ADVERTISEMENT

ಹುಬ್ಬಳ್ಳಿಯಲ್ಲಿ ಕರ್ತವ್ಯ: ಈಡೇರದ ಶೋಭಾ ಕನಸು

ಗೃಹಿಣಿಯಿಂದ ಎಸ್‌ಪಿ ಹುದ್ದೆಗೇರಿದ ಹುಬ್ಬಳ್ಳಿಯ ಶೋಭಾ ಕಟಾವ್ಕರ್

ಕೃಷ್ಣಿ ಶಿರೂರ
Published 17 ಏಪ್ರಿಲ್ 2022, 2:59 IST
Last Updated 17 ಏಪ್ರಿಲ್ 2022, 2:59 IST
ಮೊಮ್ಮಗಳೊಂದಿಗೆ ಶೋಭಾ ಕಟಾವ್ಕರ್‌
ಮೊಮ್ಮಗಳೊಂದಿಗೆ ಶೋಭಾ ಕಟಾವ್ಕರ್‌   

ಹುಬ್ಬಳ್ಳಿ: ಸಂಜೆ 6ರ ನಂತರ ಹೊಸ್ತಿಲ ದಾಟದಂಥ ತೀರಾ ಸಂಪ್ರದಾಯಸ್ಥ ಮನೆತನದಲ್ಲಿ ಹುಟ್ಟಿ ಬೆಳೆದ ಶೋಭಾ ಮುಂದೊಂದು ದಿನ ತಾನು ಪೊಲೀಸ್‌ ಹುದ್ದೆ ಸೇರಿ 24 ತಾಸು ಬೀದಿಯಲ್ಲಿ ಕಳೆಯುತ್ತೇನೆ ಎಂದು ಕನಸು ಕಂಡವರಲ್ಲ. ಆದರೆ ಬದುಕಿನ ಅನಿವಾರ್ಯತೆ ಅವರನ್ನು ಪಿಎಸ್‌ಐಯಾಗಿಸಿ, ಎಸ್‌ಪಿ ಹುದ್ದೆಗೇರಿಸಿತು. ಎಸ್‌ಪಿಯಾಗಿ ಕರ್ತವ್ಯದ ಕೊನೆಯ ಏಳು ತಿಂಗಳ ಸೇವೆಯನ್ನು ಹುಟ್ಟೂರು ಹುಬ್ಬಳ್ಳಿಯಲ್ಲಿ ನೀಡಬೇಕೆಂಬ ಅವರ ಕನಸು ಮಾತ್ರ ಈಡೇರಲೇ ಇಲ್ಲ.

ಕರ್ನಾಟಕ ಪೊಲೀಸ್‌ ಸೇವೆಯ ಬೆಂಗಳೂರು ನಗರದ ವಿಶೇಷ ವಿಭಾಗದ ಎಸಿಪಿಯಾಗಿ ಶುಕ್ರವಾರ ಮೃತರಾದ ಶೋಭಾ ಕಟಾವ್ಕರ್‌ ಮೂಲತಃ ಹುಬ್ಬಳ್ಳಿಯವರು. ಹುಬ್ಬಳ್ಳಿಯಲ್ಲಿರುವ ಅವರ ಕುಟಂಬಸ್ಥರು ಶೋಭಾ ಅವರ ಬದುಕಿನ ಪಯಣವನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

ಇಲ್ಲಿನ ಆದರ್ಶನಗರದ ಶ್ಯಾಮರಾವ್‌ ಮುಳೆ, ಶಾಂತಾ ಮುಳೆ ಅವರ ಮಗಳು. ತಹಶೀಲ್ದಾರ್‌ ಆಗಿದ್ದ ತಂದೆ ಶ್ಯಾಮರಾವ್‌ ಮುಳೆ ತಮ್ಮ ಮಕ್ಕಳನ್ನು ತೀರಾ ಶಿಸ್ತಿನಿಂದ ಬೆಳೆಸಿದ್ದಾರೆ. ಪದವಿ ಶಿಕ್ಷಣ ಮುಗಿಸುತ್ತಲೇ ಹುಬ್ಬಳ್ಳಿಯವರೇ ಆದ ಪೊಲೀಸ್‌ ಅಧಿಕಾರಿ ಶ್ರೀಕಾಂತ ಕಟಾವ್ಕರ್‌ ಅವರ ಕೈಹಿಡಿದು ಎರಡು ಮಕ್ಕಳ ತಾಯಿಯಾಗಿ, ಉತ್ತಮ ಗೃಹಿಣಿಯ ಜವಾಬ್ದಾರಿ ಹೊತ್ತಾಗಲೇ ವಿಧಿಯಾಟ ಅವರನ್ನು ಬೇರೆ ದಿಕ್ಕಿಗೆ ಸೆಳೆಯಿತು. ಮದುವೆಯಾಗಿ ಆರು ವರ್ಷ ಪೂರ್ತಿಯಾಗುವುದರೊಳಗೇ ಪತಿ ಶ್ರೀಕಾಂತ ಕಟಾವ್ಕರ್‌ ಅಪಘಾತವೊಂದರಲ್ಲಿ ಮೃತಪಟ್ಟರು. ಮೂರುವರೆ ವರ್ಷದ ಮಗ, ಒಂದೂವರೆ ವರ್ಷದ ಮಗಳನ್ನು ಪೋಷಿಸುವ ಜವಾಬ್ದಾರಿ ತಮ್ಮ ಹೆಗಲೇರಿದಾಗ ಪತಿಯ ಇಲಾಖೆಯಲ್ಲಿ ಸೇವೆಗೆ ಸೇರುವುದು ಅನಿವಾರ್ಯವೆನಿಸಿತು. ವಿರೋಧದ ನಡುವೆಯೂ ತಂದೆಯ ಪ್ರೋತ್ಸಾಹದೊಂದಿಗೆ 1990ರಲ್ಲಿ ಪಿಎಸ್‌ಐ ಆಗಿ ಸೇರಿದರು.

ADVERTISEMENT

ಇತ್ತೀಚೆಗೆ ಎಸ್‌ಪಿಯಾಗಿ ಮುಂಬಡ್ತಿ ಪಡೆದ ಶೋಭಾ ಅವರಿಗೆ ಮೈಸೂರಿನ ನಾಮದೇವ ಸಿಂಪಿ ಸಮಾಜದವರು ಸನ್ಮಾನಿಸಿದ ಸಂದರ್ಭದಲ್ಲಿ ತಮ್ಮ ಜೀವನದ ಸಾಧನೆಯನ್ನು ಅವರು ಹಂಚಿಕೊಂಡಿದ್ದಾರೆ. 1990ರಲ್ಲಿ ಪಿಎಸ್‌ಐ ಆಗಿ ಸೇರಿದ ಮೇಲೆ 2002ರಲ್ಲಿ, 2014ರಲ್ಲಿ ಬಡ್ತಿ ಪಡೆದರು. 2022ರಲ್ಲಿ ಎಸ್‌ಪಿಯಾಗಿ ಬಡ್ತಿ ಪಡೆದ ಹುಬ್ಬಳ್ಳಿಯ ಹೆಸ್ಕಾಂ ಅಧೀಕ್ಷಕರಾಗಿ ವರ್ಗಾಯಿಸಲಾಗಿತ್ತು. ನಿವೃತ್ತಿಯ ಅಂಚಿಗೆ ಬಂದಿರುವ ಶೋಭಾ ತಮ್ಮ ಕರ್ತವ್ಯದ ಕೊನೆಯ ಏಳು ತಿಂಗಳ ಸೇವೆಯನ್ನು ಹುಬ್ಬಳ್ಳಿಯಲ್ಲಿ ಸಲ್ಲಿಸುವ ಕಾತರದಲ್ಲಿದ್ದರು. ಅಷ್ಟೇ ಅಲ್ಲದೇ ಹುಬ್ಬಳ್ಳಿಯಲ್ಲಿರುವ ಅವರ ಬಂಧುಗಳು ಶೋಭಾ ಅವರನ್ನು ಬರಮಾಡಿಕೊಳ್ಳುವ ಉತ್ಸುಕತೆಯಲ್ಲಿದ್ದರು. ಬಡ್ತಿಯನ್ನು ಸಂಭ್ರಮಿಸುವವರಿದ್ದರು. ಆದರೆ ಹುಟ್ಟೂರಲ್ಲಿ ಸೇವೆ ಸಲ್ಲಿಸುವ ಶೋಭಾ ಅವರ ಕನಸು ಈಡೇರಲೇ ಇಲ್ಲ.

‘ಶೋಭಾ ಕಟಾವ್ಕರ್‌ ನನ್ನ ಚಿಕ್ಕಮ್ಮ. ಅಂದರೆ ಚಿಕ್ಕಪ್ಪನ ಹೆಂಡತಿ. ನಮ್ಮ ಕುಟುಂಬದಲ್ಲಿ ಮಹಿಳೆಯೊಬ್ಬರು ಈ ಹುದ್ದೆಗೇರಿದ್ದು ಇವರೇ ಮೊದಲು. ಅವರು ಹುಬ್ಬಳ್ಳಿಯಲ್ಲಿ ಬಂದು ಕರ್ತವ್ಯ ನಿರ್ವಹಿಸುವುದು ನಮ್ಮ ಕುಟುಂಬಕ್ಕೆ ಒಂದು ಹೆಮ್ಮೆಯ ಸಂಗತಿಯಾಗಿತ್ತು. ಅವರ ಬಡ್ತಿಯನ್ನು ಸಂಭ್ರಮಿಸುವ ಬಗ್ಗೆ ಯೋಜನೆ ಮಾಡಲಾಗಿತ್ತು. ಆದರೆ ವಿಧಿಯಾಟವೇ ಬೇರೆಯಾಯಿತು’ ಎಂದು ಶೋಭಾ ಅವರ ಹತ್ತಿರದ ಸಂಬಂಧಿ ಹುಬ್ಬಳ್ಳಿಯ ಸೀಮಾ ಕಟಾವ್ಕರ್‌ ‘ಪ್ರಜಾವಾಣಿ‘ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.