
ಅಣ್ಣಿಗೇರಿ ಪುರಸಭೆ ಆವರಣದಲ್ಲಿ ನಗರೊತ್ಥಾನ–4ರ ಹಂತದಲ್ಲಿ ಅಂಗವಿಕಲರಿಗೆ ಶಾಸಕ ಎನ್.ಎಚ್.ಕೋನರಡ್ಡಿ ಅವರು ಎಲೆಕ್ಟ್ರಿಕಲ್ ತ್ರಿಚಕ್ರ ವಾಹನ ಮತ್ತು ಪೌರಕಾರ್ಮಿಕರಿಗೆ ಸೋಲಾರ್ ವಿತರಣೆ ಮಾಡಿದರು
ಅಣ್ಣಿಗೇರಿ: ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ನೀಡುವುದರೊಂದಿಗೆ ಇತರೆ ಅಭಿವೃದ್ದಿ ಕಾಮಗಾರಿಗಳನ್ನಾಗಲಿ ಮತ್ತು ವಿವಿಧ ತರಹದ ಯೋಜನೆಗಳನ್ನು ಚಾಚು ತಪ್ಪದೇ ಮಾಡುತ್ತಾ ಸಾಗುತ್ತಿದೆ. ಇದಕ್ಕೆಲ್ಲ ತಮ್ಮ ಸಹಾಯ-ಸಹಕಾರ ಅತ್ಯಗತ್ಯವಾಗಿದೆ ಎಂದು ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು.
ಸ್ಥಳೀಯ ಪುರಸಭೆ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಮೃತ ನಗರೋತ್ಥಾನ ಹಂತ–4ರ ಯೋಜನೆಯಡಿಯಲ್ಲಿ ಅಂಗವಿಕಲರಿಗೆ ಎಲೆಕ್ಟ್ರಿಕಲ್ ತ್ರಿಚಕ್ರ ವಾಹನ ವಿತರಣೆ ಮತ್ತು ಪೌರಕಾರ್ಮಿಕರಿಗೆ ಸೋಲಾರ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಸರ್ಕಾರ ಬಡವರಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳ ಪ್ರಯೋಜನಗಳನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂಬುದು ಸರ್ಕಾರದ ಆಸೆಯಾಗಿದೆ. ನಾವು ಮಾಡುವ ಕೆಲಸಗಳಿಗೆ ಟೀಕೆ ಟಿಪ್ಪಣಿಗಳು ಸಹಜ. ಟೀಕೆ ಟಿಪ್ಪಣಿಗಳಿಗೆ ನಾನು ಹೆದರುವ ಶಾಸಕನಲ್ಲ. ಅದರ ಬದಲು ಅವರು ಮಾಡಿದ ಟೀಕೆ-ಟಿಪ್ಪಣಿಗಳಿಗೆ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳನ್ನು ಮಾಡುವ ಮೂಲಕ ಉತ್ತರ ನೀಡುವ ಶಾಸಕ‘ ಎಂದರು.
ಸರ್ಕಾರದ ಪ್ರತಿಯೊಂದು ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳು ಕಾರ್ಯಚಟುವಟಿಕೆ ಮಾಡಬೇಕು ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಹಂತ–4ರ ಯೋಜನೆಯಡಿಯಲ್ಲಿ 15 ಜನ ಅಂಗವಿಕಲರಿಗೆ ಎಲೆಕ್ಟ್ರಿಕಲ್ ತ್ರಿಚಕ್ರ ವಾಹನ, ಪ.ಜಾ ಮತ್ತು ಪ.ಪಂ 14 ಫಲಾನುಭವಿಗಳಿಗೆ ಮತ್ತು 8 ಪೌರಕಾರ್ಮಿಕರಿಗೆ ಸೋಲಾರ ಕಿಟ್ ವಿತರಣೆ ಮಾಡಲಾಯಿತು.
ಇತ್ತೀಚೆಗೆ ಸುರಿದ ಮಳೆ ಸಿಡಿಲಿಗೆ ಸಿಲುಕಿ ಮೃತಪಟ್ಟ 7 ಕುರಿಗಳಿಗೆ ₹28 ಸಾವಿರ ಪರಿಹಾರವನ್ನು ಕುರಿಗಾಯಿ ಮಲ್ಲಪ್ಪ ಬೆಳ್ಳಿಕೊಪ್ಪ ಅವರಿಗೆ ಶಾಸಕ ಎನ್.ಎಚ್.ಕೋನರಡ್ಡಿ ಪ್ರಕೃತಿ ವಿಕೋಪದಡಿ ವಿತರಣೆ ಮಾಡಿದರು.
ಪುರಸಭೆ ಕಸ ವಿಲೇವಾರಿ ಮಾಡುವ ವಾಹನಗಳಿಗೆ ಜಿಪಿಎಸ್ ಅಳವಡಿಸಿ ಅದರ ಕಂಟ್ರೋಲ್ ರೊಂ ವ್ಯವಸ್ಥೆಗೆ ಚಾಲನೆ ನೀಡಲಾಯಿತು.
ತಹಶೀಲ್ದಾರ್ ಮಂಜುನಾಥ ದಾಸಪ್ಪನವರ, ತಾ.ಪಂ ಇಒ ಪಿ.ಆರ್.ಬಡೇಖಾನವರ, ಮುಖ್ಯಾಧಿಕಾರಿ ವೈ.ಜಿ.ಗದ್ದಿಗೌಡರ. ಪುರಸಭೆ ಅಧ್ಯಕ್ಷ ಶಿವಾನಂದ ಬೆಳಹಾರ, ಉಪಾಧ್ಯಕ್ಷ ನಾಗರಾಜ ದಳವಾಯಿ, ನೀಲವ್ವ ಕುರಹಟ್ಟಿ, ಮುದಕಣ್ಣ ಕೊರವರ, ಲಲಿತಾ ಹಿರೇಮಠ, ಫಾತೀಮಾ ನವಲಗುಂದ, ಎ.ಕೆ.ಬೂಸನೂರಮಠ ಸೇರಿದಂತೆ ಸರ್ವ ಸದಸ್ಯರು, ಸಿಬ್ಬಂದಿ ಮತ್ತು ಫಲಾನುಭವಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.