ADVERTISEMENT

ಹುಬ್ಬಳ್ಳಿ-ಧಾರವಾಡ | ಗಣೇಶೋತ್ಸವ, ಈದ್: ಭದ್ರತೆಗೆ ಸಿದ್ಧತೆ

ಸಿ.ಸಿ. ಟಿ.ವಿ ಕ್ಯಾಮೆರಾ ಕಣ್ಗಾವಲು: ಹೆಚ್ಚುವರಿ ಸಿಬ್ಬಂದಿ ನಿಯೋಜನೆ– ಪೊಲೀಸ್ ಕಮಿಷನರ್

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 4:32 IST
Last Updated 22 ಆಗಸ್ಟ್ 2025, 4:32 IST
ಗಣೇಶೋತ್ಸವ ಹಾಗೂ ಈದ್ ಮಿಲಾದ್‌ ಅಂಗವಾಗಿ ಹುಬ್ಬಳ್ಳಿಯ ಕಾರವಾರ ರಸ್ತೆಯ ಸಿಎಆರ್ ಮೈದಾನದಲ್ಲಿ ಕಮಿಷನರ್ ಎನ್.ಶಶಿಕುಮಾರ್, ರೌಡಿಶೀಟರ್‌ಗಳ ಪರೇಡ್ ನಡೆಸಿದರು
ಗಣೇಶೋತ್ಸವ ಹಾಗೂ ಈದ್ ಮಿಲಾದ್‌ ಅಂಗವಾಗಿ ಹುಬ್ಬಳ್ಳಿಯ ಕಾರವಾರ ರಸ್ತೆಯ ಸಿಎಆರ್ ಮೈದಾನದಲ್ಲಿ ಕಮಿಷನರ್ ಎನ್.ಶಶಿಕುಮಾರ್, ರೌಡಿಶೀಟರ್‌ಗಳ ಪರೇಡ್ ನಡೆಸಿದರು   

ಹುಬ್ಬಳ್ಳಿ: ‘ಅವಳಿ ನಗರದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 980 ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಹಬ್ಬದ ಸಂದರ್ಭದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಇಲಾಖೆಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಹು–ಧಾ ಮಹಾನಗರ ಪೊಲೀಸ್ ಕಮಿಷನರ್‌ ಎನ್.ಶಶಿಕುಮಾರ್ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಗಣೇಶೋತ್ಸವ, ಈದ್ ಮಿಲಾದ್‌ ಹಬ್ಬದ ಅಂಗವಾಗಿ ಅವಳಿ ನಗರದಲ್ಲಿ ಆಯೋಜಕರು, ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಮೇಲ್ಸೇತುವೆ  ಕಾಮಗಾರಿ ಹಿನ್ನೆಲೆ ಗಣೇಶ ಮೂರ್ತಿಗಳ ವಿಸರ್ಜನೆಗೆ ಅನನುಕೂಲವಾಗಲಿದೆ ಎಂದು ವಿವಿಧ ಗಣೇಶ ಮಂಡಳದವರು ತಿಳಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರೊಂದಿಗೆ ಚರ್ಚಿಸಲಾಗುವುದು’ ಎಂದರು.

ಈದ್ಗಾ ಮೈದಾನದಲ್ಲಿ 3 ದಿನ ಗಣೇಶೋತ್ಸವ: ‘ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಮೂರು ದಿನಗಳ ಗಣೇಶೋತ್ಸವಕ್ಕೆ ಮಹಾನಗರ ಪಾಲಿಕೆಯು ಅವಕಾಶ ನೀಡಿದೆ. ಆಲ್ಲಿನ ಉತ್ಸವದ ಮಹಾಮಂಡಳದವರು ಗಣೇಶ ಮೂರ್ತಿ ವಿಸರ್ಜನೆ ವೇಳೆ ಡಿ.ಜೆ ಬದಲಾಗಿ ಸಾಂಪ್ರದಾಯಿಕ ವಾದ್ಯಗಳನ್ನು ಬಳಸುವುದಾಗಿ ತಿಳಿಸಿದ್ದಾರೆ. ಈದ್ ಮಿಲಾದ್ ಹಬ್ಬದಂದು ಸಹ ಡಿ.ಜೆ ಬಳಕೆಗೆ ಅವಕಾಶ ಕೊಡಬಾರದು ಎಂದು ಅಂಜುಮನ್ ಇಸ್ಲಾಂ ಕಮಿಟಿ ಮನವಿ ಮಾಡಿದೆ. ಇದು ಒಳ್ಳೆಯ ಬೆಳವಣಿಗೆ’  ಎಂದು ಹೇಳಿದರು.

ADVERTISEMENT

‘ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಗಣೇಶ ಮೂರ್ತಿ ವಿಸರ್ಜನೆ ನೋಡಲು ಸುತ್ತಮುತ್ತಲಿನ ಜಿಲ್ಲೆಗಳು ಸೇರಿದಂತೆ ಹೊರರಾಜ್ಯಗಳಿಂದಲೂ ಜನರು ಬರುವ ನಿರೀಕ್ಷೆ ಇದೆ. ಶಾಂತಿ, ಸೌಹಾರ್ದದಿಂದ ಹಬ್ಬ ಆಚರಿಸಬೇಕು’ ಎಂದರು.

ಪೊಲೀಸ್ ಬಿಗಿ ಬಂದೋಬಸ್ತ್‌: ‘ಗಣೇಶೋತ್ಸವ ಹಾಗೂ ಈದ್ ಹಬ್ಬದ ಸಂದರ್ಭದಲ್ಲಿ ಭದ್ರತೆಗಾಗಿ ಅವಳಿ ನಗರ ವ್ಯಾಪ್ತಿಯಲ್ಲಿ 2,000ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಹೊರಜಿಲ್ಲೆಗಳಿಂದ ಕೆಎಸ್‌ಆರ್‌ಪಿ ತುಕಡಿ ಸೇರಿದಂತೆ ಹೆಚ್ಚುವರಿ ಸಿಬ್ಬಂದಿಯನ್ನು ಒದಗಿಸುವಂತೆ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ’ ಎಂದು ಶಶಿಕುಮಾರ್ ಹೇಳಿದರು.

‘ಅವಳಿ ನಗರದಲ್ಲಿ 30 ಸಾವಿರಕ್ಕೂ ಅಧಿಕ ಸಿ.ಸಿ. ಟಿ.ವಿ ಕ್ಯಾಮೆರಾಗಳಿವೆ. ಗಣೇಶ ಮೂರ್ತಿಗಳ ವಿಸರ್ಜನಾ  ಮೆರವಣಿಗೆ ಸಾಗುವ ಮಾರ್ಗದಲ್ಲಿ ಆರು ಸಾವಿರ ಸಿ.ಸಿ ಟಿ.ವಿ ಕ್ಯಾಮೆರಾಗಳು ಕಾರ್ಯ ನಿರ್ವಹಿಸಲಿವೆ. ಮಹಿಳೆಯರು, ಮಕ್ಕಳು, ಹಿರಿಯರಿಗೆ ತೊಂದರೆಯಾಗದಂತೆ 18 ಸ್ಥಳಗಳಲ್ಲಿ ಸುರಕ್ಷತಾ ಝೋನ್ ಮಾಡಲಾಗಿದೆ’ ಎಂದು ತಿಳಿಸಿದರು.

ಗಣೇಶೋತ್ಸವ ಸಂದರ್ಭದಲ್ಲಿ ರಾತ್ರಿ 10 ಗಂಟೆವರೆಗೆ ಮಾತ್ರ ಡಿ.ಜೆ ಬಳಕೆಗೆ ಅವಕಾಶ ನೀಡಲಾಗುವುದು. ನಿಯಮ ಮೀರಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು
ಎನ್.ಶಶಿಕುಮಾರ್ ಪೊಲೀಸ್ ಕಮಿಷನರ್ ಹುಬ್ಬಳ್ಳಿ–ಧಾರವಾಡ ನಗರ

‘ಶಾಂತಿ ಕದಡಿದರೆ ಕಾನೂನು ಕ್ರಮ’

ಹುಬ್ಬಳ್ಳಿ: ‘ಅವಳಿ ನಗರದಲ್ಲಿ ಗಣೇಶೋತ್ಸವ ಈದ್ ಮಿಲಾದ್ ಸಂದರ್ಭದಲ್ಲಿ ಶಾಂತಿ ಕದಡಿದರೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಕಮಿಷನರ್ ಎನ್.ಶಶಿಕುಮಾರ್ ಎಚ್ಚರಿಕೆ ನೀಡಿದರು. ಇಲ್ಲಿನ ಕಾರವಾರ ರಸ್ತೆಯ ಸಿಎಆರ್ ಮೈದಾನದಲ್ಲಿ ಗುರುವಾರ 750ಕ್ಕೂ ಹೆಚ್ಚು ರೌಡಿಶೀಟರ್‌ಗಳ ಪರೇಡ್ ನಡೆಸಿ ಮಾತನಾಡಿದ ಅವರು ‘ರೌಡಿಶೀಟರ್ ಎಂದರೆ ದೊಡ್ಡ ಹುದ್ದೆ ಪಟ್ಟವಲ್ಲ. ಉತ್ತಮ ಗುಣ ನಡತೆ ಬೆಳೆಸಿಕೊಳ್ಳಿ’ ಎಂದು ತಿಳಿಸಿದರು.  ‘ಪರೇಡ್‌ಗೆ 350ಕ್ಕೂ ಅಧಿಕ ರೌಡಿಶೀಟರ್‌ಗಳು ಗೈರಾಗಿದ್ದಾರೆ. ಅಂಥವರನ್ನು ಪ್ರತ್ಯೇಕವಾಗಿ ಠಾಣಾ ಹಂತದಲ್ಲಿ ಕರೆಯಿಸಿ ಎಚ್ಚರಿಕೆ ನೀಡಲಾಗುವುದು’ ಎಂದರು. ಡಿಸಿಪಿಗಳಾದ ಮಹಾನಿಂಗ ನಂದಗಾವಿ ರವೀಶ ಸಿ.ಆರ್. ಎಲ್ಲ ಠಾಣೆಗಳ ಇನ್‌ಸ್ಪೆಕ್ಟರ್‌ಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.