
ಗುಡಗೇರಿ: ಹಿಂದೂ ಧರ್ಮವು ಒಂದು ವಿಶಾಲ ಮತ್ತು ವೈವಿಧ್ಯಮಯ ಧರ್ಮವಾಗಿದೆ. ಇದು ಜನರಿಗೆ ಆಧ್ಯಾತ್ಮಿಕ ಮಾರ್ಗದರ್ಶನ ಮತ್ತು ಜೀವನದಲ್ಲಿ ಅರ್ಥವನ್ನು ನೀಡುತ್ತದೆ ಎಂದು ಕುಂದಗೋಳ ಕಲ್ಯಾಣಪುರದ ಶ್ರೀ ಬಸವಣಜ್ಜನ ಹೇಳಿದರು.
ಗ್ರಾಮದ ಹಿಂದೂ ಸಮ್ಮೇಳನಾ ಆಯೋಜನಾ ಸಮಿತಿ ಗ್ರಾಮದ ಮಾಸಣಕೆಮ್ಮ ದೇವಸ್ಥಾನ ಆವರ್ಣದಲ್ಲಿ ಮಂಗಳವಾರ ವಿರಾಟ್ ಹಿಂದೂ ಸಮ್ಮೇಳನ ಶೋಭಾ ಯಾತ್ರೆ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.
ವಿಶ್ವದ ಅತ್ಯಂತ ಹಳೆಯ ಧರ್ಮಗಳಲ್ಲಿ ಹಿಂದೂ ಧರ್ಮ ಒಂದಾಗಿದೆ. ಹಿಂದೂ ಧರ್ಮವು ವಿವಿಧ ನಂಬಿಕೆಗಳು, ಆಚರಣೆಗಳು ಮತ್ತು ತತ್ವಶಾಸ್ತ್ರಗಳನ್ನು ಒಳಗೊಂಡಿದೆ ನಮ್ಮ ಸಂತರು, ಶರಣರು, ಋಷಿಮುನಿಗಳು ತೋರಿದ ದಾರಿಯಲ್ಲಿ ನಾವೆಲ್ಲ ಸಾಗೋಣ ಎಂದರು.
ಪ್ರಾಂತ ಕಾರ್ಯಕಾರಣಿ ಸದಸ್ಯ ರವೀಂದ್ರಜೀ ಮಾತನಾಡಿ, ವಿಶ್ವದಲ್ಲಿ ದೇಶಕ್ಕೆ ತಾಯಿ ಸ್ವರೂಪ ನೀಡಿದ್ದು ನಮ್ಮ ದೇಶವಾಗಿದೆ. ಭಾರತ ಮಾತಾಕಿ ಜೈ ಎಂದು ಕರೆಯುತ್ತೇವೆ. ಈ ದೇಶದಲ್ಲಿ ಜನಿಸಿದವರು ಎಲ್ಲರೂ ಹಿಂದುಗಳೇ. ಅನ್ಯ ದೇಶದ ಸಂಸ್ಕೃತಿಯನ್ನು ಅನುಕರಣೆ ಮಾಡದೆ. ನಮ್ಮ ಸನಾತನ ಧರ್ಮದ ಸಂಸ್ಕೃತಿ, ಆಚಾರ, ವಿಚಾರಗಳನ್ನು ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಅತ್ತಿಗೇರಿಯ ಅದ್ವೈತಾನಾಂದ ಸ್ವಾಮೀಜಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜುನಾಥ (ರಾಜಣಾ) ಪುರದ ವಹಿಸಿದ್ದರು.
ಇದಕ್ಕೂ ಮುನ್ನ ಮಾಸಣಕೆಮ್ಮ ದೇವಸ್ಥಾನದಿಂದ ಶೋಭಾ ಯಾತ್ರೆ ಆರಂಭಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮಾರ್ಗದುದ್ದಕ್ಕೂ ಜೈ ಘೋಷಗಳು ಮೊಳಗಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.