ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯ ಅರ್ಬನ್ ಓಯಾಸಿಸ್ ಮಾಲ್‌ನ ಮೊದಲ ಮಹಡಿಯಲ್ಲಿ ಬಗೆ ಬಗೆಯ ಸೊಪ್ಪು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ.
‘ಸಹಜ ಸಮೃದ್ಧ’, ಓಯಾಸಿಸ್ ಮಾಲ್ ಹಾಗೂ ಜಿಐಜಡ್ ಜರ್ಮನ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ಈ ಸೊಪ್ಪು ಮೇಳದಲ್ಲಿ ಪಾಲಕ್, ಮೆಂತೆ, ಪುಂಡಿ, ಬಸಳೆ, ಹೊನಗೊನ್ನೆ, ಹರಿವೆ, ದಂಟಿನ ಸೊಪ್ಪು ಸೇರಿದಂತೆ ಹಲವು ಬಗೆಯ ಸೊಪ್ಪುಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿದೆ.
ಇದರೊಂದಿಗೆ ಆರೋಗ್ಯಕ್ಕೆ ಪೂರಕವಾದ ಔಷಧಿ ಗುಣಗಳನ್ನು ಹೊಂದಿರುವ ಬುಡ್ಡೆ ಗಿಡ, ಉತ್ರಾಣಿ, ನೆಲ ಬಸಳೆ, ಹಸಿರು ಬಸಳೆ ಗಿಡ ಸೇರಿದಂತೆ ನೆಗಡೆ, ಶೀತ, ಮಧುಮೇಹ ನಿವಾರಿಸುವಂತಹ ಹಾಗೂ ಮನೆಯ ಮುಂದೆ ಪ್ಲಾಸ್ಟಿಕ್ ಪಾಟ್‌ಗಳಲ್ಲಿ ಬೆಳೆಸುವಂತಹ ಗಿಡಗಳ ಪ್ರದರ್ಶನವನ್ನೂ ಹಮ್ಮಿಕೊಳ್ಳಲಾಗಿದೆ. ಇವುಗಳೊಂದಿಗೆ ದ್ವಿದಳ ಧಾನ್ಯ, ಸಿರಿಧಾನ್ಯ ಹಾಗೂ ಮಸಾಲೆ ಪದಾರ್ಥಗಳ ಮಾರಾಟವೂ ಇಲ್ಲಿದೆ.
ಕೃಷಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ರವಿ ವೈ., ಹಾಗೂ ನಗರದ ರೋಟರಿ ಕ್ಲಬ್ ಹುಬ್ಬಳ್ಳಿ ಮಾಜಿ ಅಧ್ಯಕ್ಷ ಬಾಪುಗೌಡ್ರು ಬಿರಾದರ್ ಅವರು ಶನಿವಾರ ಸೊಪ್ಪು ಮೇಳವನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ರವಿ ವೈ. ಅವರು, ’ಶೇ 40ರಿಂದ ಶೇ 60 ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಯುವಜನತೆ ನಮ್ಮ ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ಮರೆತು, ಜಂಕ್ ಫುಡ್‌ಗಳ ದಾಸರಾಗಿದ್ದಾರೆ. ಪರಿಣಾಮವಾಗಿ ಬಹುತೇಕರಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಮಧುಮೇಹ ಕಾಣಿಸಿಕೊಳ್ಳುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ನಮ್ಮ ನಿತ್ಯದ ಊಟದಲ್ಲಿ ಸೊಪ್ಪು ಬಳಸುವುದರಿಂದ ದೇಹಕ್ಕೆ ಪೋಷಕಾಂಶ ದೊರೆಯುತ್ತದೆ. ರೋಗ ನಿರೋಧಕ ಶಕ್ತಿಯೂ ವೃದ್ಧಿಸುತ್ತದೆ. ಮನೆಯ ಟೆರೆಸ್ ಗಾರ್ಡ್‌ನಲ್ಲಿಯೇ ದಿನ ಬಳಕೆಗೆ ಅಗತ್ಯವಾದ ಸೊಪ್ಪು ಬೆಳೆಯುವ ಮೂಲಕ ಉತ್ತಮ ಆರೋಗ್ಯ ಕಾಯ್ದುಕೊಳ್ಳಬಹುದು’ ಎಂದು ಸಲಹೆ ನೀಡಿದರು.
ಬಾಪುಗೌಡ್ರು ಬಿರಾದರ್ ಅವರು, ‘ಯುವಜನತೆ ಸೊಪ್ಪುಗಳ ಬಗ್ಗೆ ತಿಳಿದುಕೊಳ್ಳಬೇಕು. ಸೊಪ್ಪುಗಳನ್ನು ನಿತ್ಯ ಆಹಾರದ ಭಾಗವಾಗಿ ಬಳಸಬೇಕು’ ಎಂದು ಸಲಹೆ ನೀಡಿದರು.
ಮೇಳವು ಭಾನುವಾರವೂ ಬೆಳಿಗ್ಗೆ 10ರಿಂದ ರಾತ್ರಿ 8ರ ತನಕ ನಡೆಯಲಿದೆ.
ರೈತ ಮಹಿಳೆಯರಾದ ಪ್ರೇಮಾ ಲೋಕುಂಡೆ, ಪ್ರಗತಿಪರ ರೈತರಾದ ವೀರನಗೌಡ ಪಾಟೀಲ್, ರಾಥೋಡ್ ಹಾಗೂ ‘ಸಹಜ ಸಮೃದ್ಧ’ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.