
ಧಾರವಾಡ: ‘ದೇಶದಲ್ಲಿ 1950ರಿಂದ 2020ರ ಅವಧಿಯಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಏರಿಕೆಯಾಗಿದೆ’ ಎಂದು ಹೈದರಾಬಾದ್ ಪತಂಚೇರು ಅರೆ-ಶುಷ್ಕ ಉಷ್ಣವಲಯದ ಅಂತರರಾಷ್ಟ್ರೀಯ ಬೆಳೆ ಸಂಶೋಧನಾ ಸಂಸ್ಥೆಯ ನಿರ್ದೇಶಕ ಹಿಮಾಂಶು ಪಾಠಕ್ ಹೇಳಿದರು.
ಎಸ್.ಡಬ್ಲೂ.ಮೆಣಸಿನಕಾಯಿ ಮೆಮೊರಿಯಲ್ ಎಜ್ಯುಕೇಶನ್ ಮತ್ತು ರಿಸರ್ಚ ಫೌಂಡೇಶನ್ ವತಿಯಿಂದ ಪ್ರೊ. ಎಸ್.ಡಬ್ಲು.ಮೆಣಸಿನಕಾಯಿ ಅವರ ಜನ್ಮದಿನಾಚರಣೆ ನಿಮಿತ್ತ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಈಚೆಗೆ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ದೇಶದಲ್ಲಿ ಎಣ್ಣೆಕಾಳುಗಳು, ಧಾನ್ಯಗಳು, ಮೊಟ್ಟೆ, ಹಾಲು, ತೋಟಗಾರಿಕಾ ಬೆಳೆಗಳ ಉತ್ಪಾದನೆಯಲ್ಲಿ ಹೆಚ್ಚಳವಾಗಿದೆ. ಭಾರತವು ಇಂದು ಪ್ರಮುಖ ರಫ್ತು ದೇಶಗಳಲ್ಲೊಂದಾಗಿದೆ’ ಎಂದು ತಿಳಿಸಿದರು.
‘ಭವಿಷ್ಯದಲ್ಲಿ ಕೃಷಿಯ ಸವಾಲುಗಳನ್ನು ಎದುರಿಸಲು ಕೃತಕ ಬುದ್ಧಿಮತ್ತೆ, ಜೀನೋಮ್ ಎಡಿಟಿಂಗ್, ಜಿನೊಮಿಕ್ಸ್, ಫಿನೊಮಿಕ್ಸ್, ಯಂತ್ರ ಅಧ್ಯಯನ, ರೊಬೊಟಿಕ್ಸ್, ಡ್ರೋನ್‍ಗಳು, ದತ್ತಾಂಶ ವಿಶ್ಲೇಷಣೆ ಮುಂತಾದ ತಂತ್ರಜ್ಞಾನಗಳ ಮಹತ್ವದ ಪಾತ್ರ ವಹಿಸಲಿವೆ’ ಎಂದರು.
ಕುಲಪತಿ ಪ್ರೊ. ಪಿ.ಎಲ್.ಪಾಟೀಲ ಮಾತನಾಡಿ, ‘ಎಸ್.ಡಬ್ಲು. ಮೆಣಸಿನಕಾಯಿ ಅವರ ದೂರದೃಷ್ಟಿ ಮತ್ತು ಪರಿಶ್ರಮದ ಫಲದಿಂದ ಕೃಷಿ ವಿಶ್ವವಿದ್ಯಾಲಯ ಉನ್ನತಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ’ ಎಂದರು.
ವಿ.ಬಿ.ಕುಲಿಗೋಡ, ಎಸ್.ಎ.ದೇಸಾಯಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.