
ಸಾವು (ಪ್ರಾತಿನಿಧಿಕ ಚಿತ್ರ)
ಹುಬ್ಬಳ್ಳಿ: ಇಲ್ಲಿನ ನವ ಆನಂದ ನಗರದಲ್ಲಿ ಕೌಟುಂಬಿಕ ಕಲಹದಿಂದ ವ್ಯಕ್ತಿಯೊಬ್ಬ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಗುರುವಾರ ನಡೆದಿದೆ.
ಅಂಜುಮಾ (33) ಕೊಲೆಯಾದವರು. ಆರೋಪಿ ಮೆಹಬೂಬ್ (36) ಎಂಬಾತನನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಮೊದಲ ಪತಿ ಮೃತಪಟ್ಟಿದ್ದರಿಂದ ಎರಡು ಮಕ್ಕಳೊಂದಿಗೆ ವಾಸವಿದ್ದ ಅಂಜುಮಾ ಅವರನ್ನು, ಮೊದಲ ಪತ್ನಿಯನ್ನು ತೊರೆದಿದ್ದ ಮೆಹಬೂಬ್ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದ. ಅವರು ನವ ಆನಂದ ನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇಬ್ಬರ ಮಧ್ಯೆ ಜಗಳ ನಡೆದು, ಈ ವೇಳೆ ಮೆಹಬೂಬ್, ಅಂಜುಮಾ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.
ರೈಲು ನಿಲ್ದಾಣದಲ್ಲಿ ಕಳವು: ಬೆಳಗಾವಿಗೆ ತೆರಳಲು ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಮಲಗಿದ್ದ ರಾಯಬಾಗದ ಸುಪ್ರಿತ್ ಕಾಂಬಳೆ ಅವರ ಚಿನ್ನಾಭರಣ, ಮೊಬೈಲ್, ಬಟ್ಟೆ ಸೇರಿ ₹1.10 ಲಕ್ಷ ಮೌಲ್ಯದ ವಸ್ತುಗಳಿದ್ದ ಬ್ಯಾಗ್ ಕಳವಾಗಿದ್ದು, ಈ ಬಗ್ಗೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲ್ಯಾಪ್‌ಟಾಪ್ ಕಳವು: ಜೋಧಪುರ ಎಕ್ಸ್‌ಪ್ರೆಸ್ (16508) ರೈಲಿನಲ್ಲಿ ಬೆಂಗಳೂರಿನಿಂದ ಪುಣೆಗೆ ಪ್ರಯಾಣಿಸುತ್ತಿದ್ದ ಪುಣೆಯ ನಚಿಕೇತ ಸೇನ್ ಅವರ ₹2.30 ಲಕ್ಷ ಮೌಲ್ಯದ ಎರಡು ಲ್ಯಾಪ್‌ಟಾಪ್ ಕಳವಾದ ಕುರಿತು ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
₹5 ಲಕ್ಷ ವಂಚನೆ: ನಗರದ ಪ್ರವೀಣಕುಮಾರ ಮಾವಿನಕಾಯಿ ಅವರ ಮೊಬೈಲ್‌ಗೆ ಅಪರಿಚಿತರು ಎಸ್‌ಬಿಐ ಯೋನೊ ಆ್ಯಪ್‌ನ ಎಪಿಕೆ ಫೈಲ್ ಕಳುಹಿಸಿ ₹5.44 ಲಕ್ಷ ವಂಚಿಸಿದ್ದಾರೆ.
ಎಪಿಕೆ ಫೈಲ್ ಲಿಂಕ್ ಅನ್ನು ಪ್ರವೀಣಕುಮಾರ್ ಒತ್ತಿದಾಗ, ಮೊಬೈಲ್ ಹ್ಯಾಕ್ ಮಾಡಿ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಲಾಗಿದೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಣ ಪಡೆದು ಮೋಸ: ವ್ಯಕ್ತಿಯೊಬ್ಬ ಸಾಲದ ಕಂತು ಮರುಪಾವತಿ ಮಾಡುವುದಾಗಿ ಎಂಟು ಜನರಿಂದ ₹3.19 ಲಕ್ಷ ಪಡೆದು, ಕಂತು ತುಂಬದೆ ವಂಚಿಸಿದ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ನಗರದ ಅಶೋಕ ಗೋನಾಳ ಎಂಬಾತ, ಚೇತನ ಸುಡಗಾಡೆ, ಈರಪ್ಪ ಮುನವಳ್ಳಿ, ಯಲ್ಲಪ್ಪ ಪಾಟೀಲ, ರಾಹುಲ್ ಜೊಮಾನೆ, ಸಾಗರ ಕಿಲ್ಲೇಕರ, ರಾಕೇಶಕುಮಾರ ಲಮಾಣಿ, ರೋಜ ಮುಜಾವರ, ಅತೀಶ ತಹಶೀಲ್ದಾರ್ ಎಂಬುವರಿಗೆ ವಂಚಿಸಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.
ವಂಚನೆ: ಲೈಫ್ ಇನ್ಶೂರೆನ್ಸ್ ಪಾಲಿಸಿ ಹಣ ತುಂಬುವುದಾಗಿ ಗ್ರಾಹಕರೊಬ್ಬರಿಂದ ₹2.14 ಲಕ್ಷ ಪಡೆದು ಹಣ ಪಾವತಿಸದೆ ಸುಜಿತಕುಮಾರ್ ಎಂಬಾತ ವಂಚಿಸಿದ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಭರಣ, ವಾಹನ ಕಳವು: ಹಳೇ ಹುಬ್ಬಳ್ಳಿಯ ಭಾರತಿ ನಗರದ ನಿವಾಸಿ ಆನಂದ ಜೋಶಿ ಅವರ ಮನೆಯಲ್ಲಿದ್ದ ₹1.48 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿಯ ವಸ್ತುಗಳು ಹಾಗೂ ಒಂದು ದ್ವಿಚಕ್ರ ವಾಹನವನ್ನು ಕಳವು ಮಾಡಿರುವ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆನಂದ ಅವರು ಕುಟುಂಬ ಸಮೇತ ಬೆಂಗಳೂರಿಗೆ ಹೋದಾಗ ಕಳ್ಳರು ಮನೆಯ ಬಾಗಿಲು ಮುರಿದು ಒಳ ಪ್ರವೇಶಿಸಿ ಮನೆಯಲ್ಲಿದ್ದ ಆಭರಣ, ದ್ವಿಚಕ್ರ ವಾಹನ ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.