ADVERTISEMENT

ಪ್ರಶ್ನಿಸುವ ಸಾಮರ್ಥ್ಯ ಬೆಳೆಸುವುದೇ ಶಿಕ್ಷಣದ ಉದ್ದೇಶ: ಭಾಷಾ ತಜ್ಞ ಪ್ರೊ.ಗಣೇಶ್‌

‘ಧರೆಗೆ ದೊಡ್ಡವರು’ ಕಾರ್ಯಕ್ರಮಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 5:23 IST
Last Updated 4 ನವೆಂಬರ್ 2025, 5:23 IST
ಧಾರವಾಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರೊ.ಗಣೇಶ್‌ ಎನ್‌.ದೇವಿ, ಪತ್ನಿ ಸುರೇಖಾ ಅವರನ್ನು ಗೌರವಿಸಲಾಯಿತು. ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಾ.ಸಂಜೀವ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಸಹಕಾರ್ಯದರ್ಶಿ ಶಂಕರ ಕುಂಬಿ, ಸದಸ್ಯ ಧನವಂತ ಹಾಜವಗೋಳ, ಸಾಹಿತಿ ಶ್ರೀನಿವಾಸ ವಾಡಪ್ಪಿ, ಗುರು ಹಿರೇಮಠ ಪಾಲ್ಗೊಂಡಿದ್ದರು
ಧಾರವಾಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರೊ.ಗಣೇಶ್‌ ಎನ್‌.ದೇವಿ, ಪತ್ನಿ ಸುರೇಖಾ ಅವರನ್ನು ಗೌರವಿಸಲಾಯಿತು. ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಾ.ಸಂಜೀವ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಸಹಕಾರ್ಯದರ್ಶಿ ಶಂಕರ ಕುಂಬಿ, ಸದಸ್ಯ ಧನವಂತ ಹಾಜವಗೋಳ, ಸಾಹಿತಿ ಶ್ರೀನಿವಾಸ ವಾಡಪ್ಪಿ, ಗುರು ಹಿರೇಮಠ ಪಾಲ್ಗೊಂಡಿದ್ದರು   

ಧಾರವಾಡ: ‘ಶಿಕ್ಷಣದ ಉದ್ದೇಶ ಒಳ್ಳೆಯ ಪ್ರಶ್ನೆ ಕೇಳುವ ಸಾಮರ್ಥ್ಯ ಬೆಳೆಸುವುದು. ಪ್ರಶ್ನಿಸುವುದರಿಂದ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯವಿದೆ’ ಎಂದು ಭಾಷಾ ತಜ್ಞ ಪ್ರೊ.ಗಣೇಶ್‌ ಎನ್‌. ದೇವಿ ಅಭಿಪ್ರಾಯಪಟ್ಟರು.

ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ಪಾಟೀಲ ಪುಟ್ಟಪ್ಪ ಸಭಾ ಭವನದಲ್ಲಿ ಸೋಮವಾರ ನಡೆದ ‘ಧರೆಗೆ ದೊಡ್ಡವರು’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೆಲವು ವಿದ್ಯಾರ್ಥಿಗಳಿಗೆ ಪ್ರಶ್ನೆ (ಅಭಿವ್ಯಕ್ತಿ ಸ್ವಾತಂತ್ರ್ಯದ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?, ಭಾರತದಲ್ಲಿ ವಿಶ್ವವಿದ್ಯಾಲಯಗಳು ಎಷ್ಟಿವೆ?, ಶಿಶು ಮರಣ ಪ್ರಮಾಣ ಎಷ್ಟಿದೆ? ಪ್ರಜಾಪ್ರಭುತ್ವ ವ್ಯವಸ್ಥೆ ಜಾಗತಿಕ ಸೂಚ್ಯಂಕ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?...) ಚೀಟಿ ನೀಡಿ ಗೂಗಲ್‌ನಲ್ಲಿ ಮಾಹಿತಿ ಹುಡುಕಿಸಿ ವಿವರಿಸಿದರು.

‘ವ್ಯವಸ್ಥೆಯಲ್ಲಿ ಬದಲಾವಣೆ ತರಲು ಇರುವ ಸರಳ ವಿಧಾನ ಪ್ರಶ್ನಿಸುವುದು. ಸಂವಿಧಾನವು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ನೀಡಿದೆ. ಆರೋಗ್ಯಕರ ಪ್ರಜಾಪ್ರಭುತ್ವದಲ್ಲಿ ವಾಸಿಸುತ್ತಿದ್ದೆವೆಯೇ ಎಂಬುದನ್ನು ತಿಳಿದುಕೊಳ್ಳಬೇಕು. ಪ್ರಜಾಪ್ರಭುತ್ವದ ಆರೋಗ್ಯ ಕ್ಷೀಣಿಸಿದಾಗ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ಥಾನಮಾನ ಕುಸಿಯುತ್ತದೆ’ ಎಂದು ವಿಶ್ಲೇಷಿಸಿದರು.

ADVERTISEMENT

‘ಲಿಂಗ ಸಮಾನತೆ ಇರುವ ದೇಶದಲ್ಲಿ ಎಲ್ಲ ಮಕ್ಕಳಿಗೂ ಅವಕಾಶಗಳು ಲಭಿಸುತ್ತವೆ. ಹೆಣ್ಣು ಶಿಶು ಜನನಕ್ಕೆ ಅವಕಾಶ ಕೊಡದಿರುವುದು, ಹೆಣ್ಣು ಮಗುವಿಗೆ ಶಾಲೆಗೆ ಹೋಗಲು ಅವಕಾಶ ನೀಡ‌ದಿರುವುದು, ಶಾಲಾ ವಿದ್ಯಾಭ್ಯಾಸ ಮುಗಿಸಿದ ಹುಡುಗಿ ಕಾಲೇಜಿಗೆ ಹೋಗಲು ಅವಕಾಶ ನೀಡದಿರುವುದು ಇಂತಹವುಗಳ ಕುರಿತು ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್‌ ಅಧ್ಯಯನ ಮಾಡಿದರು. ಮಹಿಳೆಯರ ಅಭ್ಯುದಯಕ್ಕೆ ಶ್ರಮಿಸಿದರು’ ಎಂದು ತಿಳಿಸಿದರು.

‘ಸಾಮಾಜಿಕ ಸಾಮರಸ್ಯಕ್ಕೆ ಸಂಬಂಧಿಸಿ ದೇಶ ಕೆಳ ಸ್ಥಾನದಲ್ಲಿದೆ. ದೇಶದಲ್ಲಿ 4,200 ಜನ ಸಮುದಾಯಗಳು ಇವೆ. ಪ್ರತಿ ಸಮುದಾಯಕ್ಕೂ ಸಮಾನ ಗೌರವ ಸಿಗಬೇಕು. ಆದರೆ, ವಾಸ್ತವ ಹಾಗಿಲ್ಲ. ಯಾರನ್ನೂ ದ್ವೇಷಿಸಬಾರದು. ಇನ್ನೊಬ್ಬರನ್ನು ಪ್ರೀತಿಸುವವರು ತನ್ನನ್ನು, ಭೂಮಿಯನ್ನು, ದೇಶವನ್ನು ಪ್ರೀತಿಸುತ್ತಾರೆ’ ಎಂದರು.

‘ದೇಶದ ಜ್ಞಾನದ ಜತೆಗೆ ವಿಶ್ವದ ಜ್ಞಾನ ಇರಬೇಕು. ಸರಿಯಾದ ಜ್ಞಾನ ಇದ್ದಾಗ ಸರಿಯಾಗಿ ಅರ್ಥ ಮಾಡಿಕೊಳ್ಳುತ್ತೇವೆ ಹಾಗೂ ಇತರರನ್ನು ಸರಿಯಾದ ಸ್ಥಾನಮಾನದಲ್ಲಿ ಅರ್ಥಮಾಡಿಕೊಳ್ಳುತ್ತೇವೆ. ಎನಗಿಂತ ಕಿರಿಯರಿಲ್ಲ ಎಂದು ಬಸವಣ್ಣ ಹೇಳಿದ್ದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.

‘ಜನಗಣತಿ; ಸರ್ಕಾರದ ಜವಾಬ್ದಾರಿ’

‘ಭಾರತದ ಜನಸಂಖ್ಯೆ ಅಂದಾಜು 146 ಕೋಟಿ ಎಂದು ವಿಶ್ವಸಂಸ್ಥೆ ಹೇಳಿದೆ. 2011ರಿಂದ ಈವರೆಗೆ ಜನಗಣತಿ ನಡೆದಿಲ್ಲ. 2021ರಲ್ಲಿ ಕೋವಿಡ್‌ ಕಾರಣದಿಂದ ಜನಗಣತಿ ಮುಂದೂಡಲಾಯಿತು. ಜನಗಣತಿ ಮಾಡುವುದು ಸರ್ಕಾರದ ಜವಾಬ್ದಾರಿ. 2027ರಲ್ಲಿ ಜನಗಣತಿ ನಡೆಸುವುದಾಗಿ ಸರ್ಕಾರ ಹೇಳಿದೆ. ದೇಶದ ಜನಸಂಖ್ಯೆ ಭಾಷೆಗಳು ಸಮುದಾಯಗಳು ಎಲ್ಲ ಮಾಹಿತಿ ದೇಶದ ಎಲ್ಲರಿಗೂ ಗೊತ್ತಿರಬೇಕು’ ಎಂದು ಗಣೇಶ್‌ ದೇವಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.