ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಗುರುವಿಹಳ್ಳಿಯ ರೈತ ಮಹೇಶ ಕುಲಕರ್ಣಿ ಅವರು ಒಣಬೇಸಾಯ ಮಾಡುತ್ತಿದ್ದ ಭೂಮಿಯಲ್ಲಿ ಕೃಷಿ, ಸಮಗ್ರ ಕೃಷಿ ಕೈಗೊಂಡು ಹೊಲದ ತುಂಬೆಲ್ಲ ಹಸಿರಿ ಸಿರಿ ಬೆಳೆಸಿದ್ದಾರೆ.
ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡುವುದರ ಜೊತೆಗೆ ಕರ್ನಾಟಕದ ವಿವಿಧ ಭಾಗಗಲ್ಲಿನ ವಿಶೇಷ ಸಸಿಗಳನ್ನು ತಂದು ಬೆಳೆಸಿ, ತಮ್ಮ ಹೊಲದಲ್ಲಿ ವಿಶೇಷ ಪ್ರಯೋಗ ಮಾಡಿದ್ದಾರೆ.
4 ಎಕರೆ ಹೊಲ ಹೊಂದಿರುವ ಅವರು, ಅರಣ್ಯಕೃಷಿ, ಸಮಗ್ರ ಕೃಷಿ, ಕುರಿ ಸಾಕಾಣಿಕೆ, ಹೈನುಗಾರಿಕೆ ಮಾಡುತಿದ್ದಾರೆ. 2020ರಲ್ಲಿ ಕೊಳವೆಬಾವಿ ಹಾಕಿಸಿ, ಸೌರಶಕ್ತಿ ವ್ಯವಸ್ಥೆ ಮಾಡಿಕೊಂಡು ಕೃಷಿಜೀವನದಲ್ಲಿ ನಿರತರಾಗಿದ್ದಾರೆ. ಡಿಪ್ಲೊಮಾ ಮೆಕ್ಯಾನಿಕಲ್ ಮುಗಿಸಿರುವ ಅವರು, ಕೆಲ ಕಾಲ ಬೆಂಗಳೂರಿನಲ್ಲಿ ಉದ್ಯೋಗ ಮಾಡಿದ್ದಾರೆ, ನಂತರ ಹಲವು ಎನ್‌ಜಿಒಗಳಲ್ಲೂ ಕೆಲಸ ಮಾಡಿ, ಕೋವಿಡ್ ಸಮಯದಲ್ಲಿ ಸ್ವಂತ ಊರಿಗೆ ಹಿಂತಿರುಗಿ ಕೃಷಿಯಲ್ಲಿ ತೊಡಗಿದರು.
ಕೃಷಿಅರಣ್ಯದಲ್ಲಿ ಮಹಾಗನಿ, ಬೀಟೆ, ಶ್ರೀಗಂಧ, ರಕ್ತಚಂದನ ಬೆಳೆದಿದ್ದಾರೆ. ಮಾವು, ಚಿಕ್ಕು, ಪೇರಲೆ, ಹಲಸು, ಸೇಬು, ವಾಟರ್ ಆ್ಯಪಲ್(ನೀರಿನ ಸೇಬು), ಲಿಂಬೆ, ಸೀತಾಫಲ, ಲಕ್ಷ್ಮಣ ಫಲ, ನುಗ್ಗೆಕಾಯಿ ಬೆಳೆದಿದ್ದಾರೆ. ಜೊತೆಗೆ ಜೋಳ, ಗೋವಿನಜೋಳ, ನವಣೆ, ಬಾರ್ಲಿ ಸೇರಿದಂತೆ ಸಾವಯವ ಧಾನ್ಯಗಳನ್ನು ಬೆಳೆದು ಆದಾಯ ಪಡೆಯುತ್ತಿದ್ದಾರೆ.
’25 ಕುರಿ, 15 ಹಸು ಇವೆ. ಇದರಿಂದ ನಿತ್ಯ 30 ಲೀಟರ್ ಹಾಲು ಬರುತ್ತದೆ. ಇದನ್ನು ಮಾರದೇ ತುಪ್ಪ ತಯಾರಿಸುತ್ತೇವೆ.ನಿತ್ಯ ಒಂದು ಕೆಜಿ ತುಪ್ಪ ಬರುತ್ತದೆ.ಒಂದು ಕೆಜಿಗೆ ₹2000ರಂತೆ ಮಾರಾಟ ಮಾಡುತ್ತೇನೆ. ತಿಂಗಳಿಗೆ 25 ರಿಂದ 30 ಕೆಜಿ ತುಪ್ಪ ಮಾರಾಟವಾಗುತ್ತದೆ‘ ಎನ್ನುತ್ತಾರೆ ರೈತ ಮಹೇಶ.
’ಕೃಷಿ ಅರಣ್ಯ ಮಾಡಲು ತಾಳ್ಮೆ ಮುಖ್ಯ. ಮುಂದಿನ ವರ್ಷದಿಂದ ಉತ್ತಮ ಇಳುವರಿ ಸಿಗುವ ನಿರೀಕ್ಷೆ ಇದೆ. ಹೆಚ್ಚು ಬೆಳೆಯುವ ಮಾವು, ಚಿಕ್ಕು, ಪೇರಲೆ, ಲಿಂಬೆ,ದಾಳಿಂಬೆ, ನುಗ್ಗೆಕಾಯಿಗಳನ್ನು ಮಾರುಕಟ್ಟೆಗೆ ಕಳಿಸುತ್ತೇನೆ. ತುಪ್ಪ, ಹುಣಸೆ ಹಾಗೂ ಕಡಿಮೆ ಪ್ರಮಾಣದಲ್ಲಿ ಬರುವ ಬೆಳೆಗಳನ್ನು ಪರಿಚಿತರಿಗೆ, ಸ್ನೇಹಿತರಿಗಷ್ಟೆ ಮಾರಾಟ ಮಾಡುತ್ತೇನೆ. ಖರ್ಚು ತೆಗೆದು ವಾರ್ಷಿಕ ₹6ಲಕ್ಷ ಲಾಭ ಗಳಿಸುತ್ತಿದ್ದೇನೆ‘ ಎಂದು ಅವರು ಹೇಳಿದರು.
’ಮುಂದಿನ ತಿಂಗಳಿಂದ ಮೀನು ಸಾಕಾಣಿಕೆ ಮಾಡಲು ತಯಾರಿ ನಡೆಸಿದ್ದೇನೆ, ಜೊತೆಗೆ ನಾಟಿ ಕೋಳಿ ಸಾಕಾಣಿಕೆ ಮಾಡುವ ಯೋಜನೆಯೂ ಇದೆ. ಕೃಷಿ ಕೆಲಸಕ್ಕೆ ಮಗನೂ ಸಾಥ್ ನೀಡುತ್ತಿದ್ದಾನೆ‘ ಎಂದರು.
ಕೃಷಿಯಲ್ಲಿ ಆಸಕ್ತಿ ಹೊಂದಿರುವ ರೈತ ಮಹೇಶ ಕೃಷಿಗೆ ಸಂಬಂಧಿಸಿದಂತೆ ಹಲವು ವಿಷಯಗಳನ್ನು ಚರ್ಚಿಸುತ್ತಾರೆ. ಅವರ ಹೊಲಕ್ಕೆ ಭೇಟಿ ನೀಡಿ ಸಲಹೆಗಳನ್ನು ನೀಡಿದ್ದೇವೆಭಾರತಿ ಮೆಣಸಿನಕಾಯಿ ಸಹಾಯಕ ನಿರ್ದೇಶಕರು ಕೃಷಿ ಇಲಾಖೆ ಕುಂದಗೋಳ
ಸಾವಯವ ಗೊಬ್ಬರ ಬಳಸುವುದರಿಂದ ಉತ್ತಮ ಇಳುವರಿ ಪಡೆಯಬಹುದು. ಅದಕ್ಕಾಗಿ ಹೊಲದಲ್ಲಿಯೇ ಸಾವಯವ ಗೊಬ್ಬರ ತಯಾರಿಸಿ ಮಾರುವ ಉದ್ದೇಶವಿದೆ.–ಮಹೇಶ ಕುಲಕರ್ಣಿ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.