ADVERTISEMENT

ಹುಬ್ಬಳ್ಳಿ: ಅನಿಲ ಸೋರಿಕೆಯಿಂದ ಬೆಂಕಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2022, 12:14 IST
Last Updated 21 ಫೆಬ್ರುವರಿ 2022, 12:14 IST
ಅನಿಲ ಸೋರಿಕೆಯಾಗಿ, ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿ
ಅನಿಲ ಸೋರಿಕೆಯಾಗಿ, ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿ   

ಹುಬ್ಬಳ್ಳಿ: ನಗರದ ವಿದ್ಯಾನಗರದ ಟೆಂಗಿನಕಾಯಿ ಲೇಔಟ್‌ನಲ್ಲಿ ಹಾದು ಹೋಗಿರುವ ಮನೆಮನೆಗೆ ಅಡುಗೆ ಅನಿಲ ಪೂರೈಕೆ ಮಾಡುವ ಪೈಪ್‌ಲೈನ್‌ನಲ್ಲಿ ಸೋಮವಾರ ಅನಿಲ ಸೋರಿಕೆಯಾಗಿ, ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಯಿತು.

ಪೈಪ್‌ಲೈನ್‌ನಲ್ಲಿ ಬೆಳಿಗ್ಗೆ 10.15ರ ಸುಮಾರಿಗೆ ಬೆಂಕಿ ಹೊತ್ತಿಕೊಂಡು ಆಳೆತ್ತರಕ್ಕೆ ಉರಿಯುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಹಾಗೂ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ, ಅನಿಲ ಪೂರೈಕೆಯನ್ನು ಸ್ಥಗಿತಗೊಳಿಸಿ ಬೆಂಕಿ ನಂದಿಸಿದರು.

ಘಟನಾ ಸ್ಥಳದಲ್ಲಿ ಕೇಬಲ್‌ ಅಳವಡಿಕೆ ಅಥವಾ ಇನ್ನಿತರ ಉದ್ದೇಶಕ್ಕಾಗಿ ಗುಂಡಿ ತೋಡಿದ್ದಾಗ ಪೈಪ್‌ಲೈನ್‌ಗೆ ಹಾನಿಯಾಗಿದೆ. ಪೈಪ್‌ಲೈನ್‌ ತೀರಾ ಮೇಲೆಯೇ ಇರುವುದರಿಂದ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ. ಈ ಸ್ಥಳ ಜನನಿಬಿಡ ಪ್ರದೇಶವಾಗಿಲ್ಲವಾದ್ದರಿಂದ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಗೋಕುಲ ರಸ್ತೆ ಠಾಣೆ ಪೊಲೀಸರು ತಿಳಿಸಿದರು.

ADVERTISEMENT

ಅನಿಲ ಪೈಪ್‌ಲೈನ್ ಹಾದು ಹೋಗಿರುವ ಮಾರ್ಗದಲ್ಲಿ ಆಗಾಗ ಅನಿಲ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಳ್ಳುವುದು, ಘಟನೆ ನಡೆದಾಗ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವುದು ಹಾಗೂ ಪೊಲೀಸರು ಅನಿಲ ಪೂರೈಕೆ ಮಾಡುವ ಕಂಪನಿಯವರಿಗೆ ಎಚ್ಚರಿಕೆ ನೀಡುವುದು ಸಾಮಾನ್ಯವಾಗಿದೆ.

ಆದರೆ, ಅನಿಲ ಸೋರಿಕೆಯಾಗದಂತೆ ತಡೆಯಲು ಯಾರೂ ಶಾಶ್ವತ ಕ್ರಮ ಕೈಗೊಳ್ಳುತ್ತಿಲ್ಲ. ಸ್ಥಳೀಯರು ಆತಂಕದಲ್ಲೇ ಬದುಕಬೇಕಾಗಿದೆ. ದೊಡ್ಡ ದುರಂತ ಸಂಭವಿಸುವುದಕ್ಕೆ ಮುಂಚೆಯೇ ಸಂಬಂಧಪಟ್ಟವರು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.