ರೈಲು
– ಪ್ರಜಾವಾಣಿ ಚಿತ್ರ
ಹುಬ್ಬಳ್ಳಿ: ಹರಿಪ್ರಿಯಾ ಎಕ್ಸ್‌ಪ್ರೆಸ್ ರೈಲಿನಲ್ಲಿ (17415) ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರ ₹2.90 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ವಸ್ತುಗಳಿದ್ದ ಬ್ಯಾಗ್ ಕಳ್ಳತನವಾದ ಘಟನೆ ನಡೆದಿದೆ.
‘ಗೋವಾ ಮೂಲದ ಮಾಜಿ ಯೋಧ ಶ್ರೀನಿವಾಸಲು ವೆಂಕಟರಾಮಯ್ಯ ಎಂಬುವರು ಮಗಳೊಂದಿಗೆ ಕಡಪಾದಿಂದ ಲೋಂಡಾ ನಿಲ್ದಾಣಕ್ಕೆ ಸ್ಲೀಪರ್ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದರು. ರಾತ್ರಿ ವೇಳೆ ಮಲಗಿದ್ದಾಗ ಅಪರಿಚಿತರು ಬ್ಯಾಗ್‌ನಲ್ಲಿದ್ದ ಚಿನ್ನಾಭರಣ ಹಾಗೂ ವಸ್ತುಗಳನ್ನು ಕದ್ದು ಶೌಚಾಲಯದಲ್ಲಿ ಬ್ಯಾಗ್ ಎಸೆದು ಪರಾರಿಯಾಗಿದ್ದಾರೆ. ರೈಲು ಹುಬ್ಬಳ್ಳಿ ನಿಲ್ದಾಣ ತಲುಪಿದಾಗ ಶ್ರೀನಿವಾಸಲು ಎದ್ದು ನೋಡಿದಾಗ ಬ್ಯಾಗ್ ಕಳವು ಬಗ್ಗೆ ತಿಳಿದಿದೆ. ₹1.50 ಲಕ್ಷ ಮೌಲ್ಯದ 15 ಗ್ರಾಂ ಚಿನ್ನದ ಸರ, ₹1.37 ಲಕ್ಷ ಬೆಲೆ ಬಾಳುವ ಎರಡು ಮೊಬೈಲ್ ಫೋನ್, ₹3,500 ನಗದು ಸೇರಿ ₹2,90,500 ಮೌಲ್ಯದ ಚಿನ್ನಾಭರಣ ಹಾಗೂ ವಸ್ತುಗಳು ಕಳ್ಳತನವಾಗಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೈಲಿನಲ್ಲಿ ಕಳವು: ಮೈಸೂರು– ಬೆಳಗಾವಿ ಎಕ್ಸ್‌ಪ್ರೆಸ್ ರೈಲಿನಲ್ಲಿ (17301) ₹65 ಸಾವಿರ ಬೆಲೆ ಬಾಳುವ ಆಭರಣ, ವಸ್ತುಗಳಿದ್ದ ಮಹಿಳೆಯೊಬ್ಬರ ವ್ಯಾನಿಟ್ ಬ್ಯಾಗ್ ಕಳ್ಳತನವಾದ ಕುರಿತು ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು– ಬೆಳಗಾವಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬೆಳಗಾವಿಯ ಅಲಕಾ ಪ್ರಕಾಶ ಕುಲಕರ್ಣಿ ಎಂಬುವರು, ರಾತ್ರಿ ವೇಳೆ ಸೀಟಿನಲ್ಲಿ ಮಲಗಿದ್ದರು. ಈ ವೇಳೆ ಅಪರಿಚಿತರು ವ್ಯಾನಿಟಿ ಬ್ಯಾಗ್ ಕದ್ದೊಯ್ದಿದ್ದಾರೆ. ₹40 ಸಾವಿರ ನಗದು, ₹25 ಸಾವಿರ ಮೌಲ್ಯದ ಮೊಬೈಲ್ ಫೋನ್ ಸೇರಿದಂತೆ ₹66,700 ಮೌಲ್ಯದ ವಸ್ತುಗಳ ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಣ ದೋಚಿ ಪರಾರಿ: ಹುಬ್ಬಳ್ಳಿ ನಗರ ಹೊರವಲಯದ ಹುಬ್ಬಳ್ಳಿ–ಗದಗ ರಿಂಗ್‌ರೋಡ್ ಬಳಿ ಮೂವರು ದುಷ್ಕರ್ಮಿಗಳು ಲಾರಿ ಚಾಲಕನಿಂದ ₹30,500 ಹಣ ಕಿತ್ತುಕೊಂಡು ಪರಾರಿಯಾದ ಘಟನೆ ನಡೆದಿದೆ.
‘ಆಂಧ್ರಪ್ರದೇಶದ ಕರಿ ಉಮಾಮಹೇಶ್ ಎಂಬುವರು ಹುಬ್ಬಳ್ಳಿಯಿಂದ ಗದಗ ಕಡೆಗೆ ಲಾರಿ ತೆಗೆದುಕೊಂಡು ಹೋಗುವಾಗ ಹೆದ್ದಾರಿಯ ಕುಂದಗೋಳ ಬಸ್ ನಿಲ್ದಾಣದ ಬಳಿ ಸ್ಕೂಟರ್‌ನಲ್ಲಿ ಬಂದ ದುಷ್ಕರ್ಮಿಗಳು, ಲಾರಿ ಟಯರ್ ಪಂಕ್ಚರ್ ಆಗಿದೆ ಎಂದು ಸುಳ್ಳು ಹೇಳಿ ಲಾರಿ ನಿಲ್ಲಿಸಿದ್ದಾರೆ. ಈ ವೇಳೆ ಕೆಳಗಿಳಿದ ಕರಿ ಉಮಾಮಹೇಶ್ ಅವರಿಂದ ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.