಲ ಕುಂಬಾರಿಕೆ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ನಡೆಸಲಿದೆ. ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆಯಡಿ ಈ ನಿಲ್ದಾಣದಲ್ಲಿ ತೆರೆಯಲಾದ ಮೂರನೇ ಮಳಿಗೆ ಇದಾಗಿದೆ. ಈ ಮೊದಲು ಸಂಡೂರಿನ ಲಂಬಾಣಿ ಕಸೂರಿ ಉತ್ಪನ್ನಗಳು ಹಾಗೂ ಬೆಟಗೇರ, ಇಳಕಲ್‌ ಸೀರೆಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ನೀಡಲಾಗಿತ್ತು.

ಮಳಿಗೆಗೆ ಚಾಲನೆ ನೀಡಿ ಮಾತನಾಡಿದ ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ, ‘ಕೇಂದ್ರ ಸರ್ಕಾರ ಪ್ರಸ್ತುತ ಬಜೆಟ್‌ನಲ್ಲಿ ಸ್ಥಳೀಯ ಉತ್ಪನ್ನಗಳಿಗೆ ಪ್ರೋತ್ಸಾಹ ಮತ್ತು ಪ್ರಚಾರ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿದೆ. ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ನಿಲ್ದಾಣಕ್ಕೆ ಬರುತ್ತಾರೆ. ಪ್ರವೇಶ ದ್ವಾರದಲ್ಲಿಯೇ ಮಳಿಗೆ ಸ್ಥಾಪಿಸಿರುವುದರಿಂದ ಅವರಿಗೆ ಸ್ಥಳೀಯ ಉತ್ಪನ್ನಗಳ ಬಗ್ಗೆ ತಿಳಿದುಕೊಳ್ಳಲು ಮತ್ತು ಖರೀದಿಸಲು ಅನುಕೂಲವಾಗುತ್ತದೆ’ ಎಂದರು.

ADVERTISEMENT

ಹುಬ್ಬಳ್ಳಿ ರೈಲ್ವೆ ವಿಭಾಗಿಯ ವ್ಯವಸ್ಥಾಪಕ ಅರವಿಂದ ಮಾಳಖೇಡೆ, ವಾಣಿಜ್ಯ ವಿಭಾಗೀಯ ವ್ಯವಸ್ಥಾಪಕಿ ಹರೀತಾ ಎಸ್., ಎ.ಎಸ್. ರಾವ್. ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಾಣೇಶ ಕೆ.ಎಂ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.