
ಧಾರವಾಡ: ‘ಮನುಷ್ಯ ಪ್ರಗತಿ ಹೆಸರಿನಲ್ಲಿ ಪರಿಸರ ನಾಶಪಡಿಸುತ್ತಿದ್ದಾನೆ. ಪರಿಸರ ಸಂರಕ್ಷಣೆಗೆ ಜನಜಾಗೃತಿ ಅಗತ್ಯವಿದೆ’ ಎಂದು ಪ್ರೊ. ಅರವಿಂದ ಮೂಲಿಮನಿ ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯದ ಉನ್ನತ ಭಾರತ ಅಭಿಯಾನ ಕೋಶ ಹಾಗೂ ದಿ ಇಕೋ ಫ್ಯಾಕ್ಟರಿ ಫೌಂಡೇಷನ್ ಸಹಯೋಗದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಸಭಾಂಗಣದಲ್ಲಿ ಈಚೆಗೆ ಆಯೋಜಿಸಿದ್ದ ಶಾಶ್ವತ್ ಭಾರತ ಸೇತು ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಭೂಮಿಯ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಓಝೋನ್ ಪದರಕ್ಕೂ ಹಾಣಿಯಾಗುತ್ತಿದೆ. ಗಾಳಿ, ಆಹಾರ ಹಾಗೂ ಮಾನವ ದೇಹದಲ್ಲಿನ ರಕ್ತವೂ ಕೂಡ ವಿಷಪೂರಿತವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದರು.
ದಿ ಇಕೋ ಫ್ಯಾಕ್ಟರಿ ಫೌಂಡೇಶನ್ ಸಹ ಮುಖ್ಯಸ್ಥ ಬಸವರಾಜ ಹೊಸಮನಿ ಮಾತನಾಡಿ, ‘ಕಚ್ಚಾ ವಸ್ತುಗಳ ಮರುಬಳಕೆಯಿಂದ ಪರಿಸರ ನಾಶ ತಡೆಗಟ್ಟಬಹುದು’ ಎಂದು ತಿಳಿಸಿದರು.
ಉನ್ನತ ಭಾರತ ಅಭಿಯಾನ ಸಂಯೋಜಕ ಚೇತನ ಜೆ. ಡಿ. ಅಧ್ಯಕ್ಷತೆ ವಹಿಸಿದ್ದರು. ಕವಿವಿ ಸಿಂಡಿಕೇಟ್ ಸದಸ್ಯ ಬಸವರಾಜ ಗೊರವರ್, ಪ್ರೊ. ಸಂಗೀತಾ ಮಾನೆ, ಪ್ರೊ. ಜೆ. ಎಂ. ಚಂದುನವರ, ನವೀನ ಮಿರಾಶಿ, ಕಿರಣ ಬನ್ನಿಗೋಳ ಇದ್ದರು.