ADVERTISEMENT

ಗಣೇಶ ಹಬ್ಬ | ರಾತ್ರಿ ಸೌಂಡ್‌ ಸಿಸ್ಟಮ್‌ ಬಳಸಲು ಅನುಮತಿ ಪಡೆಯಬೇಕು: ಸಾವುಕಾರ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 4:00 IST
Last Updated 31 ಜುಲೈ 2025, 4:00 IST
ಹುಬ್ಬಳ್ಳಿಯಲ್ಲಿ ಬುಧವಾರ ನಡೆದ ಗಣೇಶೋತ್ಸವದ ಪೂರ್ವಭಾವಿ ಸಭೆಯನ್ನು ಗಣ್ಯರು ಉದ್ಘಾಟಿಸಿದರು
ಹುಬ್ಬಳ್ಳಿಯಲ್ಲಿ ಬುಧವಾರ ನಡೆದ ಗಣೇಶೋತ್ಸವದ ಪೂರ್ವಭಾವಿ ಸಭೆಯನ್ನು ಗಣ್ಯರು ಉದ್ಘಾಟಿಸಿದರು   

ಹುಬ್ಬಳ್ಳಿ: ‘ರಾತ್ರಿ 10ರ ನಂತರ ಸೌಂಡ್‌ ಸಿಸ್ಟಮ್‌ ಬಳಸಬಾರದು ಎಂದು ಸುಪ್ರೀಂ ಕೋರ್ಟ್‌ ಎಲ್ಲಿಯೂ ಹೇಳಿಲ್ಲ. ವಿಶೇಷ ಸಂದರ್ಭದಲ್ಲಿ 45 ಡಿಸೇಬಲ್‌ ಮೀರದಂತೆ ಬಳಸಬಹುದು ಎಂದು ಸೂಚಿಸಿದೆ. ಈ ಅಂಶವನ್ನು ಮುಂದಿಟ್ಟುಕೊಂಡು ಪ್ರಸ್ತುತ ವರ್ಷದ ಗಣೇಶೋತ್ಸವಕ್ಕೆ ರಾತ್ರಿ ವೇಳೆ ಸೌಂಡ್‌ ಸಿಸ್ಟಮ್‌ ಬಳಸಲು ಪೊಲೀಸ್‌ ಇಲಾಖೆಯಿಂದ ಅನುಮತಿ ಪಡೆಯಲು ಪ್ರಯತ್ನಿಸಬೇಕು’ ಎಂದು ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಸಾವುಕಾರ ಹೇಳಿದರು.

ನಗರದ ಸ್ವಾತಿ ಹೋಟೆಲ್ ಸಭಾಭವನದಲ್ಲಿ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘಗಳ ಒಕ್ಕೂಟ ಹಾಗೂ ಧಾರವಾಡ ಜಿಲ್ಲಾ ಸಾರ್ವಜನಿಕ ಗಜಾನನೋತ್ಸವ ಪ್ರತಿಷ್ಠಾನ ಮಂಡಳಿಗಳ ವತಿಯಿಂದ ಬುಧವಾರ ನಡೆದ ಗಣೇಶೊತ್ಸವದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ವಿಶೇಷ ಸಂದರ್ಭ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸೌಂಡ್‌ ಸಿಸ್ಟಮ್‌ ಬಳಸಲು ಅವಕಾಶವಿದ್ದು, ಅದಕ್ಕೆ ಕೆಲವು ಷರತ್ತುಗಳನ್ನು ಸುಪ್ರೀಂ ಕೋರ್ಟ್‌ ಹಾಕಿದೆ. ಆದರೆ, ಪೊಲೀಸ್‌ ಇಲಾಖೆ ರಾತ್ರಿ ಇದ್ಯಾವುದನ್ನೂ ಹೇಳುತ್ತಿಲ್ಲ. ಗಜಾನನ ಗಣೇಶೋತ್ಸವ ಮತ್ತು ಮಹಾಮಂಡಳಿ ಸಮಿತಿ ಜಂಟಿಯಾಗಿ ಚರ್ಚಿಸಿ, ವಕೀಲರ ಮುಖಾಂತರ ಇಲಾಖೆಯನ್ನು ಒತ್ತಾಯಿಸುವಂತಾಗಬೇಕು’ ಎಂದು ಹೇಳಿದರು.

ADVERTISEMENT

‘ಕೆಲ ವರ್ಷಗಳಿಂದ ಕೆಲವು ಗಣೇಶೋತ್ಸವ ಸಮಿತಿಗಳು ಗಣೇಶಮೂರ್ತಿ ದರ್ಶನಕ್ಕೆ ಪರದೆ ಕಟ್ಟಿ, ಹಣ ವಸೂಲಿಗೆ ಇಳಿದಿವೆ. ಇದು ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತಿದೆ. ಬೇರೆ ಜಿಲ್ಲೆಗಳಿಂದ ಬರುವ ಭಕ್ತರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ದುಡ್ಡು ಕೊಟ್ಟು ಯಾಕೆ ದರ್ಶನ ಮಾಡಬೇಕು, ಸಾಲುಗಟ್ಟಿ ಯಾಕೆ ನಿಲ್ಲಬೇಕು. ಇದಕ್ಕೆ ಕಡಿವಾಣ ಹಾಕಬೇಕು’ ಎಂದರು. 

‘ಕಾನೂನು ಅಡಿಯಲ್ಲಿ ಪೊಲೀಸ್‌ ಇಲಾಖೆ ಅನುಮತಿ ನೀಡುತ್ತದೆ. ರಾತ್ರಿ ಸೌಂಡ್ ಸಿಸ್ಟಮ್‌ ಇಲ್ಲದಿದ್ದರೆ ಜನರು ಬರುವುದಿಲ್ಲ. ಹಬ್ಬದ ಕಳೆಕಟ್ಟುವುದಿಲ್ಲ. 1992ರಲ್ಲಿ ನಗರದಲ್ಲಿ ನಡೆದ ಘಟನೆಯೊಂದು ಬಿಟ್ಟರೆ, ನಂತರದ ವರ್ಷದಲ್ಲಿ ಏನೂ ನಡೆದಿಲ್ಲ. ಎಲ್ಲ ಧರ್ಮದವರು ಗಣೇಶೋತ್ಸವ ಸಮಿತಿಯಲ್ಲಿ ಇದ್ದಾರೆ. ಕಾನೂನು ಬದ್ಧವಾಗಿ ಸೌಂಡ್‌ ಸಿಸ್ಟಮ್‌ ಬಳಸುವ ಸಂಬಂಧ ಪೊಲೀಸ್‌ ಕಮಿಷನರ್‌ ಬಳಿ ಚರ್ಚಿಸೋಣ’ ಎಂದು ನಾಗೇಶ ಕಲಬುರ್ಗಿ ಹೇಳಿದರು.

ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಸದಾನಂದ ಡಂಗನವರ, ಮಲ್ಲಿಕಾರ್ಜುನ ತಾಲೂರು, ವಿಜಯಕುಮಾರ ಅಪ್ಪಾಜಿ ಹಾಗೂ ಇತರರು ಪಾಲ್ಗೊಂಡಿದ್ದರು.

Highlights - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.