ADVERTISEMENT

ಶರಿಪಜ್ಜನ ಜಾತ್ರೆಗೆ ಗುಡಗೇರಿ ಬಂಡಿ

ಗುರು ಗೋವಿಂದಭಟ್ಟರು ವಿದ್ಯೆ ಕಲಿಸಿದ ಕಲ್ಮಠವಿರುವ ತಾಣ ಗುಡಗೇರಿ

ವಾಸುದೇವ ಮುರಗಿ
Published 26 ಫೆಬ್ರುವರಿ 2026, 6:14 IST
Last Updated 26 ಫೆಬ್ರುವರಿ 2026, 6:14 IST
ಶಿಶುನಾಳ ಜಾತ್ರೆಗೆ ತೆರಳುವ ಗುಡಗೇರಿ ಬಂಡಿ (ಸಂಗ್ರಹ ಚಿತ್ರ)
ಶಿಶುನಾಳ ಜಾತ್ರೆಗೆ ತೆರಳುವ ಗುಡಗೇರಿ ಬಂಡಿ (ಸಂಗ್ರಹ ಚಿತ್ರ)   

ಗುಡಗೇರಿ: ಹಾವೇರಿ ಜಿಲ್ಲೆಯ ಶಿಶುನಾಳದಲ್ಲಿರುವ ಶರೀಫರ ಗದ್ದುಗೆಗೂ - ಕುಂದಗೋಳ ತಾಲ್ಲೂಕು ಗುಡಗೇರಿ ಕಲ್ಮಠಕ್ಕೂ ಗುರುಶಿಷ್ಯರ ಸಂಬಂಧ ಬೆಸೆದ ಭಾವೈಕ್ಯದ ಸಂಬಂಧವಿದೆ. ಫೆಬ್ರುವರಿ 26ರಂದು ಆರಂಭವಾದ ಶರೀಫಜ್ಜನ ಜಾತ್ರೆಗೆ ಪ್ರತಿವರ್ಷವೂ ತೆರಳುವ ಕಲ್ಮಠದ ಬಂಡಿಯು ಪವಿತ್ರ ಬಾಂಧವ್ಯದ ಸಂಕೇತವಾಗಿದೆ.

ಕಳಸದ ಗುರುಗೋವಿಂದಭಟ್ಟರ ಮನೆತನದವರು ಗುಡಗೇರಿಯ ಪುರಾತನ ಕಲ್ಮಠದ ಕಲ್ಲೇಶ್ವರನನ್ನು ಪೂಜಿಸುತ್ತಿದ್ದರು. ಗೋವಿಂದಭಟ್ಟರು ಈಶ್ವರ ಪೂಜೆ ನಂತರ ನೂರಾರು ಮಕ್ಕಳಿಗೆ ಈ ಕಲ್ಮಠದಲ್ಲಿಯೇ ವಿದ್ಯೆ ನೀಡುತ್ತಿದ್ದರು. ಶಿಶುನಾಳ ಶರೀಫರು ಇದೇ ಗುರುವಿನ ಬಳಿ -ವಿದ್ಯಾರ್ಜನೆಗಾಗಿ ಬಂದಾಗ ನೂರಾರು -ವಿಘ್ನಗಳ ಮಧ್ಯೆಯೇ ಶರೀಫರಿಗೆ ಗೋವಿಂದಭಟ್ಟರು ಜ್ಞಾನ ನೀಡಿದರು.

ಗುರುಗೋವಿಂದರು ಬ್ರಾಹ್ಮಣ ಜನಾಂಗಕ್ಕೆ ಸೇರಿದವರು, ಶರೀಫರು ಮುಸ್ಲಿಂ. ಆದ್ದರಿಂದ ಶರೀಫರ ವಿದ್ಯಾರ್ಜನೆ ಸಮಯದಲ್ಲಿ ಅನೇಕ ವಿಘ್ನಗಳು ಕಾರತೊಡಗಿದವು.

ADVERTISEMENT

ಆದರೆ, ಗುರುಗೋವಿಂದರು ಶರೀಫರ ಮೇಲೆ ಆಗಾಧ ಶಿಷ್ಯಪ್ರೇಮ ಬೆಳೆಸಿಕೊಂಡ ಕಾರಣ ತಮ್ಮ ಮಗನಂತೆ ಕಂಡರು. ತಮ್ಮ ಸಂಪ್ರದಾಯದ ಪ್ರಕಾರ ಜನಿವಾರ ಹಾಕಿದಾಗ, ಶರೀಫರು ಭಾವೋದ್ವೇಗದಿಂದ 'ಹಾಕಿದ ಜನಿವಾರವ ಸದ್ಗುರುನಾಥ ಹಾಕಿದ ಜನಿವಾರ...' ಎಂದು ಮನದುಂಬಿ ಹಾಡಿ ಹೊಗಳಿದರು.

ಹೀಗೆ ಗುರು-ಶಿಷ್ಯ ಸಂಬಂಧ ಅನೋನ್ಯಗೊಳಿಸಿದ ಮೂಲ ಕೇಂದ್ರವೇ ಗುಡಗೇರಿ ಕಲ್ಮಠ. ಇಂತಹ ಗುರು-ಶಿಷ್ಯರು ಅನೇಕ ಪವಾಡ ಮಾಡಿ ಜನರಲ್ಲಿ ಆಚ್ಚರಿ ಮೂಡಿಸಿದರು. ಶರೀಫರು ಅನೇಕ ಅನುಭವದ ತತ್ವ ಪದಗಳನ್ನು ರಚಿಸಿದ್ದಾರೆ. ಕಲ್ಮಠ ಕುರಿತು ತಮ್ಮ ಹಾಡಿನಲ್ಲಿ ‘ಗುಡಿಪೂರು ಕಲ್ಲೇಶ್ವರ’ ಎಂದು ಕೊಂಡಾಡಿದ್ದಾರೆ.

ಶಿಶುನಾಳದಲ್ಲಿ ಜಾತ್ರೆ ನಡೆಯಲಿದೆ. ಈ ಗುರು ಶಿಷ್ಯರ ಸವಿನೆನಪಿಗಾಗಿ ಕಲ್ಮಠ ಮಠದಿಂದ ಪ್ರತಿ ವರ್ಷ ಶಿಶುನಾಳ ಜಾತ್ರೆಗೆ ಗುಡಗೇರಿ ಜನತೆ ಬಂಡಿ ಕಟ್ಟಿಕೊಂಡು ಅಜ್ಜನ ಜಾತ್ರೆಗೆ ತೆರಳುತ್ತಾರೆ.

ಗ್ರಾಮದ ದಿ.ವಿಠಪ್ಪ ಮಾಳ್ವದಕರ ಹಾಗೂ ಅವರ ಸಂಗಡಿಗರು ಮೊದಲು ಅಜ್ಜನ ಜಾತ್ರೆಗೆ ಬಿದಿರಿನ ಚಕ್ಕಡಿ ಕಟ್ಟಿಕೊಂಡು ಅದರಲ್ಲಿ ಗೋವಿಂದರು ಹಾಗೂ ಶರೀಫರ ಭಾವಚಿತ್ರ ಇಟ್ಟು ಕೊಂಡು ಹೋಗುತ್ತಿದ್ದರು. ತದನಂತರ ಬಂಡಿಯನ್ನು ಕಟ್ಟಿ, ವಿಶೇಷವಾಗಿ ಆಲಂಕರಿಸಿ ಎತ್ತುಗಳನ್ನು ಹೂಡಿಕೊಂಡು, ಮಂಗಲವಾದ್ಯದೊಂದಿಗೆ ಶಿಶುನಾಳಕ್ಕೆ ತೆರಳುತ್ತಿದ್ದಾರೆ. ಈ ಪರಂಪರೆ ಸುಮಾರು 100 ವಸಂತಗಳನ್ನು ಕಂಡಿದೆ.

ಬಂಡಿಯನ್ನು ಭಜನಾ ಸಂಘದ ಯುವಕರು ನಿರ್ಮಿಸುತ್ತಾರೆ. ಬಂಡಿ ಹಿಂದೆ ರೊಟ್ಟಿ ಚಕ್ಕಡಿಯೂ ತೆರಳುತ್ತದೆ. ಜಾತ್ರೆಯಲ್ಲಿ ಹಸಿದು ಬಂದ ಜನರಿಗೆ ಫೆಬ್ರುವರಿ 26ರಂದು ರೊಟ್ಟಿ, ಖಾರದ ಚಟ್ನಿ ನೀಡಿ ಸಂತೃಪ್ತಿಪಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.