
ನವಲಗುಂದ: ‘ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಫಲಾನುಭವಿಗಳಿಗೆ ತಲುಪಿಸುವ ಹಾಗೇ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಸರಿಯಾಗಿ ತಲುಪದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ನೇರವಾಗಿ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಪಂಚ ಗ್ಯಾರಂಟಿ ಯೋಜನೆಗಳ ತಾಲ್ಲೂಕು ಅನುಷ್ಠಾನ ಸಮಿತಿ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡ್ರ ತಿಳಿಸಿದರು.
ಅವರು ಶುಕ್ರವಾರ ಪಟ್ಟಣದಲ್ಲಿರುವ ತಾಲ್ಲೂಕು ಪಂಚಾಯಿತಿ ಸಭಾ ಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯದ ಜನರ ಜೀವನಮಟ್ಟ ಸುಧಾರಣೆಗೆ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ. ರೇಷನ್ ಕಾರ್ಡಗಳು ರದ್ದಾಗುತ್ತಿದ್ದು, ಇದರಿಂದ ಬಡವರಿಗೆ ಅನ್ಯಾಯ ಆಗಬಾರದು. ಅರ್ಹ ಫಲಾನುಭವಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಶ್ರೀಮಂತರಲ್ಲಿ ಇಂತಹ ಕಾರ್ಡ್‌ಗಳಿದ್ದರೆ ರದ್ದು ಮಾಡಿ. ಆದರೆ ನಿಜವಾಗಿಯೂ ಅರ್ಹತೆ ಇದ್ದರೆ ಪರಿಶೀಲಿಸಿ ಕಾರ್ಡ್ ಉಳಿಸಿಕೊಳ್ಳುವ ಕೆಲಸವಾಗಲಿ ಎಂದರು.
ಪಡಿತರ ಚೀಟಿದಾರರಿಗೆ ಸರ್ಕಾರ ನಿಗದಿಪಡಿಸಿರುವಂತೆ ಪಡಿತರ ವಿತರಿಸಬೇಕು. ಪಡಿತರ ವಿತರಣೆಯಲ್ಲಿ ಯಾವುದೇ ಲೋಪದೋಷಗಳಾಗಬಾರದು. ಅಂಗಡಿ ಮಾಲೀಕರು ಪಡಿತರ ಚೀಟಿದಾರರಿಗೆ ಪಡಿತರ ವಿತರಿಸುವಲ್ಲಿ ತೊಂದರೆ ಕೊಡಬಾರದು. ಒಂದು ವೇಳೆ ಪಡಿತರ ಅಂಗಡಿ ಮಾಲೀಕರು ಗ್ರಾಹಕರಿಗೆ ಪಡಿತರ ನೀಡುವಲ್ಲಿ ತೊಂದರೆ ನೀಡುತ್ತಿದ್ದರೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದರು.
ಶಾಲಾ ಮಕ್ಕಳಿಗೆ ಸಮಯಕ್ಕೆ ತಕ್ಕಂತೆ ಬಸ್ ಸೌಲಭ್ಯ ಕಲ್ಪಿಸಿ ಅಂಗನವಾಡಿ ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಬೇಕು. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸುವಂತೆ ಸೂಚನೆ ನೀಡಿದರು.
ಬಡವರಿಗೆ ಗ್ಯಾರಂಟಿ ಯೋಜನೆಯ ಸೌಲಭ್ಯ ತಲುಪಿಸುವಲ್ಲಿ ವಿಳಂಬವಾಗಬಾರದು. ಸೌಲಭ್ಯಗಳನ್ನು ನಿಗದಿತ ಅವಧಿಯಲ್ಲಿಯೇ ತಲುಪಿಸುವಂತಾಗಬೇಕು. ಅನರ್ಹರನ್ನು ಹೊರತುಪಡಿಸಿ, ಯೋಜನೆಗಳ ಅನುಷ್ಠಾನ ಶೇ 100ರಷ್ಟು ಪ್ರಗತಿ ಸಾಧಿಸಬೇಕು. ಗ್ಯಾರಂಟಿ ಯೋಜನೆಯ ಅನುಷ್ಠಾನದಲ್ಲಿ ಪ್ರಾಮಾಣಿಕತನವಿರಬೇಕು. ಭ್ರಷ್ಟಾಚಾರರಹಿತ ಪಾರದರ್ಶಕ ಆಡಳಿತ ನಡೆಸಿ ಅರ್ಹರು ಇದರ ಲಾಭ ಪಡೆಯುವಂತೆ ಮಾಡಬೇಕು ಎಂದು ಅಧ್ಯಕ್ಷ ವರ್ಧಮಾನಗೌಡ ಸೂಚನೆ ನೀಡಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪಿ.ಆರ್.ಬಡೇಖಾನವರ, ಗಾಯತ್ರಿದೇವಿ ಪಾಟೀಲ, ಟಿ.ಎಲ್.ಮುತ್ತಣ್ಣವರ, ರಾಜು ಮಾಲಗಿತ್ತಿ, ಗ್ಯಾರಂಟಿ ಸಮಿತಿ ಸದಸ್ಯ ಕಣ್ಣೀಶ ತಲವಾಯಿ, ದಿಲೀಪ ನದಾಫ್, ಚಂದ್ರಣ್ಣ ಅಣ್ಣಿಗೇರಿ, ಈರಣ್ಣ ಶಿಡಗಂಟಿ, ಅನ್ನಪೂರ್ಣ ಶಿರಹಟ್ಟಿಮಠ, ಮಲ್ಲಿಕಾರ್ಜುನ ಗುಜ್ಜಳ, ಅಡಿವೆಪ್ಪ ಗಾಣಿಗೇರ, ಈರಣ್ಣ ಅಂಗಡಿ, ಶಿವಾನಂದ ಅವಡಿ, ಕರಿಯಪ್ಪ ಕೋಟೂರು, ವಿಜಯ ಪೂಜಾರ, ಶ್ರೀಕಾಂತ ಕಾಳೆ, ಯಲ್ಲಪ್ಪ ಗಾಣಿಗೇರ ಸೇರಿದಂತೆ ಅಧಿಕಾರಿಗಳು ಇದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.