ADVERTISEMENT

ಹುಬ್ಬಳ್ಳಿ: ಶ್ರದ್ಧಾ ಭಕ್ತಿಯ ಹನುಮ ಜಯಂತಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2022, 5:06 IST
Last Updated 17 ಏಪ್ರಿಲ್ 2022, 5:06 IST
ಹುಬ್ಬಳ್ಳಿಯ ಕಮರಿಪೇಟೆಯ ಹನುಮಂತ ದೇವಸ್ಥಾನದಲ್ಲಿ ಶನಿವಾರ ತೊಟ್ಟಿಲೋತ್ಸವ ನಡೆಯಿತು
ಹುಬ್ಬಳ್ಳಿಯ ಕಮರಿಪೇಟೆಯ ಹನುಮಂತ ದೇವಸ್ಥಾನದಲ್ಲಿ ಶನಿವಾರ ತೊಟ್ಟಿಲೋತ್ಸವ ನಡೆಯಿತು   

ಹುಬ್ಬಳ್ಳಿ: ನಗರದಲ್ಲಿ ಹನುಮ ಜಯಂತಿಯನ್ನುಶನಿವಾರ ಅದ್ಧೂರಿಯಾಗಿ ಆಚರಿಸಲಾಯಿತು. ಈ ಬಾರಿ ಶನಿವಾರವೇ ಹನುಮ ಜಯಂತಿ ಬಂದಿರುವ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು.

ಬೆಳಿಗ್ಗೆ 5 ಗಂಟೆಯಿಂದಲೇ ಕಮರಿಪೇಟೆಯ ಹನುಮಮಂದಿರ, ಮರಾಠ ಗಲ್ಲಿ ಹನುಮಮಂದಿರ ಸೇರಿದಂತೆ ನಗರದ ವಿವಿಧ ಹನುಮ ದೇವಸ್ಥಾನದಲ್ಲಿ ಭಕ್ತರು ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು.

ಕೋವಿಡ್‌ ಕಾರಣ ಎರಡು ವರ್ಷಗಳಿಂದ ಹನುಮ ಜಯಂತಿ ಕಳೆಗುಂದಿತ್ತು. ಈ ವರ್ಷ ಪ್ರಕರಣಗಳ ಸಂಖ್ಯೆ ಇಳಿಕೆಯಾದ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಹನುಮ ಮಂದಿರಗಳಲ್ಲಿ ತೊಟ್ಟಿಲೋತ್ಸವ, ದೇವರ ಮೂರ್ತಿಗೆ ಬೆಣ್ಣೆ ಸೇರಿದಂತೆ ವಿವಿಧ ಪದಾರ್ಥಗಳನ್ನು ಬಳಸಿ ವಿಶೇಷ ಅಲಂಕಾರ ಮಾಡಿದ್ದರು. ಮರಾಠಗಲ್ಲಿ, ವಿದ್ಯಾನಗರದ ಓಣಿಗಳಲ್ಲಿರುವ ಹನುಮಂದಿರದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.

ಹನುಮ ಮೂರ್ತಿ ಮೆರವಣಿಗೆ: ಹನುಮ ಜಯಂತಿ ಅಂಗವಾಗಿ ಎಸ್‌.ಎಸ್‌.ಕೆ ತುಳಜಾಭವಾನಿ ದೇವಸ್ಥಾನ ಕೇಂದ್ರ ಪಂಚ ಸಮಿತಿ ಆಶ್ರಯದಲ್ಲಿ ಬೃಹತ್‌ ಹನುಮ ಮೂರ್ತಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ನೂರಾರು ಜನ ಭಕ್ತರು ಪಾಲ್ಗೊಂಡಿದ್ದರು. ಜೈ ಹನುಮ ಎಂದು ಘೋಷಣೆ ಕೂಗಿದರು. ಯುವಕರು ಹನುಮನ ಹಾಡುಗಳಿಗೆ ಹೆಜ್ಜೆ ಹಾಕಿದರು. ದಾಜೀಬಾನಪೇಟೆಯಿಂದ ಪ್ರಾರಂಭವಾದ ಮೆರವಣಿಗೆ ದುರ್ಗದ ಬೈಲ್, ನ್ಯೂ ಮೈಸೂರು ಸ್ಟೋರ್ಟ್‌, ಮಹಾವೀರ ಗಲ್ಲಿ ಮೂಲಕ ಸಾಗಿ ದಾಜೀಬಾನಪೇಟೆಯ ತುಳಜಾಭವಾನಿ ದೇವಸ್ಥಾನಕ್ಕೆ ತಲುಪುವ ಮೂಲಕ ಅಂತ್ಯವಾಯಿತು.

ಗೋಪನಕೊಪ್ಪದ ಮಾರುತೇಶ್ವರ ದೇವರ ರಥೋತ್ಸವ ಸಡಗರದಿಂದ ನಡೆಯಿತು. ಪಾಲಿಕೆಯ ಸದಸ್ಯ ಶಿವಕುಮಾರ ರಾಯನಗೌಡ್ರ, ಪಿ.ಕೆ.ರಾಯನಗೌಡ್ರ ಹಾಗೂ ಗೋಪನಕೊಪ್ಪ, ದೇವಾಂಗಪೇಟೆ, ಬೆಂಗೇರಿ, ನಾಗಶೆಟ್ಟಿಕೊಪ್ಪದ ಭಕ್ತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.