ADVERTISEMENT

ಜಾಗದ ದರ ಹೆಚ್ಚಳದಿಂದ ಎಫ್‌ಎಂಸಿಜಿ ಘಟಕ ಮರೀಚಿಕೆ: ಸಂಸದ ಜಗದೀಶ ಶೆಟ್ಟರ್‌

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 6:02 IST
Last Updated 22 ಡಿಸೆಂಬರ್ 2025, 6:02 IST
ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ಎಸ್‌ಎಸ್‌ಕೆ ಸಣ್ಣ ಕೈಗಾರಿಕೆಗಳ ಸಂಘದ ನೂತನ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಸದ ಜಗದೀಶ ಶೆಟ್ಟರ್‌ ಹಾಗೂ ಸಮಾಜದ ಗಣ್ಯರು ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ಎಸ್‌ಎಸ್‌ಕೆ ಸಣ್ಣ ಕೈಗಾರಿಕೆಗಳ ಸಂಘದ ನೂತನ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಸದ ಜಗದೀಶ ಶೆಟ್ಟರ್‌ ಹಾಗೂ ಸಮಾಜದ ಗಣ್ಯರು ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ನಗರದಲ್ಲಿ ಜಾಗದ ಬೆಲೆ ಹೆಚ್ಚಳ ಇರುವುದರಿಂದ ಎಫ್‌ಎಂಸಿಜಿ ಘಟಕ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ. ಈ ಭಾಗದಲ್ಲಿ ಘಟಕ ಕಾರ್ಯಾರಂಭವಾಗಿದ್ದರೆ ಸಾಕಷ್ಟು ಮಂದಿಗೆ ಉದ್ಯೋಗ ದೊರಕುತ್ತಿತ್ತು’ ಎಂದು ಸಂಸದ ಜಗದೀಶ ಶೆಟ್ಟರ್‌ ಹೇಳಿದರು.

ನಗರದ ಗೋಕುಲ ರಸ್ತೆಯ ಆರ್.ಎನ್. ಶೆಟ್ಟಿ ರಸ್ತೆಯಲ್ಲಿ ನಿರ್ಮಿಸಲಾದ ಎಸ್‌ಎಸ್‌ಕೆ ಸಣ್ಣ ಕೈಗಾರಿಕೆಗಳ ಸಂಘದ ನೂತನ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ‘ನಾನು ಸಿಎಂ ಆಗಿದ್ದಾಗ ಎಫ್‌ಎಂಸಿಜಿ ಘಟಕದ ಕುರಿತು ಸಭೆ ನಡೆಸಿದ್ದು, ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಘೋಷಣೆ ಮಾಡಿದ್ದರು. ಆ ಘಟಕ ಸ್ಥಾಪನೆಯಾಗಿದ್ದರೆ ಉದ್ಯಮ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆಗಳು ಆಗುತ್ತಿದ್ದವು. ಎಲ್ಲ ಜನಪ್ರತಿನಿಧಿಗಳು ಒಗ್ಗಟ್ಟು ಪ್ರದರ್ಶಿಸಿದರೆ ಆರ್ಥಿಕ ಸ್ಥಿತಿ ಸುಧಾರಣೆಯಾಗುವುದರ ಜೊತೆಗೆ ಉದ್ಯೋಗವಕಾಶಗಳು ಹೆಚ್ಚಾಗಲಿವೆ’ ಎಂದರು.

‘ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಬೇಕು ಎನ್ನುವ ನಿಟ್ಟಿನಲ್ಲಿ ಈಗಿನ ಕೈಗಾರಿಕಾ ಸಚಿವರು ಕಾರ್ಯ ನಿರ್ವಹಿಸುತ್ತಿದ್ದಾರೆ. ‘ವಿಶೇಷ ಹೂಡಿಕೆ ವಲಯ’ ಮಾಡುವುದರಿಂದ ಉದ್ಯಮ ಮತ್ತು ಕೈಗಾರಿಕೆಗಳಲ್ಲಿ ಪ್ರಗತಿ ಸಾಧಿಸಬಹುದು. ಹುಬ್ಬಳ್ಳಿ, ಧಾರವಾಡ ಮತ್ತು ಬೆಳಗಾವಿಯನ್ನು ತ್ರಿವಳಿ ನಗರವನ್ನಾಗಿ ಮಾಡಿದರೆ ಕೈಗಾರಿಕೆಗಳು ಮತ್ತಷ್ಟು ಸಂಖ್ಯೆಯಲ್ಲಿ ಬರಲಿವೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ‘ಸಣ್ಣ ಕೈಗಾರಿಕೆಗಳಿಗೆ ಕೇಂದ್ರ ಸರ್ಕಾರ ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದು, ಬಜೆಟ್‌ನಲ್ಲಿ ಪ್ರತ್ಯೇಕ ಹಣ ಮೀಸಲಿಡುತ್ತಿದೆ. ಭಾರತದಲ್ಲಿ ತಯಾರಾಗುವ ಉತ್ಪನ್ನಗಳಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆಗಳಿವೆ. ಈವರೆಗೆ 4 ಲಕ್ಷದಷ್ಟು ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆ ಮತ್ತು ಉದ್ಯಮಗಳಿಗೆ ಹಣ ನೀಡಲಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಶೇ 30ರಷ್ಟು ಮೊಬೈಲ್ ಉತ್ಪಾನೆಗಳು ಭಾರತದಲ್ಲಿ ಆಗುತ್ತಿವೆ’ ಎಂದರು.

‘ಸಮಾಜದ ಮುಖಂಡರು ಹಾಗೂ ಯುವಕರು ನಗರದಲ್ಲಿ ಸಣ್ಣ ಕೈಗಾರಿಕಾ ಸಂಘ ಸ್ಥಾಪಿಸಿದ್ದು ಮಾದರಿ ನಡೆಯಾಗಿದೆ. ಸಮಾಜದ ಸಂಘಟನೆಯೊಂದು ಕೈಗಾರಿಕಾ ಕ್ಷೇತ್ರದ ಕುರಿತು ಸಂಘ ಕಟ್ಟಿರುವುದು ಬಹುಶಃ ದೇಶದಲ್ಲಿಯೇ ಮೊದಲು. ಪ್ರತಿ ದೇಶಕ್ಕೂ ತನ್ನದೆಯಾದ ಸಂಪನ್ಮೂಲಗಳಿವೆ. ಅದೇ ರೀತಿ ಭಾರತದ ಸಂಪನ್ಮೂಲ ಜನಸಂಖ್ಯೆಯಾಗಿದ್ದು, ಯುವ ಸಮುದಾಯವನ್ನು ಬಳಸಿಕೊಂಡು ಅಭಿವೃದ್ಧಿಯತ್ತ ಸಾಗಬೇಕು’ ಎಂದು ಎಸ್‌ಎಸ್‌ಕೆ ಸಮಾಜದ ರಾಜ್ಯಾಧ್ಯಕ್ಷ ಶಶಿಕುಮಾರ ಮೆಹರವಾಡೆ ಹೇಳಿದರು.

ಸಂಘದ ಅಧ್ಯಕ್ಷ ಅರ್ಜುನಸ ಪವಾರ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಶ್ರೀಕಾಂತ ಕಬಾಡೆ, ಸಹ ಕಾರ್ಯದರ್ಶಿ ಸಂತೋಷ ಕಾಟವೆ, ಮಾಜಿ ಶಾಸಕ ಅಶೋಕ ಕಾಟವೆ, ಸತೀಶ ಮೆಹರವಾಡೆ, ಎಸ್‌ಎಸ್‌ಕೆ ಬ್ಯಾಂಕ್ ಅಧ್ಯಕ್ಷ ವಿಠ್ಠಲ್ ಲದ್ವಾ, ನಾರಾಯಣ ನಿರಂಜನ, ರಮೇಶ ಬುರಬುರೆ, ಸಣ್ಣ ಕೈಗಾರಿಕೆಗಳ ಅಧ್ಯಕ್ಷ ರಮೇಶ ಪಾಟೀಲ, ಭಾಸ್ಕರ ಜಿತೂರಿ, ನೀಲಕಂಠಸಾ ಜಡಿ ಪಾಲ್ಗೊಂಡಿದ್ದರು.

ಎಸ್‌ಎಸ್‌ಕೆ ಸಮಾಜದ ಯುವಕರಿಗೆ ಉದ್ಯಮ ಸ್ಥಾಪಿಸುವ ಬಗ್ಗೆ ತರಬೇತಿ ನೀಡುವ ಮತ್ತು ಉದ್ಯಮದತ್ತ ಗಮನ ಸೆಳೆಯುವ ಕಾರ್ಯ ನೂತನ ಕಟ್ಟಡದಲ್ಲಿ ನಡೆಯಬೇಕು
–ಪ್ರಲ್ಹಾದ ಜೋಶಿ ಕೇಂದ್ರ ಸಚಿವ

‘ಸಂಘಟಿತ ಪ್ರಯತ್ನಕ್ಕೆ ಕಟ್ಟಡ ಸಾಕ್ಷಿ’

‘ಸಂಘಟಿತ ಪ್ರಯತ್ನವಿದ್ದರೆ ಹೇಗೆ ಅಭಿವೃದ್ಧಿಯಾಗಬಹುದು ಎನ್ನಲು ಎಸ್‌ಎಸ್‌ಕೆ ಸಮಾಜದ ಈ ಕೈಗಾರಿಕಾ ಕಟ್ಟಡ ಸಾಕ್ಷಿಯಾಗಿದೆ. ಸಣ್ಣ ಸಂಘವಾದರೂ ಸಿಎ ನಿವೇಶನ ಪಡೆದು ಹಣ  ಹೊಂದಿಸಿ ಅಲ್ಪಾವಧಿಯಲ್ಲಿ ಕಟ್ಟಡ ನಿರ್ಮಿಸಿದ್ದು ಇತರೆ ಸಮಾಜಗಳಿಗೂ ಮಾದರಿ. ಸಣ್ಣ ಕೈಗಾರಿಕೆಗಳ ಮೂಲಕ ಅನೇಕರಿಗೆ ಸಮಾಜ ಉದ್ಯೋಗಗಳನ್ನು ದೊರಕಿಸಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಈ ಕಟ್ಟಡದಿಂದ ಯುವ ಪೀಳಿಗೆ ಉದ್ಯಮದ ಬಗ್ಗೆ ತರಬೇತಿ ನೀಡುವ ಕೆಲಸವಾಗಬೇಕು. ಉದ್ದಿಮೇದಾರರು ಎದುರಿಸುವ ಸಂಕಷ್ಟಗಳನ್ನು ಸರ್ಕಾರದ ಗಮನಕ್ಕೆ ತರುವಂತಾಗಬೇಕು‘ ಎಂದು ಸಂಸದ ಜಗದೀಶ ಶೆಟ್ಟರ್‌ ಹೇಳಿದರು.

Quote -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.