
ಹುಬ್ಬಳ್ಳಿ: ನಗರದ ನೃಪತುಂಗ ಬೆಟ್ಟವನ್ನು ಅಭಿವೃದ್ಧಿಪಡಿಸಿ, ಪ್ರವಾಸಿಗರನ್ನು ಆಕರ್ಷಿಸಲು ಬೆಟ್ಟದ ಮೇಲ್ಭಾಗದಲ್ಲಿ ಗಾಜಿನ ಸೇತುವೆ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರವಾಸೋದ್ಯಮ ಇಲಾಖೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಿದೆ.
ಗ್ಲಾಸ್ ಸೇತುವೆ ಸೇರಿ ಪ್ರವೇಶದ್ವಾರದ ಕಮಾನು, ನಡಿಗೆ ಪಥ, ಮೂಲಸೌಲಭ್ಯದ ಕುರಿತು ಸಮಗ್ರ ವರದಿ ಸಿದ್ದಪಡಿಸಿ ಸಲ್ಲಿಸಲು ಆಸಕ್ತರಿಂದ ಹಾಗೂ ಸಂಘ–ಸಂಸ್ಥೆಗಳಿಂದ ದರಪಟ್ಟಿ ಆಹ್ವಾನಿಸಿದೆ. ಅಕ್ಟೋಬರ್ 31ರ ಸಂಜೆ 4ರ ಒಳಗೆ ಧಾರವಾಡದ ಪ್ರವಾಸೋದ್ಯಮ ಇಲಾಖೆಯ ಕಚೇರಿಗೆ ಸಲ್ಲಿಸಲು ಅವಕಾಶವಿದೆ.
‘2025-26 ನೇ ಸಾಲಿನ ಆಯವ್ಯಯದಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಪೂರಕವಾಗಿ ಹುಬ್ಬಳ್ಳಿಯ ನೃಪತುಂಗ ಬೆಟ್ಟವನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಆಯ್ಕೆ ಮಾಡಿಕೊಳ್ಳಲಾಗಿದೆ. ₹5 ಕೋಟಿ ವೆಚ್ಚ ಮಾಡಲಾಗುತ್ತಿದೆ. ಡಿಪಿಆರ್ ಸಿದ್ಧಪಡಿಸಿ, ಅದರ ಅಂದಾಜು ಖರ್ಚು ನೋಡಿಕೊಂಡು ಯೋಜನೆ ಅನುಷ್ಠಾನಗೊಳಿಸಲಾಗುವುದು’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಕೇರಳ, ಅಸ್ಸಾಂ, ಮಿಜೋರಾಂನಲ್ಲಿ ಇರುವ ಗಾಜಿನ ಸೇತುವೆ ಮಾದರಿಯಲ್ಲೇ ಬೆಟ್ಟದ ತುದಿಯ ಉಣಕಲ್ ಭಾಗದಲ್ಲಿ 100 ರಿಂದ 200 ಮೀಟರ್ ಉದ್ದದ ಗಾಜಿನ ಸೇತುವೆ ನಿರ್ಮಿಸುವ ಯೋಜನೆಯಿದೆ. ಬೆಟ್ಟದ ಕೆಳಭಾಗದಲ್ಲಿ ಇರುವ ಕೆರೆಯ ಕುರುಹನ್ನು ಹುಡುಕಿ, ಅದಕ್ಕೆ ಮರುಜೀವನ ನೀಡಲು ಪ್ರಯತ್ನಿಸುತ್ತೇವೆ. ಗಿಡಗಳನ್ನು ನೆಡಲು ಮತ್ತು ಮರಗಳನ್ನು ಪೋಷಿಸಲು ಕೂಡ ಆದ್ಯತೆ ನೀಡುತ್ತೇವೆ’ ಎಂದು ಶಾಸಕ ಮಹೇಶ ಟೆಂಗಿನಕಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.
ನೃಪತುಂಗ ಬೆಟ್ಟದಿಂದ ಉಣಕಲ್ ಕೆರೆವರೆಗೆ ರೋಪ್ ವೇ ನಿರ್ಮಾಣದ ಬಗ್ಗೆ ಹಿಂದೆಯೇ ಆಲೋಚನೆ ನಡೆದಿತ್ತು. ಇದರ ಕುರಿತು ವರದಿ ಪ್ರವಾಸೋದ್ಯಮ ಇಲಾಖೆಗೆ ಸಲ್ಲಿಕೆ ಆಗಿದೆ. ಸರ್ಕಾರದಿಂದ ಸ್ಪಂದನೆ ಸಿಗಬೇಕಿದೆ.–ಮಹೇಶ ಟೆಂಗಿನಕಾಯಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.